ಕಾಂತೇಶ ಸ್ವಾಮಿ ರಥೋತ್ಸವ

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಕಾಂತೇಶ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಕರ್ನಾಟಕದ ಎರಡನೇ ತಿರುಪತಿ ಎಂದೇ ಖ್ಯಾತಿಯಾದ ಈ ಕ್ಷೇತ್ರದ ರಥೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾವಿಸಿದ್ದರು. ಸರತಿಯಲ್ಲಿ ನಿಂತು ಕಾಂತೇಶ ಸ್ವಾಮಿ ದರ್ಶನ ಪಡೆದರು. ನಂತರ ತೇರು ಎಳೆದರು. ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಭಕ್ತರು ಸ್ವಾಮಿಯ ಪಲ್ಲಕ್ಕಿ, ಪಾದುಕೆಗಳನ್ನು ತಲೆ ಮೇಲೆ ಹೊತ್ತು ಹರಕೆ ತೀರಿಸಿದರು. ಸುಮಾರು 80 ಅಡಿ ಎತ್ತರದ ತೇರಿನ ಕಳಸಕ್ಕೆ ಬಾಳೆಹಣ್ಣುಗಳನ್ನು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ‘ರಾಮ ರಾಮ ಗೋವಿಂದ ಗೋವಿಂದ’ ಘೊಷಣೆ ಕೂಗಿ ಭಕ್ತಿ ಮೆರೆದರು.

ಕಾಂತೇಶ ಸ್ವಾಮಿ ದರ್ಶನಕ್ಕಾಗಿ ಭಕ್ತರಲ್ಲಿ ನೂಕು-ನುಗ್ಗಲು ಉಂಟಾಗಬಾರದೆಂದು ದೇವಸ್ಥಾನ ಕಮಿಟಿಯವರು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸರತಿ ವ್ಯವಸ್ಥೆ ಮಾಡಿದ್ದರು. ರಥವು ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುವವರೆಗೂ ವಾಹನಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿ, ಭಕ್ತರಿಗೆ ಅನುಕೂಲ ಮಾಡಿಕೊಡಲಾಯಿತು. ರಾಣೆಬೆನ್ನೂರು, ಬ್ಯಾಡಗಿಗೆ ತೆರಳುವ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಸಿಪಿಐ ಸಂತೋಷಕುಮಾರ ಪವಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.