ಪುತ್ತೂರು: ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಗಿನ ಶಾಸಕ ವಿನಯ ಕುಮಾರ್ ಸೊರಕೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಹಾಗಾಗಿ ನಾನು ಡಿ.ವಿ.ಸದಾನಂದ ಗೌಡರ ಜೊತೆ ರಾಜಕೀಯಕ್ಕೆ ಇಳಿದೆ. ಬಳಿಕ ವಿನಯ ಕುಮಾರ್ ಸೊರಕೆಯನ್ನು ಸೋಲಿಸಿದೆ. ಇದು ನನ್ನ ಜೀವನದ ಅತೀ ಸಂತೋಷದ ಕ್ಷಣ. ಇದೇ ಸಂದರ್ಭದಲ್ಲಿ ನನಗೆ ಕೊಂಕಣಿಯವರು ತುಂಬಾ ಸಹಕಾರ ಮಾಡಿದ್ದಾರೆ….. ಹೀಗೆಂದವರು ಪ್ರತಿಷ್ಠಿತ ಐಎಂಎ-ಕೆಎಸ್‌ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ.ಪ್ರಸಾದ್.
ಪ್ರತಿಷ್ಠಿತ ಐಎಂಎ-ಕೆಎಸ್‌ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ.ಪ್ರಸಾದ್ ಅವರಿಗೆ ಪುತ್ತೂರಿನ ಸಾಲ್ಮರ ಕೊಟೇಚಾದಲ್ಲಿ ನಡೆದ ನಾಗರಿಕರಿಂದ ಅಭಿವಂದನಾ ಕಾರ್ಯಕ್ರಮದಲ್ಲಿ ಭಾವುಕತೆಯಿಂದ ಮಾತನಾಡಿದರು.
ನನಗೆ ಹಿಂದುತ್ವ ಅಂಟಿದ್ದು ಪುತ್ತೂರಿನಲ್ಲಿ. ನನಗೆ ಪ್ರಶಸ್ತಿ ಎಲ್ಲಿಂದ, ಹೇಗೆ ಬಂತು ಎಂದು ಗೊತ್ತಿಲ್ಲ. ನನಗೆ ಪ್ರಶಸ್ತಿ ಬಾರದಿದ್ದರೂ ತೊಂದರೆ ಇಲ್ಲ. ಆದರೆ ಹಿಂದುತ್ವಕ್ಕೆ ತೊಂದರೆ ಆಗಬಾರದು ಎಂದರು. 1994ನೇ ಇಸವಿಯಲ್ಲಿ ಒಬ್ಬ ಬಿಜೆಪಿಯವ ಇನ್ನೊಬ್ಬ ಬಿಜೆಪಿಯವನೊಂದಿಗೆ ಸಂತೋಷದಿಂದ ಇರುತ್ತಿದ್ದರು. ಇವತ್ತು ಹಾವು ಮುಂಗುಸಿಯಂತಿದ್ದಾರೆ. ಸ್ವಾರ್ಥ ಬಿಡಬೇಕು.ದುಡ್ಡಿನ ಆಸೆ ಬಿಡಿ.ಹಿಂದುತ್ವ ಮೇಲೆ ಬರಬೇಕು.ಅದಕ್ಕಾಗಿ ಎಲ್ಲರು ಒಟ್ಟಾಗಬೇಕು ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಇವತ್ತು ಪುತ್ತೂರಿಗೆ ಪುತ್ತೂರು ಸಂಭ್ರಮ ಪಡುವ ದಿನ. ಪ್ರತಿಷ್ಠಿತ ಡಾಕ್ಟರ್ಸ್ ಡೇ ಪ್ರಶಸ್ತಿ ಪಡೆದ ಡಾ.ಎಂ.ಕೆ.ಪ್ರಸಾದ್ ಪುತ್ತೂರಿಗೆ ಮಾತ್ರವಲ್ಲ. ನಾವು ಕಂಡಂತೆ ಅವರು ಜಗತ್ತಿಗೆ ವೈದ್ಯ. ಅವರು ತನಗೆ ಆಸ್ತಿ ಮಾಡಿಲ್ಲ ಇಡೀ ಹಿಂದು ಸಮಾಜವನ್ನು ತನ್ನ ಆಸ್ತಿಯನ್ನಾಗಿ ಮಾಡಿದ್ದಾರೆ ಎಂದರು.
ಡಾ.ಎಂ.ಕೆ.ಪ್ರಸಾದ್ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನಾ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಶ್ವಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಹಿಂಜಾವೇ ಕರ್ನಾಟಕ ಪ್ರಾಂತ ಪ್ರಶಿಕ್ಷಣ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಇದ್ದರು.
ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು. ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸ್ವಾಗತಿಸಿದರು. ದಿನೇಶ್ ಪಂಜಿಗ ವಂದಿಸಿದರು. ರಾಜೇಶ್ ಬನ್ನೂರು ಮತ್ತು ಹರಿಣಿ ಪುತ್ತೂರಾಯ ನಿರೂಪಿಸಿದರು.

ಗಣೇಶೋತ್ಸವದಲ್ಲಿ ದಲಿತರೇ ತರಕಾರಿ ಹಚ್ಚುವುದು
ಶೇ.18ರಷ್ಟಿರುವ ದಲಿತರು ಹಿಂದುತ್ವದಲ್ಲಿ ಸೇರಿದಾಗ ನಾವು ಶಕ್ತಿವಂತರಾಗುತ್ತೇವೆ. ಇದನ್ನು ಸದಾ ನೆನಪಿನಲ್ಲಿಡಬೇಕು. ಹಾಗಾಗಿ ನಾನು ದಲಿತರ ಕಾಲೋನಿಗೆ ಹೋಗುತ್ತಿದ್ದೆ. ಹಾಲಿನಲ್ಲಿ ಬೆರೆತ ಸಕ್ಕರೆಯಂತೆ ದಲಿತರು ನಮ್ಮೊಂದಿಗೆ ಇರಬೇಕು. ನಮ್ಮ ಗಣೇಶೋತ್ಸವದಲ್ಲಿ ದಲಿತರೇ ತರಕಾರಿ ಹಚ್ಚುವುದು. ನಮ್ಮ ಮದುವೆಗೆ ಅವರು ಅವರ ಮದುವೆಗೆ ನಾವು ಹೋಗುವಂತೆ ಮಾಡಬೇಕು ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು.