ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಖಂಡನೆ

ಹಳಿಯಾಳ: ಮೈತ್ರಿ ಪಕ್ಷ ಜೆಡಿಎಸ್​ಗೆ ಲೋಕಸಭಾ ಟಿಕೆಟ್ ಬಿಟ್ಟು ಕೊಟ್ಟ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಖಂಡಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯರ ಕಾರ್ಯಾಲಯದಿಂದ ಬ್ಲಾಕ್ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ನೀಡಬೇಕು ಎಂದು ಘೊಷಣೆ ಕೂಗಿದರು.

ಯುವ ಮುಖಂಡ ಪ್ರಮೋದ ಪಾಟೀಲ ಮಾತನಾಡಿ, ಕೆನರಾ ಕ್ಷೇತ್ರದಲ್ಲಿ ಜೆಡಿಎಸ್ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಸಿದ್ಧರಾಗಬೇಕು. ಈ ಕುರಿತು ಹೈಕಮಾಂಡ್​ಗೆ ಗಡುವು ನೀಡಬೇಕು ಎಂದು ಆಗ್ರಹಿಸಿದರು.

ಟಿಕೆಟ್ ನಮ್ಮದೆ: ಪ್ರತಿಭಟನೆಯ ನೇತೃತ್ವ ವಹಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ಸಚಿವ ಆರ್.ವಿ. ದೇಶಪಾಂಡೆ ಅವರು ಕಾಂಗ್ರೆಸ್​ಗೆ ಟಿಕೆಟ್ ತರುತ್ತಾರೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ಟಿಕೆಟ್ ತರದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ ನಂತರ ಶಿವಾಜಿ ವೃತ್ತಕ್ಕೆ ಸಾಗಿದ ಕಾರ್ಯಕರ್ತರು ಖಾನಾಪುರ- ತಾಳಗುಪ್ಪ ಹಾಗೂ ಗಣೇಶಗುಡಿ- ಹೆಬಸೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಮಾಲಾ ಬೃಗಾಂಜಾ, ಗುಲಾಭಷ್ಯಾ ಲತೀಪಣ್ಣನವರ, ಸಂತೋಷ ಮಿರಾಶಿ, ರೋಹನ್ ಬೃಗಾಂಜಾ, ಸಂಜು ಮಿಶಾಳೆ, ತುಕಾರಾಮ ಗೌಡ, ಸಂಜು ಪಾಟೀಲ, ವಾಮನ ಮಿರಾಶಿ, ಅಶೋಕ ಅಂಗ್ರೊಳ್ಳಿ, ಫಯಾಜ್ ಶೇಖ್, ಸತ್ಯಜಿತ ಗಿರಿ ಪಾಲ್ಗೊಂಡಿದ್ದರು.

ಅನಂತಕುಮಾರ ಕಾಣಿಕೆ, ಜಿಲ್ಲೆಗೆ ತಂದ ಯೋಜನೆಗಳು ಏನ್ರಿ?

ಐದು ಸಲ ಎಂಪಿ ಆಗಿ ಆಯ್ಕೆಯಾಗಿರುವ ಅನಂತಕುಮಾರ ಕ್ಷೇತ್ರಕ್ಕೆ ನೀಡಿದ ಕಾಣಿಕೆ, ಜಿಲ್ಲೆಗೆ ತಂದ ಯೋಜನೆಗಳು ಯಾವುವು ಎಂದು ಘೊಟ್ನೇಕರ ಪ್ರಶ್ನಿಸಿದರು. ಒಂದಾದರೂ ಬೋೕರ್​ವೆಲ್ ಮಂಜೂರು ಮಾಡಿಸಿದ್ದರೆ ತೋರಿಸಲಿ ಎಂದರು. ಮಾತೆತ್ತಿದ್ದರೆ ಹೊಡಿ, ಬಡಿ, ಕಡಿ ಎಂದು ಕರೆ ನೀಡುವ ಸಂಸದರನ್ನು ಕೌಶಲ ಅಭಿವೃದ್ಧಿ ಸಚಿವ ಸ್ಥಾನ ಕೊಟ್ಟಿದ್ದಾದರೂ ಏತಕ್ಕೆ? ಮರಾಠರೇ ನಿಜವಾದ ಹಿಂದುಗಳು, ದೇಶದಲ್ಲಿ ಹಿಂದುತ್ವದ ರಕ್ಷಣೆಯನ್ನು ಮರಾಠ ದೊರೆ ಶಿವಾಜಿ ಮಹಾರಾಜರು ಮಾಡಿ ತೋರಿಸಿದ್ದಾರೆ. ಶಿವಾಜಿ ಸರ್ವ ಧರ್ಮಗಳನ್ನು ಗೌರವಿಸುತ್ತಿದ್ದರು. ಹಿಂದುತ್ವ ಅಂದರೆ ಹೊಡಿ ಬಡಿ ಕಡಿ ಅಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಕಾರವೆತ್ತದ ಅನಂತಕುಮಾರ ಈಗ ದೇಶದಲ್ಲಿಯೇ ಜಿಲ್ಲೆಯ ಮಾನ ಹರಾಜು ಹಾಕಲು ಹೊರಟಿದ್ದಾರೆ ಎಂದು ಹೇಳಿದರು.