ಕಾಂಡ್ಲಾ ವನದಲ್ಲಿ ಬೋರ್ಡ್ ವಾಕ್

ಕಾರವಾರ: ಕೆನೋಪಿ ವಾಕ್ ಮಾದರಿಯಲ್ಲಿ ಕಾಂಡ್ಲಾ ವನದ ನಡುವೆ ಬೋರ್ಡ್ ವಾಕ್ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಕೈಗೊಳ್ಳಲು ಯೋಜಿಸಿದೆ.

ಕಾಳಿ ಹಿನ್ನೀರಿನಲ್ಲಿ ಕಾರವಾರ ನಗರದ ಸಮೀಪದ ಒಂದು ಸ್ಥಳದಲ್ಲಿ ದಡದಿಂದ ಸುಮಾರು 100 ಮೀಟರ್​ನಷ್ಟು ದೂರ ಕಾಂಡ್ಲಾ ಗಿಡಗಳ ನಡುವೆ ಮರದ ಹಲಗೆಗಳನ್ನು ಹಾಕಿ ಅದರ ನಡುವೆ ಓಡಾಡುವ ವ್ಯವಸ್ಥೆ ಇದಾಗಿದೆ. ಈ ವರ್ಷಾಂತ್ಯದಲ್ಲಿ ಪ್ರವಾಸಿಗರಿಗೆ ಈ ಸೌಲಭ್ಯ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಬೋಟ್​ನಲ್ಲಿ ಹೋಗಿ ಕಾಂಡ್ಲಾ ಸಸ್ಯಗಳನ್ನು ವೀಕ್ಷಿಸುವ ಕಾಂಡ್ಲಾ ಸಫಾರಿ ಈಗಾಗಲೇ ಜಾರಿಯಲ್ಲಿದೆ.

ಏನು ವಿಶೇಷ..?: ಉಪ್ಪು ಹಾಗೂ ಸಿಹಿ ನೀರು ಮಿಶ್ರಣವಾಗುವ ನದಿ ಹಿನ್ನೀರು ಪ್ರದೇಶದಲ್ಲಿ ಮಾತ್ರ ಬೆಳೆಯುವ ಸಸ್ಯ ಕಾಂಡ್ಲಾ. ನೀರಿನ ಉಬ್ಬರ ಇಳಿತಕ್ಕನುಗುಣವಾಗಿ ಬದುಕುವ ಸಲುವಾಗಿ ಆ ಸಸ್ಯ ನೆಲದಿಂದ ಸುಮಾರು ಒಂದರಿಂದ ಎರಡು ಮೀಟರ್ ಎತ್ತರದವರೆಗೆ ಬೇರನ್ನು ಮೇಲೆತ್ತಿರುತ್ತದೆ. ಪೊದೆಗಳ ಮಾದರಿಯಲ್ಲಿ ಬೆಳೆಯುವ ಈ ಸಸ್ಯ ಹಲವು ಪಕ್ಷಿ ಸಂಕುಲದ ಆವಾಸ ಸ್ಥಾನವಾಗಿವೆ. ಕಾಂಡ್ಲಾ ಬೇರು ಜಲಚರಗಳು ಮೊಟ್ಟೆ ಇಡುವ ಸ್ಥಳವಾಗಿವೆ. ಪರಿಸರದ ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಈ ವಾಕ್ ಅನುಕೂಲವಾಗಲಿದೆ. ಸದ್ಯ ಹೊನ್ನಾವರ ಉಪವಿಭಾಗದಲ್ಲಿ ಕುಮಟಾ ತಾಲೂಕಿನ ನುಶಿಕೋಟೆ ಭಾಗದಲ್ಲಿ 150 ಮೀಟರ್​ನಷ್ಟು ಉದ್ದಕ್ಕೆ ಕಾಂಡ್ಲಾ ಪ್ರವಾಸೋದ್ಯಮ ಕೈಗೊಳ್ಳಲಾಗಿದೆ.

ಕಾಂಡ್ಲಾ ನಾಟಿ: ಕಾರವಾರ ಅರಣ್ಯ ವಿಭಾಗದಲ್ಲಿ 740 ಹೆಕ್ಟೇರ್ ಕಾಂಡ್ಲಾ ವನವಿದೆ. ಉತ್ತರ ಕನ್ನಡದ ಕಾಳಿ ನದಿ ಹಿನ್ನೀರು ಪ್ರದೇಶವೊಂದರಲ್ಲೇ 20 ಕ್ಕೂ ಅಧಿಕ ಪ್ರಭೇದದ ಕಾಂಡ್ಲಾ ಸಸ್ಯಗಳಿವೆ. ಅವುಗಳ ಸಂರಕ್ಷಣೆಗೆ ಕಾಳಿ ಮಾತಾ ದೇವಸ್ಥಾನವಿರುವ ದ್ವೀಪವನ್ನು ಕಾಂಡ್ಲಾ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಕಳೆದ ಸಾಲಿನಲ್ಲಿ 75 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಸಸ್ಯಗಳನ್ನು ಅರಣ್ಯ ಇಲಾಖೆ ನಾಟಿ ಮಾಡಿತ್ತು. ಈ ಬಾರಿ ಮತ್ತೆ ಸೊನರೇಶಿಯಾ ರೈಸೊಫ್ಲೋರಾ, ಅವಿಸೀನಿಯಾ ಮುಂತಾದ ಪ್ರಭೇದದ ಕಾಂಡ್ಲಾಗಳನ್ನು 75 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡುವ ಗುರಿ ಹೊಂದಲಾಗಿದೆ.

ಸುನಾಮಿ ತಡೆಯುವ ಸಸ್ಯ: ಕಾಂಡ್ಲಾ ಜೀವ ಸಂಕುಲಗಳ ಆವಾಸ ಸ್ಥಾನ ಮಾತ್ರವಲ್ಲ. ತನ್ನ ವಿಶಾಲ ಬೇರುಗಳ ಸಂಕುಲದಿಂದ ಸುನಾಮಿಯನ್ನೂ ತಡೆಯಬಲ್ಲದು ಎಂದು ಸಾಬೀತಾಗಿದೆ. ಒಡಿಶಾ ಭಾಗದಲ್ಲಿ ಸುನಾಮಿ ಬಂದಾಗ ಕಾಂಡ್ಲಾ ವಿಪುಲವಾಗಿರುವ ಪ್ರದೇಶಗಳಲ್ಲಿ ಹಾನಿ ಕಡಿಮೆಯಾಗಿತ್ತು. ಮಣ್ಣಿನ ಕೊರೆತವನ್ನು ಗಣನೀಯ ಪ್ರಮಾಣದಲ್ಲಿ ತಡೆಯುತ್ತದೆ. ಹೆಚ್ಚು ಆಮ್ಲಜನಕವನ್ನೂ ಉತ್ಪಾದನೆ ಮಾಡುತ್ತದೆ.

ಏನಿದು ಬೋರ್ಡ್ ವಾಕ್ ?: ನದಿ ಅಥವಾ ಸಮುದ್ರದ ನಡುವೆ ಕಂಬಗಳನ್ನು ನೆಟ್ಟು ಅದರ ಮೇಲೆ ಮರದ ಹಲಗೆಗಳನ್ನು ಹಾಕಿ ಜನರು ನಡೆದು ಹೋಗುವಂತೆ ಮಾಡುವುದಕ್ಕೆ ಬೋರ್ಡ್ ವಾಕ್ ಎನ್ನಲಾಗುತ್ತದೆ. ವಿದೇಶಗಳಲ್ಲಿ ಈ ಮಾದರಿ ಹೆಚ್ಚು ಪ್ರಸಿದ್ಧ. ಇದನ್ನು ಇಲ್ಲಿ ಕಾಂಡ್ಲಾ ಸಸ್ಯಗಳನ್ನೇ ಆಧಾರವಾಗಿಟ್ಟುಕೊಂಡು ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *