ಕಾಟಾಚಾರಕ್ಕೆ ನಡೆದ ಕಲಾಮೇಳ

ಚಾಮರಾಜನಗರ: ನೆಹರು ಯುವ ಕೇಂದ್ರದ ವತಿಯಿಂದ ತಾಲೂಕಿನ ಹಳೇ ಬ್ಯಾಡಮೂಡ್ಲು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕಲಾಮೇಳ ಕಾಟಾಚಾರಕ್ಕೆ ಎಂಬಂತೆ ನಡೆಯಿತು.

ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕಲಾಮೇಳದಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯ ಪ್ರತಿಭೆಗಳನ್ನು ಕಡೆಗಣಿಸಲಾಗಿತ್ತು. ಇದರಿಂದ ಜಿಲ್ಲೆಯ ಯಾವೊಬ್ಬ ಪ್ರತಿಭೆಗಳು ಕಾರ್ಯಕ್ರಮದಲ್ಲಿ ಕಾಣಿಸಲಿಲ್ಲ.

ನೆಹರು ಯುವ ಕೇಂದ್ರವು ಸೂಕ್ತ ಪ್ರಚಾರ ಮಾಡದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಭೆಗಳು ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲದೆ, ಶಾಮಿಯಾನವನ್ನು ಹೊರತುಪಡಿಸಿದರೆ ವೇದಿಕೆಯನ್ನೂ ನಿರ್ಮಿಸಿರಲಿಲ್ಲ. ಜತೆಗೆ ಧ್ವನಿವರ್ಧಕದ ವ್ಯವಸ್ಥೆ ಇರದ ಕಾರಣ ಗಣ್ಯರ ಭಾಷಣ ಸಭಿಕರಿಗೆ ಕೇಳಿಸುತ್ತಿರಲಿಲ್ಲ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗ್ರಾಮದಲ್ಲಿ ಕಳೆದ ಒಂದು ವಾರದಿಂದಲೂ ಎನ್‌ಎಸ್‌ಎಸ್ ಶಿಬಿರ ನಡೆಯುತ್ತಿದ್ದು ಇಲ್ಲಿನ ಶಿಬಿರಾರ್ಥಿಗಳನ್ನೇ ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿತ್ತು. ಅಲ್ಲದೆ, ಈ ಶಿಬಿರಾರ್ಥಿಗಳೇ ಕಾರ್ಯಕ್ರಮದಲ್ಲಿಯೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರವು ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಕಾರ್ಯಕ್ರಮ ಆಯೋಜಕರ ನಿರ್ಲಕ್ಷೃದಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಇಂತಹ ಕಾರ್ಯಕ್ರಮದ ಬಗ್ಗೆ ನಿಗಾವಹಿಸಬೇಕಿದೆ.