ಕಾಚರಕನಹಳ್ಳಿ ವಾರ್ಡ್​ನೆಲ್ಲೆಡೆ 10 ದಿನದಲ್ಲಿ ಕಾವೇರಿ

ಬೆಂಗಳೂರು: ಕಸ ಮತ್ತು ಕುಡಿಯುವ ನೀರು- ಕಾಚರಕನಹಳ್ಳಿ ವಾರ್ಡ್​ನ ನಿವಾಸಿಗಳು ಈ ಎರಡೂ ಸಮಸ್ಯೆಗಳಿಂದ ಮುಕ್ತಿ ಹೊಂದುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ನೀರಿನ ಹೊಳೆ ಹರಿದರೆ, ಅತ್ಯಾಧುನಿಕ ತಂತ್ರಜ್ಞಾನದ ಕಸಗುಡಿಸುವ ಯಂತ್ರದ ನೆರವಿನಿಂದ ತ್ಯಾಜ್ಯ ವಿಲೇವಾರಿಯಾಗಲಿದೆ.

ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಕಾಚರಕನಹಳ್ಳಿ ವಾರ್ಡ್​ನಲ್ಲಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ನೀರು, ಕಸ, ಟ್ರಾಫಿಕ್ ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಲ್ಲಿ ಯಶಸ್ವಿಯಾಯಿತು. ಪಾಲಿಕೆ ವಿಪಕ್ಷ ನಾಯಕ, ಕಾಪೋರೇಟರ್ ಪದ್ಮನಾಭ ರೆಡ್ಡಿ ವಾರ್ಡ್ ಅಭಿವೃದ್ಧಿಗೆ ಹಮ್ಮಿಕೊಂಡ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ದುರ್ಗಾಪರಮೇಶ್ವರಿ ರಸ್ತೆಯ ನಾಗರಾಜ್, ಆಯಿಲ್ ಮಿಲ್ ರಸ್ತೆಯ ಮುರುಳೀಧರ್ ಸೇರಿ ಹಲವರು, ಜಲಮಂಡಳಿ ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ವಾರಕ್ಕೆ 2 ದಿನ ತಲಾ ಒಂದೂವರೆ ಗಂಟೆ ನೀರು ಬಿಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಅದಕ್ಕೆ ನಿರ್ದಿಷ್ಟ ಸಮಯವನ್ನಾದರೂ ನಿಗದಿ ಮಾಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ, ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಅಂದಾಜು 46 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದ ಜಿಕೆವಿಕೆಯಿಂದ ರಿಂಗ್ ರಸ್ತೆಯಲ್ಲಿರುವ ಜೋಡಿ ಟ್ಯಾಂಕ್​ಗೆ ಬೃಹತ್ ಪೈಪ್ ಸಂಪರ್ಕ ನೀಡಲಾಗಿದೆ. ಹತ್ತು ದಿನದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ಸುದ್ದಿ ಸಂಪಾದಕ ರಾಜಶೇಖರ ಜೋಗಿನ್ಮನೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಸಿ. ರವಿಕುಮಾರ್, ಜಲಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಛಲಪತಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಎಂ. ಚನ್ನಬಸವಯ್ಯ, ಬಿಬಿಎಂಪಿ ಆರೋಗ್ಯ ಅಧಿಕಾರಿ ಜಿ. ಹನುಮಂತಪ್ಪ, ಬೆಸ್ಕಾಂ ಸಹಾಯಕ ಇಂಜಿನಿಯರ್ ವೆಂಕಟೇಶ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕಸಮುಕ್ತ ವಾರ್ಡ್ ನಿರ್ಮಾಣ

ಕಸ ಎತ್ತಲು ಪೌರಕಾರ್ವಿುಕರು ಆಗಮಿಸುತ್ತಿಲ್ಲ ಎಂದು ಕಾಚರಕನ ಹಳ್ಳಿಯ ನಿವಾಸಿ ಗೋಪಾಲಕೃಷ್ಣ ಆಚಾರ್ ಸೇರಿ ಹಲವರು ಅಳಲು ತೋಡಿಕೊಂಡರು. ಈ ಹಿಂದೆ ವಾರ್ಡ್​ನಲ್ಲಿ 165 ಪೌರಕಾರ್ವಿುಕರಿದ್ದರು. ಬಳಿಕ ಸರ್ಕಾರ 700 ಜನಕ್ಕೆ ತಲಾ ಒಬ್ಬ ಪೌರಕಾರ್ವಿುಕ ಎಂಬ ನಿಯಮ ರೂಪಿಸಿದ್ದರಿಂದ ಪೌರಕಾರ್ವಿುಕರ ಸಂಖ್ಯೆ 100ಕ್ಕೆ ಇಳಿಯಿತು. ಹೀಗಾಗಿ ಕಸ ವಿಲೇವಾರಿ ಸವಾಲಾಗಿದೆ. ಹೆಣ್ಣೂರು, ಕಮ್ಮನಹಳ್ಳಿ, ಸಿಎಂಆರ್ ಹಾಗೂ ನೆಹರು ರಸ್ತೆ ಸೇರಿ ಹಲವೆಡೆ ಕಸ ಗುಡಿಸುವ ಯಂತ್ರ ಕಾರ್ಯ ಆರಂಭಿಸಲಿದೆ ಎಂದು ಕಾಫೋರೇಟರ್ ತಿಳಿಸಿದರು.

ಮೈದಾನ ನಿರ್ವಣಕ್ಕೆ ಜಾಗದ ಕೊರತೆ

ವಾರ್ಡ್​ನಲ್ಲಿ ಆಟದ ಮೈದಾನ ನಿರ್ವಿುಸಬೇಕೆಂಬ ಕನಸು ನನಗಿದೆ. ಆದರೆ, ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ. ಆರ್.ಟಿ. ನಗರದ ಎಚ್​ಎಂಟಿ ಬಡಾವಣೆ, ರಾಮಮೂರ್ತಿನಗರ, ಐಟಿಐ ಕಾಲನಿ ಹಾಗೂ ಬಾಣಸವಾಡಿಯಲ್ಲಿ ಮಾತ್ರ ಆಟದ ಮೈದಾನವಿದೆ. ಬಿಡಿಎ ಬಡಾವಣೆ ನಿರ್ವಿುಸುವಾಗ ಆಟದ ಮೈದಾನಕ್ಕೆ ಸ್ಥಳಾವಕಾಶ ಒದಗಿಸಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿ ಕಾಚರಕನಹಳ್ಳಿ ಕೆರೆಯ ಸಮೀಪ ಶ್ರೀರಾಮಮಂದಿರ ಆಟದ ಮೈದಾನವನ್ನು ರೂಪಿಸಿಕೊಂಡಿದ್ದೇವೆ ಎಂದು ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಮಾಹಿತಿ ನೀಡಿದರು.

ವಾರಕ್ಕೆ ಮೂರು ದಿನ ನೀರು ಪೂರೈಕೆ

ಅಮೃತ್ ಯೋಜನೆಯಡಿ ನೀರಿನ ಪೈಪ್ ಸಂಪರ್ಕದ ಕಾಮಗಾರಿ ವಾರದ ಹಿಂದಷ್ಟೇ ಮುಗಿದಿದ್ದು, ಪ್ರಾಯೋಗಿಕವಾಗಿ ನೀರು ಬಿಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಣ್ಣು ಮಿಶ್ರಿತ ನೀರು ಬಂದಿರುವುದು ಸ್ವಾಭಾವಿಕ. ಮುಂದಿನ ದಿನಗಳಲ್ಲಿ ಶುದ್ಧ ನೀರು ಬರಲಿದೆ. ನಂತರದಲಿ ವಾರಕ್ಕೆ 3 ದಿನ ಹಾಗೂ ಹೆಚ್ಚು ಸಮಯ ನೀರು ಬಿಡುವುದಾಗಿ ಪದ್ಮನಾಭ ರೆಡ್ಡಿ ತಿಳಿಸಿದರು.

ಅಂತಿಮ ಹಂತದಲ್ಲಿ ಗ್ಯಾಸ್ ಪೈಪ್​ಲೈನ್

ಒತ್ತಡದ ಪರೀಕ್ಷೆ, ಒಎಫ್​ಸಿ ಕೇಬಲ್ ಅಳವಡಿಕೆ ಸೇರಿ ಹಲವು ಅಡೆತಡೆಗಳು ಗ್ಯಾಸ್ ಸಂಪರ್ಕ ವಿಳಂಬಕ್ಕೆ ಕಾರಣವಾಗಿವೆ. ಶೇ.90 ಕಾಮಗಾರಿ ಮುಗಿದಿದ್ದು, ಶೀಘ್ರವೇ ಪೈಪ್ ಮೂಲಕ ಗ್ಯಾಸ್ ಸಂಪರ್ಕ ಹೊಂದಬಹುದು ಎಂದು ರೆಡ್ಡಿ ತಿಳಿಸಿದರು.

ಅಪರಾಧ ಚಟುವಟಿಕೆಗಳಿಗೆ ಸಿಸಿ ಕ್ಯಾಮರಾ ನಿಗಾ

ಆರ್​ಬಿಐ ಬಡಾವಣೆಯಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದ್ದರಿಂದ ಸಿಸಿ ಕ್ಯಾಮರಾ ಅಳವಡಿಸಿದ್ದೆವು. ಇದೀಗ ರಾಮಯ್ಯ ಬಡಾವಣೆ, ಕಮ್ಮನಹಳ್ಳಿ ಬಡಾವಣೆ, ಆಯಿಲ್ ಮಿಲ್ ಮುಖ್ಯ ರಸ್ತೆ ಸೇರಿ ಹಲವೆಡೆ ಸಿಸಿ ಕ್ಯಾಮರಾ ಹಾಕಲಾಗುತ್ತದೆ. ಪೊಲೀಸರು ಇದರ ಲಿಂಕ್​ಗಳನ್ನು ಹೊಂದುವ ಮೂಲಕ ಠಾಣೆಯಲ್ಲಿಯೇ ಕುಳಿತು ಅಪರಾಧ ಚಟುವಟಿಕೆ ಬಗ್ಗೆ ನಿಗಾವಹಿಸಬಹುದು. ಈ ವ್ಯವಸ್ಥೆ 8- 9 ತಿಂಗಳೊಳಗೆ ಜಾರಿಯಾಗಲಿದೆ ಎಂದು ರೆಡ್ಡಿ ತಿಳಿಸಿದರು.

ಸ್ಥಳದಲ್ಲೇ ಐವರಿಗೆ ಬಹುಮಾನ

ಜನತಾದರ್ಶನದಲ್ಲಿ ಭಾಗವಹಿಸಿದವರಿಗೆ ಸ್ಥಳದಲ್ಲೇ ಬಹುಮಾನ ಗೆಲ್ಲುವ ಅವಕಾಶವನ್ನು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಕಲ್ಪಿಸಿತ್ತು. ಕಾಪೋರೇಟರ್ ಪದ್ಮನಾಭ ರೆಡ್ಡಿ ಚೀಟಿ ಎತ್ತುವ ಮೂಲಕ ಐವರನ್ನು ಆಯ್ಕೆ ಮಾಡಿದರು. ಲಕ್ಷ್ಮಣ್ ಜೋಗಿ, ಸಿ. ಸುರೇಶ್, ಮುನಿಸ್ವಾಮಿ, ಎನ್. ನಾಗರಾಜ್ ಹಾಗೂ ರಮಣಯ್ಯ ಬಹುಮಾನ ಪಡೆದ ಅದೃಷ್ಟಶಾಲಿಗಳು.

ಹಣ ಪಡೆದರೆ ಎತ್ತಂಗಡಿ

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ ಪದ್ಮನಾಭ ರೆಡ್ಡಿ, 110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ನೀಡುವ ಯೋಜನೆ ಪ್ರಗತಿಯಲ್ಲಿದೆ. ಇನ್ನು ಕಾವೇರಿ ನೀರಿನ ಸಂಪರ್ಕಕ್ಕೆ ಮೋಟಾರು ಅಳವಡಿಸುವುದು ಅಪರಾಧ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ನೀರು ಬಿಡಲು ಹಣ ಕೇಳುತ್ತಿರುವ ವಾಲ್ವ್​ಮೆನ್ ಪ್ರಕಾಶ್ ಹಾಗೂ ವೆಂಕಟೇಶ್ ಬಳಿಯಿರುವ ಕೀ ಪಡೆದು, ಬೇರೆಯವರನ್ನು ನೇಮಕ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿದೇಶಿ ಪ್ರಜೆಗಳ ಉಪಟಳ

ವಿದೇಶದಿಂದ ವಿದ್ಯಾಭ್ಯಾಸ, ಉದ್ಯೋಗಕ್ಕೆಂದು ಬಂದಿರುವವರು ಇಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದು ಕಮ್ಮನಹಳ್ಳಿ ನಿವಾಸಿ ಮೇರಿ ದೂರಿದರು. ಈ ಕುರಿತು ಪ್ರತಿಕ್ರಿಯಿಸಿದ ಕಾಪೋರೇಟರ್ ಕೌನ್ಸಿಲ್​ನಲ್ಲೂ ಈ ಕುರಿತು ರ್ಚಚಿಸಿದ್ದೆ. ಕಾಚರಕನಹಳ್ಳಿ ಬ್ಯಾಂಕಾಕ್​ನ ಪಟ್ಟಾಯ ಆಗಿದೆ. ವಿದೇಶಿಗರು ಅನೈತಿಕ ಚಟುವಟಿಕೆ ನಡೆಸಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನೇ ಸಾರ್ವಜನಿಕರ ಜತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಸ್ ಸಂಪರ್ಕ ಸೌಲಭ್ಯ

ಹೆಣ್ಣೂರು ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್ ಸೇವೆಯಿಲ್ಲ ಎಂದು ಎಚ್​ಆರ್​ಬಿಆರ್ ಲೇಔಟ್ 3ನೇ ಬಡಾವಣೆಯ ವಿನುತಾ ದೂರಿದರು. ನಿಗಮದ ಎಂಡಿ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ರಸ್ತೆ ವಿಸ್ತರಣೆ ಆಗದೆ ಬಸ್ ಸಂಚಾರ ಕಷ್ಟ. ಜನ ಮೆಟ್ರೋದಷ್ಟೇ ಭೂಸ್ವಾಧೀನ ಪರಿಹಾರ ಕೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ರೆಡ್ಡಿ ಪ್ರತಿಕ್ರಿಯಿಸಿದರು.