More

  ಕಾಟಾಚಾರಕ್ಕೆ ಸಸಿಗಳ ನಾಟಿ

  ಶಿರಸಿ: ಅರಣ್ಯ ಇಲಾಖೆಯಿಂದ ಸಸಿ ನೆಡಲು ತೋಡುತ್ತಿರುವ ಹೊಂಡಗಳು ತೀರಾ ಚಿಕ್ಕದಾಗಿದ್ದು, ಅವುಗಳಲ್ಲಿ ಗಿಡಗಳ ಬುಡ ಹಿಡಿಯುವುದೂ ಕಷ್ಟವಿದೆ. ಇಲಾಖೆ ಕಾಟಾಚಾರಕ್ಕೆ ಸಸಿ ನೆಡುವ ಕಾರ್ಯ ಮಾಡುತ್ತಿದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ದೂರಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಳೆಗಾಲದ ವೇಳೆ ಸಸಿ ನೆಡಲು ಈಗಿಂದ ಅರಣ್ಯ ಇಲಾಖೆ ಗುಂಡಿ ತೋಡುವ ಕಾರ್ಯ ಮಾಡುತ್ತಿದೆ. ಒಂದೂವರೆ ಅಡಿ ಆಳದ ಗುಂಡಿಗಳ ಬದಲು ಅರ್ಧ ಅಡಿ ಆಳದ ಗುಂಡಿ ತೋಡಿ ಎಲ್ಲರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಸಾಕಷ್ಟು ಕಡೆ ಗುಂಡಿ ತೋಡಿದ್ದು, ಎಲ್ಲಿಯೂ ನಿಗದಿತ ಆಳದ ಗುಂಡಿಗಳಿಲ್ಲ. ಅದರಲ್ಲಿ ಗಿಡದ ಬುಡ ಸಹ ಇಡಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ರಸ್ತೆಗೆ ಮಣ್ಣು ಹಾಕಲು ಸಾರ್ವಜನಿಕರಿಗೆ ಅವಕಾಶ ನೀಡುತ್ತಿಲ್ಲ. ಬಡ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಆದರೆ, ಇಲಾಖೆಯೊಳಗೇ ನಡೆಯುತ್ತಿರುವ ಇಂಥ ಅವ್ಯವಹಾರದ ಬಗ್ಗೆ ಸುಮ್ಮನಿರುವುದೇಕೆ? ಗುಂಡಿ ತೋಡಿರುವುದಕ್ಕೆ ಬಿಲ್ ಪಾವತಿಸಲಾಗಿದೆಯೇ? ಇಲ್ಲವೇ? ಎಂಬ ಬಗ್ಗೆ ತಾಲೂಕು ಪಂಚಾಯಿತಿಗೆ ತಕ್ಷಣ ಮಾಹಿತಿ ನೀಡಬೇಕು. ನಿಗದಿತ ಗುರಿ, ತೆಗೆದ ಹೊಂಡಗಳ ಮಾಹಿತಿಯನ್ನೂ ಕೊಡಬೇಕು ಎಂದು ಸೂಚಿಸಿದರು.

  ತಾಲೂಕಲ್ಲಿ 6,600 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ನಷ್ಟವಾದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ನೀಡಲಾಗಿದೆ. ಆದರೆ, ಕೊಳೆ ರೋಗಕ್ಕೆ ಈವರೆಗೆ ಪರಿಹಾರ ಬಿಡುಗಡೆಯಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾಹಿತಿ ನೀಡಿದರು. ಫೆ. 1 ರಿಂದ 3ರವರೆಗೆ ಶಿರಸಿಯಲ್ಲಿ ಇಲಾಖೆ ವತಿಯಿಂದ ಬೃಹತ್ ಹೂವಿನ ಮೇಳ ಆಯೋಸಿಸಲಾಗುತ್ತಿದೆ ಎಂದರು.

  ಕಂದಾಯ ಇಲಾಖೆಯ ಡಿ.ಆರ್. ಬೆಳ್ಳಿಮನೆ, ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ, ಪಂಡಿತ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಗಜಾನನ ಭಟ್ಟ ಇಲಾಖೆ ಮಾಹಿತಿ ನೀಡಿದರು. ಈ ವೇಳೆ ತಾಲೂಕು ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಫ್.ಜಿ. ಚಿನ್ನಣ್ಣವರ ಇದ್ದರು.

  ಕಳೆದ ಬಾರಿ ಮಂಗನ ಕಾಯಿಲೆ ಕಾರಣ ನೀಡಿ ಬನವಾಸಿಯಲ್ಲಿ ಕದಂಬೋತ್ಸವ ಆಚರಣೆ ಸ್ಥಗಿತ ಮಾಡಲಾಗಿತ್ತು. ಈ ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಕದಂಬೋತ್ಸವ ದಿನ ಈವರೆಗೆ ಘೊಷಣೆಯಾಗಿಲ್ಲ. ಫೆಬ್ರವರಿಯಲ್ಲಿ ಸರ್ಕಾರ ಉತ್ಸವ ಆಚರಣೆ ಮಾಡಬೇಕು.
  | ಶ್ರೀಲತಾ ಕಾಳೇರಮನೆ ತಾಪಂ ಅಧ್ಯಕ್ಷೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts