ಕಾಂಗ್ರೆಸ್-ಬಿಜೆಪಿ ಮಹಾ ಕಿತ್ತಾಟ

ಬೆಂಗಳೂರು: ಮಗ್ಗಲು ಬದಲಿಸಿರುವ ಮಹದಾಯಿ ಹೋರಾಟವನ್ನು ಪ್ರತಿಷ್ಠೆಯಾಗಿ ಸಿಕೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ ಬೀದಿ ಜಗಳ ಆರಂಭಿಸಿವೆ.

ಬುಧವಾರ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಪಕ್ಕದ ಜಸ್ಮಾ ಭವನ್ ರಸ್ತೆಯಲ್ಲೇ ತಡೆದರು. ಕೊನೆಗೂ ಕ್ವಿನ್ಸ್ ರಸ್ತೆವರೆಗೂ ಜಗ್ಗಾಡಿಕೊಂಡು ಬಂದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಕೇಳುವಂತೆ ಘೋಷಣೆ ಹಾಕಲಾರಂಭಿಸಿದರು. ಇದೇ ವೇಳೆ ಬಿಜೆಪಿ ಪ್ರತಿಭಟನೆಗೆ ಪ್ರತಿರೋಧ ಒಡ್ಡಲು ಎನ್​ಎಸ್​ಯುುಐನ ಮಂಜುನಾಥ್ ನೇತೃತ್ವದ ಕಾಂಗ್ರೆಸ್​ನ ಒಂದು ತಂಡ ಪಕ್ಷದ ಕಚೇರಿ ಮುಂದೆ ಜಮಾಯಿಸಿತ್ತು. ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ಆರೋಪಗಳ ಘೋಷಣೆ ಮೊಳಗಿತು.

‘ಪೊಲೀಸರು ಬಿಜೆಪಿ ಕಚೇರಿ ಮುಂಭಾಗ ಧರಣಿಗೆ ಅವಕಾಶ ಕೊಡುತ್ತಾರೆ, ಅಲ್ಲಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪಾಲ್ಗೊಂಡು ಹೋರಾಟಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ, ನಮಗೆ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸಲು ಅವಕಾಶ ನೀಡುತ್ತಿಲ್ಲ’ ಎಂದು ಬಿಜೆಪಿ ಮುಖಂಡರು ಪೊಲೀಸರ ವಿರುದ್ಧ ಹರಿಹಾಯ್ದರು. ‘ಇದೇ ವೇಳೆ ಪ್ರತಿಭಟನೆ ಆರಂಭವಾಗಿ ಒಂದೂವರೆ ತಾಸು ಕಳೆದರೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿಲ್ಲ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ’ ಎಂದು ಕಾಂಗ್ರೆಸ್ ಮುಖಂಡರು ಸಚಿವರೊಬ್ಬರಿಗೆ ಒತ್ತಾಯಿಸುತ್ತಿದ್ದರು.

ಅಶೋಕ್ ತಲೆಗೆ ಗಾಯ

ಪ್ರತಿಭಟನೆ ಕೊನೆ ಹಂತದಲ್ಲಿ ಸ್ಥಳಕ್ಕಾಗಮಿಸಿದ ಮಾಜಿ ಡಿಸಿಎಂ ಆರ್.ಅಶೋಕ್, ಧರಣಿ ನಡೆಸಲು ಅವಕಾಶ ಕೊಡದ ಪೊಲೀಸರ ವಿರುದ್ಧ ಹರಿಹಾಯ್ದರು. ನಂತರ ಪ್ರತಿಭಟನಾಕಾರರನ್ನು ಬಂಧಿಸುವ ಸಂದರ್ಭದಲ್ಲಿ ಉಂಟಾದ ತಳ್ಳಾಟದಲ್ಲಿ ಆರ್.ಅಶೋಕ ಅವರ ತಲೆಗೆ ಸಣ್ಣ ತರಚಿದ ಗಾಯವಾಯಿತು. ಇನ್ನೊಂದೆಡೆ ತಮ್ಮನ್ನು ವಶಕ್ಕೆ ಪಡೆಯಲು ಪೊಲೀಸರ ಪ್ರಯತ್ನವನ್ನು ಸಂಸದೆ ಶೋಭಾ ಕರಂದ್ಲಾಜೆ ಬಹು ಹೊತ್ತು ವಿಫಲಗೊಳಿಸಿದರು. ಪ್ರತಿಭಟನೆ ಯಲ್ಲಿ ಶಾಸಕರಾದ ನಾರಾಯಣ ಸ್ವಾಮಿ, ಎಸ್.ಆರ್.ವಿಶ್ವನಾಥ, ಡಾ.ಅಶ್ವತ್ಥನಾರಾಯಣ, ಮುನಿರಾಜು, ರಘು, ಮುಖಂಡರಾದ ಅಬ್ದುಲ್ ಅಜೀಂ, ಸದಾಶಿವ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇದ್ದರು.

Leave a Reply

Your email address will not be published. Required fields are marked *