ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ವಿರುದ್ಧ ಇಲ್ಲದ ಆರೋಪ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರದರ್ಶನ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಪತ್ರವನ್ನು ಸಲ್ಲಿಸಿದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತಿಭಟನಕಾರರು ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅಕ್ರಮ ಮತ್ತು ಹಗರಣ ಕಂಡುಬಂದಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಹೀಗಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ನ ಹಿರಿಯ ನಾಯಕರು ಹಗರಣ ನಡೆದಿದೆ ಎಂದು ಆರೋಪಿಸುವ ಮೂಲಕ ಸುಪ್ರೀಂಕೋರ್ಟ್​ ತೀರ್ಪುಗೆ ಅವಮಾನಿಸಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಉದ್ಯಮಿ ಚಂದ್ರಕಾಂತ(ಚಂದು) ಪಾಟೀಲ್, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಪ್ರಮುಖರಾದ ಸುಭಾಷ ರಾಠೋಡ, ಹಣಮಂತ ಮಲಾಜಿ, ವಿದ್ಯಾಸಾಗರ ಕುಲಕರ್ಣಿ, ಶರಣು ಸಲಗರ, ಲಿಂಗರಾಜ ಬಿರಾದಾರ, ರಾಜೇಂದ್ರ ಕರೇಕಲ್, ಸಾವಿತ್ರಿ ಕುಳಗೇರಿ, ಶರಣಪ್ಪ ತಳವಾರ, ಮಲ್ಲಿನಾಥ ಪಾಟೀಲ್, ರಾಜುಗೌಡ ನಾಗನಹಳ್ಳಿ, ಎಸ್.ಜಿ.ಭಾರತಿ, ಶಿವಾನಂದ ಉಪ್ಪಿನ, ರಾಜಶೇಖರ, ಡಾ.ಇಂದಿರಾ ಶಕ್ತಿ, ಅವ್ವಣ್ಣ ಮ್ಯಾಕೇರಿ, ವಿಜಯಕುಮಾರ ಹುಲಿ, ರಾಣೋಜಿ ದೊಡ್ಡಮನಿ, ರಾಜಕುಮಾರ ಕೋಟೆ, ಅವಿನಾಶ ಕುಲಕರ್ಣಿ, ನಾಮದೇವ ರಾಠೋಡ, ಅಂಬಾರಾಯ ಅಷ್ಟಗಿ, ರಾಜಶೇಖರ ಮುಚಖೇಡ, ಚಂದಪ್ಪ ಹೇಮನೂರ, ಸಿದ್ದು, ಸೂರಜ್ ತಿವಾರಿ, ಉಮೇಶ ಪಾಟೀಲ್ ಮೊದಲಾದವರು ಪಾಲ್ಗೊಂಡಿದ್ದರು.