Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಕಾಂಗ್ರೆಸ್ ಸಂಘಟನೆಗೆ ಪ್ರಿಯದರ್ಶಿನಿಯರು

Wednesday, 21.11.2018, 4:25 AM       No Comments

| ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು ವಿಶೇಷ ಪ್ರಯತ್ನಕ್ಕೆ ಮುಂದಾಗಿರುವ ಕಾಂಗ್ರೆಸ್ ಇದೀಗ 18ರಿಂದ 35ರ ವಯಸ್ಸಿನ ಮಹಿಳಾ ಮತದಾರರತ್ತ ದೃಷ್ಟಿ ನೆಟ್ಟಿದೆ.

ಈಗಲೂ ಇಂದಿರಾಗಾಂಧಿ ಹೆಸರಲ್ಲಿ ಮತ ಸೆಳೆಯಬಹುದೆಂದು ಲೆಕ್ಕ ಹಾಕಿರುವ ಕಾಂಗ್ರೆಸ್, ಹೊಸ ಕಾರ್ಯಾಚರಣೆಗೆ ‘ಪ್ರಿಯದರ್ಶಿನಿ’ ಎಂಬ ಇಂದಿರಾ ಗಾಂಧಿಯ ಮತ್ತೊಂದು ಹೆಸರಿಟ್ಟಿದೆ. ಬಿಜೆಪಿಯ ಮತ ಬ್ಯಾಂಕ್ ಎನಿಸಿಕೊಂಡ ಯುವ ಮಹಿಳಾ ಮತದಾರರನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಪ್ರಿಯದರ್ಶಿನಿ ಕಾರ್ಯಕ್ರಮದ ಪ್ರಮುಖ ಉದ್ದೇಶ. ರಾಜ್ಯದಲ್ಲಿ 25 ಸಾವಿರ ಯುವ ಮಹಿಳಾ ಮತದಾರರ ಪಡೆ ಸೃಷ್ಟಿಸಲು ಪ್ರಯತ್ನ ನಡೆದಿದೆ. ನೇರವಾಗಿ ಪಕ್ಷದ ಚಟುವಟಿಕೆ ನಡೆಸದಿದ್ದರೂ ಸುರಕ್ಷಿತ ರಾಜಕೀಯ ವೇದಿಕೆ ಕಲ್ಪನೆಯಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಘಟಕದಿಂದ ಸಂಘಟನೆ ಕಟ್ಟಲಾಗುತ್ತದೆ.

‘ಪ್ರಿಯದರ್ಶಿನಿ’ ತಂಡ ಸೇರುವವರನ್ನು ‘ಪ್ರಿಯದರ್ಶಿನಿಯರು’ ಎಂದೇ ಕರೆಯಲಾಗುತ್ತದೆ. ಕಾಲೇಜು, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹೀಗೆ ಯುವತಿಯರು ಹೆಚ್ಚಿರುವ ಕಡೆ ತಂಡ ರಚಿಸಲಾಗುತ್ತದೆ. ಜಿಲ್ಲೆ, ತಾಲೂಕು, ಮತಗಟ್ಟೆ ಮಟ್ಟದಲ್ಲೂ ತಂಡ ರಚನೆ ಆಗಲಿದೆ.

ಪ್ರತಿ ಜಿಲ್ಲೆಯಲ್ಲೂ 1 ಸಾವಿರ ಯುವತಿಯರ ಪಡೆ: ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಉದ್ಯೋಗ ಸಂಬಂಧಿ ಎಂಬ ನಾಲ್ಕು ನೀತಿ ಸ್ವರೂಪದಡಿ ಈ ತಂಡ ಕಾರ್ಯಕ್ರಮಗಳನ್ನು ನಡೆಸಲಿದೆ. ಉಪನ್ಯಾಸ, ಕಾರ್ಯಾಗಾರ, ಆರೋಗ್ಯ ಶಿಬಿರ, ಜಾಗೃತಿ ಕಾರ್ಯಕ್ರಮ, ಸಮಾಜಸೇವಾ ಕಾರ್ಯಗಳನ್ನು ನಡೆಸಿ ಅಲ್ಲಿ ಯುವತಿಯರು ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ.

ಪ್ರಮುಖವಾಗಿ ಕಾಲೇಜುಗಳಲ್ಲಿ ಮೆಂಬರ್ ಶಿಪ್ ನಡೆಸಲಾಗುತ್ತದೆ. ತಂಡ ರಚಿಸಿ ಅವರ ಮೂಲಕವೇ ಕಾರ್ಯಕ್ರಮ ನಡೆಸಲು ಪ್ರೇರೇಪಿಸಲಾಗುತ್ತದೆ. ಲೋಕಸಭೆ ಚುನಾವಣೆಯೊಳಗೆ ಪ್ರತಿ ಜಿಲ್ಲೆಯಲ್ಲೂ ಸುಮಾರು 1 ಸಾವಿರ ಯುವತಿಯರ ಪ್ರಿಯದರ್ಶಿನಿ ಪಡೆ ರಚಿಸುವುದು ಉದ್ದೇಶ. ಈಗಾಗಲೇ

ಜಿಲ್ಲಾ ಹಂತದಲ್ಲಿ ಕಾರ್ಯನಿರ್ವಹಿಸಲು ನಿಯೋಜನೆ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ರಾಜ್ಯದಲ್ಲಿ ಈ ಕಾರ್ಯಕ್ಕೆ ಭವ್ಯಾ ಅವರನ್ನು ನಿಯೋಜನೆ ಮಾಡಲಾಗಿದ್ದು, ಅವರು ಜಿಲ್ಲಾ ತಂಡ ರಚನೆಯಲ್ಲಿ ನಿರತರಾಗಿದ್ದಾರೆ. ಅವರು ಅಮೆರಿಕ, ಅರಬ್, ನೇಪಾಳ ಸೇರಿ ಅನೇಕ ದೇಶಗಳಲ್ಲಿ ಸಾಮಾಜಿಕ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ತಂಡದಲ್ಲೂ ಇದ್ದಾರೆ.

ಭವಿಷ್ಯದ ಲಾಭದ ಲೆಕ್ಕಾಚಾರ

ಯುವ ಮತದಾರರು ಹೆಚ್ಚಾಗಿ ಬಿಜೆಪಿ ಪರ ನಿಲ್ಲುತ್ತಾರೆ ಎಂಬ ಮಾತಿದೆ. ಹೀಗಾಗಿ ಕಾಂಗ್ರೆಸ್ ಕಡೆ ಹೆಚ್ಚು ಮಹಿಳಾ ಮತದಾರರನ್ನು ಸೆಳೆಯುವುದು ಪ್ರಿಯದರ್ಶಿನಿ ಉದ್ದೇಶ. ಪ್ರಿಯದರ್ಶಿನಿ ಕಾರ್ಯಕ್ರಮದ ಮೂಲಕ ಯುವತಿಯರು ಕಾಂಗ್ರೆಸ್ ಸಂಪರ್ಕಕ್ಕೆ ಬರುತ್ತಾರೆ, ಪಕ್ಷದ ಬಗ್ಗೆ ಒಳ್ಳೆಯ ಭಾವನೆ ಸೃಷ್ಟಿಯಾಗಿ ಸಮಾಜಕ್ಕೂ ಸಂದೇಶ ರವಾನೆ ಆಗಬಹುದು, ಭವಿಷ್ಯದಲ್ಲಿ ಪಕ್ಷಕ್ಕೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು.

18 ರಿಂದ 35ರ ವಯಸ್ಸಿನ ಯುವತಿಯರನ್ನು ಸಂಘಟಿಸಲು ಪ್ರಿಯದರ್ಶಿನಿ ಯೋಜನೆ ಅನುಷ್ಠಾನ ವಾಗುತ್ತಿದೆ. ಜಿಲ್ಲಾ ತಂಡ ರಚನೆ ಕಾರ್ಯ ನಡೆಯುತ್ತಿದೆ. ಶಿಕ್ಷಣ, ಆರೋಗ್ಯ, ಸುರಕ್ಷತೆ, ಉದ್ಯೋಗ ವಿಚಾರದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ.

| ಭವ್ಯಾ ನರಸಿಂಹಮೂರ್ತಿ, ಪ್ರಿಯದರ್ಶಿನಿ ರಾಜ್ಯ ಸಂಯೋಜಕಿ

Leave a Reply

Your email address will not be published. Required fields are marked *

Back To Top