ಕಾಂಗ್ರೆಸ್ ಸೋಲಿನ ಪರಾಮರ್ಶೆ: ಸಚಿವ ಯು.ಟಿ.ಖಾದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಸರ್ವ ಪ್ರಯತ್ನ ನಡೆಸಿದ್ದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಸೋಲು ಅಂತಿಮವಲ್ಲ. ಈ ಬಗ್ಗೆ ಜಿಲ್ಲೆ, ಕ್ಷೇತ್ರ ಮತ್ತು ಬ್ಲಾಕ್ ಮಟ್ಟದಲ್ಲಿ ಚರ್ಚೆ ನಡೆಸಿ, ಕಾರಣಗಳ ಬಗ್ಗೆ ಪರಾಮರ್ಶೆ ನಡೆಸಿ ಪಕ್ಷ ಸಂಘಟನೆಗೆ ಒಗ್ಗಟ್ಟಿನಿಂದ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಎರಡನೇ ಅವಧಿಗೆ ಪ್ರಧಾನಿಯಾಗುವ ನರೇಂದ್ರ ಮೋದಿ ಮತ್ತು ಮೂರನೇ ಅವಧಿಗೆ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲು ಅವರನ್ನು ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿದ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು, ಜಿಲ್ಲಾಡಳಿತ ಮತ್ತು ಅಧಿಕಾರಿಗಳನ್ನು ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಐದು ವರ್ಷದ ಹಿಂದೆ ನೀಡಿದ್ದ ಅನೇಕ ಭರವಸೆ ಬಾಕಿ ಇದ್ದು, ಅದನ್ನು ನೆನಪಿಸುತ್ತಿದ್ದೇವೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಇಳಿಕೆ, ಆರ್ಥಿಕ ಸ್ಥಿತಿ ಸುಧಾರಣೆ, ಉತ್ತಮ ಆಡಳಿತ, ಭಾವನಾತ್ಮಕ ವಿಷಯಗಳಾದ ಸಮಾನ ನಾಗರಿಕ ಸಂಹಿತೆ ಜಾರಿ, 371ನೇ ವಿಧಿ ರದ್ದು, ಇನ್ನೊಂದು ಪುಲ್ವಾಮಾ ಘಟನೆ ನಡೆಯದೆ ದೇಶದ ಭದ್ರತೆ ಕಾಪಾಡುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಸಂತೋಷ್ ಶೆಟ್ಟಿ, ಸದಾಶಿವ ಉಳ್ಳಾಲ್, ಭಾಸ್ಕರ ಕೆ, ಈಶ್ವರ ಉಳ್ಳಾಲ್, ಮೊಹಮ್ಮದ್ ಮೋನು, ಮಮತಾ ಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಸರ್ಕಾರ ಸುಭದ್ರ:  ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್- ಜೆಡಿಎಸ್ ಬೇರ್ಪಡಿಸುವ ಪ್ರಯತ್ನ ಕೆಲವರು ಮಾಡುತ್ತಿದ್ದಾರೆ. ಬಿಜೆಪಿ ಒಂದು ವರ್ಷದಿಂದ ಅಧಿಕಾರದ ಕನಸು ಕಾಣುತ್ತಿದೆ. ಅದು ಯಶಸ್ವಿ ಆಗುವುದಿಲ್ಲ. ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಜನಪರ ಕೆಲಸಗಳನ್ನು ಸರ್ಕಾರ ಮಾಡಲಿದೆ ಎಂದು ಸಚಿವರು ಹೇಳಿದರು.

ನಳಿನ್‌ಗೆ ಸಚಿವ ಸ್ಥಾನಕ್ಕೆ ಒತ್ತಾಯ
ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲು ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಬೇಕು. ಕೇಂದ್ರದ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪುವಂತೆ ಮಾಡಬೇಕು. ರಾಜ್ಯ ಸರ್ಕಾರದಿಂದ ಅವರಿಗೆ ಅಭಿವೃದ್ಧಿ ವಿಚಾರದಲ್ಲಿ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವ ಖಾದರ್ ಹೇಳಿದರು.

ಮರಳು ಸಮಸ್ಯೆಗೆ ಸ್ಯಾಂಡ್ ಬಝಾರ್ ಆ್ಯಪ್
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ಮರಳು ಸಿಗುವಂತಾಗಲು ಜಿಲ್ಲಾಡಳಿತ ಪ್ರಾಯೋಗಿಕ ನೆಲೆಯಲ್ಲಿ ಸ್ಯಾಂಡ್ ಬಝಾರ್ ಆ್ಯಪ್ ಆರಂಭಿಸಿದೆ. ಹೊಸ ವ್ಯವಸ್ಥೆ ಮೂಲಕ ಅಕ್ರಮ ಮರಳುಗಾರಿಕೆ, ಹೆಚ್ಚಿನ ದರ, ಹೊರ ರಾಜ್ಯಗಳಿಗೆ ಮರಳು ಸಾಗಾಟಕ್ಕೆ ಕಡಿವಾಣ ಬೀಳಲಿದೆ. ಈಗಾಗಲೇ 11 ಮಂದಿ ಮರಳಿಗೆ ಬೇಡಿಕೆ ಇಟ್ಟಿದ್ದು, 56 ಮಂದಿಗೆ ಮರಳು ಪೂರೈಕೆ ಮಾಡಲಾಗಿದೆ. ಮರಳು ಬುಕ್ಕಿಂಗ್, ಲಭ್ಯತೆ, ಪೂರೈಕೆ, ಬಾಕಿ, ವಾಹನ ಸಾಗಾಟ, ಇಳಿಸುವಿಕೆ ಎಲ್ಲವೂ ದಾಖಲಾಗುತ್ತದೆ. 48 ಗಂಟೆಯೊಳಗೆ ಮರಳು ಪೂರೈಕೆ ಆಗುತ್ತದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇದನ್ನು ನಿರ್ವಹಣೆ ಮಾಡುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *