ಕಾಗದದಲ್ಲಷ್ಟೇ ಹೈ-ಕ ಅಭಿವೃದ್ಧಿ

ಕನಕಪುರ: ಹೈದರಾಬಾದ್ – ಕರ್ನಾಟಕ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಕಾಗದದ ಮೇಲಷ್ಟೇ ಅಧಿಕಾರಿಗಳು ತೋರಿಸುತ್ತಿದ್ದಾರೆ. ವಾಸ್ತವವಾಗಿ ಅಲ್ಲಿನ ಜನರ ಸ್ಥಿತ ಕಂಡು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ಹೊರವಲಯದಲ್ಲಿ ಇರುವ ವೆಂಕಟೇಶ್ವರ ಕನ್ವೆನ್ಷನ್ ಹಾಲ್​ನಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದಿ. ಕೆ.ವಿ. ಚಿಕ್ಕಣ್ಣಯ್ಯನವರ ಪ್ರಥಮ ವರ್ಷದ ಸಂಸ್ಮರಣೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಲೋಕಸಭೆ ಚುನಾವಣೆ ವೇಳೆ ಆ ಪ್ರದೇಶದಲ್ಲಿ ಓಡಾಡಿದಾಗ ಅಲ್ಲಿನ ವಾಸ್ತವ ಸ್ಥಿತಿ ಕಂಡು ನೊಂದಿದ್ದೇನೆ. ವಿಧಾನಸಭಾ ಅಧಿವೇಶನ ಆರಂಭಗೊಳ್ಳುವ ಮೊದಲು ಸಭಾಪತಿಯವರಿಗೆ ಪತ್ರ ಬರೆದು ತಕ್ಷಣವೇ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಸಮಿತಿ ರಚಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಒತ್ತಾಯಿಸುತ್ತೇನೆ ಎಂದರು.

ಬಿಹಾರದಲ್ಲಿ ಜಾರಿಯಾಗಿರುವಂತೆ ತಂದೆ ತಾಯಿಗಳನ್ನು ನಿರ್ಲಕ್ಷಿಸುವ ಮಕ್ಕಳನ್ನು ಜೈಲಿಗೆ ಕಳುಹಿಸುವ ಕಾನೂನು ರಾಜ್ಯದಲ್ಲೂ ಜಾರಿಯಾದರೆ ಬೆಂಗಳೂರು ಒಂದರಲ್ಲೇ ಶೇ.25ರಷ್ಟು ಜನ ಪರಪ್ಪನ ಅಗ್ರಹಾರ ಸೇರಲಿದ್ದಾರೆ ಎಂದರು.

ಜನಪ್ರತಿನಿಧಿಗಳಾಗಿ ಜನಸಾಮಾನ್ಯರ ವಾಸ್ತವ ಸ್ಥಿತಿ ಅರಿತು ಕೆಲಸ ಮಾಡಿದಾಗ ಮಾತ್ರ ಶಾಶ್ವತ ಕೆಲಸಗಳನ್ನು ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಚಿಕ್ಕಣ್ಣಯ್ಯನವರು ಪುರಸಭಾ ಅಧ್ಯಕ್ಷರಾಗಿ ತಾರತಮ್ಯ ಮಾಡದೆ ಜನರೊಡನೆ ಬೆರೆತು ಕೆಲಸ ಮಾಡಿದ್ದಾರೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಇಂತಹ ದಿನಗಳಲ್ಲಿ ಚಿಕ್ಕಣ್ಣಯ್ಯನವರ 5 ಜನ ಮಕ್ಕಳೂ ಒಂದೇ ವೇದಿಕೆಯಲ್ಲಿ ಕುಟುಂಬ ಸಮೇತರಾಗಿ ಕಾಣುತ್ತಿರುವುದು ಅಪರೂಪದ ಸಂದರ್ಭವಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮಾದರಿ ಕುಟುಂಬಗಳು ಕಾಣುವಂತಾಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮರಳೆಗವಿ ಮಠದ ಪೀಠಾಧ್ಯಕ್ಷ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಚಿಕ್ಕಣ್ಣಯ್ಯನವರು ಪುರಸಭಾ ಅಧ್ಯಕ್ಷರಾಗಿ ಹೆಚ್ಚು ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದರು.

ದೇಗುಲಮಠದ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್. ದಿಲೀಪ್, ವಕೀಲ ಮಲ್ಲಿಕಾರ್ಜುನ್​ರವರು ಚಿಕ್ಕಣ್ಣಯ್ಯನವರ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ನಗರಸಭೆ ಸದಸ್ಯ ಕೈಲಾಸ್ ಶಂಕರ್ ಮತ್ತು ಚಿಕ್ಕಣ್ಣಯ್ಯನವರ ಕುಟುಂಬಸ್ಥರು, ಬಿಲ್ವಪತ್ರೆ ಮಠದ ಶಿವಲಿಂಗಸ್ವಾಮೀಜಿ, ಚಿಕ್ಕಕಲ್ಬಾಳು ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *