ಗುಂಡ್ಲುಪೇಟೆ: ಗುಂಡ್ಲುಪೇಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದು, ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಾಲೂಕಿನ ಚನ್ನಮಲ್ಲೀಪುರದಲ್ಲಿ ಬಿಜೆಪಿ ಕಾರ್ಯಕರ್ತ ಗೋಪಾಲಪ್ಪ ಮತ್ತು ಕಾಂಗ್ರೆಸ್ ಕಾರ್ಯಕರ್ತ ನಂದೀಶ್ ಮಧ್ಯೆ ಸೋಮವಾರ ರಾತ್ರಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ವಿಚಾರದಲ್ಲಿ ವಾದ-ವಿವಾದ ನಡೆದು ಜಗಳವಾಗಿದೆ. ಉಚಿತ ಗ್ಯಾರಂಟಿ ಹಾಗೂ ಭಾಗ್ಯಗಳ ಕುರಿತು ಗೋಪಾಲಪ್ಪ, ಕಾಂಗ್ರೆಸ್ ಮತದಾರರನ್ನು ಯಾಮಾರಿಸಿದೆ ಎಂದು ಟೀಕಿಸಿದ್ದಾರೆ. ಇದನ್ನು ಪ್ರಶ್ನಿಸಿದ ನಂದೀಶ್ ಹಾಗೂ ಗೋಪಾಲಪ್ಪ ನಡುವೆ ಜಗಳ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅಲ್ಲದೆ, ಸ್ಥಳದಲ್ಲೇ ಇದ್ದ ಗೋಪಾಲಪ್ಪ ಅವರ ಮಗನೂ ತನ್ನ ತಂದೆಯನ್ನು ರಕ್ಷಿಸಿಕೊಳ್ಳಲು ನಂದೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆದಾಟದಲ್ಲಿ ಗೋಪಾಲಪ್ಪ ಹಾಗೂ ನಂದೀಶ್ ಇಬ್ಬರೂ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಎರಡೂ ಪಕ್ಷಗಳ ಕಾರ್ಯಕರ್ತರು ಮಂಗಳವಾರ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಸಂಬಂಧ ಗೋಪಾಲಪ್ಪ ಅವರ ಮಗ ಮನು ಎಂಬಾತನನ್ನು ಬಂಧಿಸಿದ್ದಾರೆ.