ಕಾಂಗ್ರೆಸ್-ಬಿಜೆಪಿ ನಡೆ ನಿಗೂಢ

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡಿದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಏ. 23ರಂದು ನಡೆಯಲಿರುವ ಲೋಕಸಭೆ ಚುನಾವಣೆ ನಂತರ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅಕಾಲಿಕ ನಿಧನದ ನಂತರ ತೆರವುಗೊಂಡ ಸ್ಥಾನಕ್ಕೆ ಮೇ 19ರಂದು ಉಪ ಚುನಾವಣೆ ನಡೆಯಲಿದೆ. ಏ. 29ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ.

ಅನುಕಂಪದ ಆಧಾರದ ಮೇಲೆ ಕ್ಷೇತ್ರವನ್ನು ಗೆಲ್ಲುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್, ಶಿವಳ್ಳಿ ಅವರ ಪತ್ನಿ ಕುಸುಮಾ ಅಥವಾ ಅವರ ಸಹೋದರರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದರ ಬಗ್ಗೆ ಗೊಂದಲದಲ್ಲಿದೆ. ಕುಸುಮಾ ಶಿವಳ್ಳಿ ಈಗಾಗಲೇ ಪಕ್ಷ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಕ್ಷೇತ್ರದ ಚುನಾವಣೆ ಆಕಾಂಕ್ಷಿಗಳ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ರ್ಚಚಿಸಿದ್ದಾರೆ.

ಕಳೆದ ಬಾರಿ ಕೇವಲ 634 ಮತಗಳ ಅಂತರದಿಂದ ಸೋಲು ಕಂಡಿದ್ದ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವುದು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಆದರೆ ಮುಂದಿನ ಬಾರಿ ಪಕ್ಷದ ಟಿಕೆಟ್ ನೀಡುವುದಾಗಿ ಬಿಜೆಪಿ ಮುಖಂಡರಿಂದ ಆಶ್ವಾಸನೆ ಪಡೆದಿದ್ದ ಎಂ.ಆರ್. ಪಾಟೀಲ ಈ ಬಾರಿ ತಮಗೇ ಟಿಕೆಟ್ ನೀಡಬೇಕೆಂಬ ಒತ್ತಡ ಹೇರುತ್ತಿದ್ದಾರೆ.

ಎರಡೂ ಪಕ್ಷಗಳ ಮುಖಂಡರು ಧಾರವಾಡ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ವ್ಯಸ್ತರಾಗಿದ್ದು, ನಂತರವೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ತೀರ್ವನಿಸಿದ್ದಾರೆ.

ಈ ಮಧ್ಯೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಸಹಕಾರ ನೀಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಅಂತಿಮಗೊಂಡಿಲ್ಲವಾದರೂ, ಮೈತ್ರಿ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಏ. 25ರಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಅಂದು ಅಥವಾ ಮಾರನೇ ದಿನ ಕುಂದಗೋಳ ವಿಧಾನಸಭೆ ಕ್ಷೇತ್ರದ ಟಿಕೆಟ್ ಅಂತಿಮಗೊಳ್ಳಲಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವ ವಿಶ್ವಾಸ ಇದೆ. |ಅನಿಲಕುಮಾರ ಪಾಟೀಲ, ಅಧ್ಯಕ್ಷರು, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್

ಕುಂದಗೋಳ ಕ್ಷೇತ್ರಕ್ಕೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಏ. 24ರಂದು ಸಭೆ ಕರೆದು, ಆಕಾಂಕ್ಷಿಗಳ ಹೆಸರನ್ನು ಬಿಜೆಪಿ ರಾಜ್ಯ ಘಟಕಕ್ಕೆ ಕಳುಹಿಸಲಾಗುವುದು. ಏ. 26ರೊಳಗೆ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ. – ಈರಣ್ಣ ಜಡಿ, ಅಧ್ಯಕ್ಷರು, ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ