ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆ ಸಿದ್ಧತೆ ಜೋರು

ಹಾವೇರಿ: ಜಿಲ್ಲೆಯ ಹಿರೇಕೆರೂರ ಹಾಗೂ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೊಷಣೆಯಾಗಿದ್ದು, ಭಾನುವಾರ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಬಿಜೆಪಿಯವರು ಸುಪ್ರೀಂಕೋರ್ಟ್ ತೀರ್ಪಿನತ್ತ ಚಿತ್ತ ಹರಿಸಿದ್ದಾರೆ.

ಎರಡೂ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಹುಮ್ಮಸ್ಸು ತಂದಿದ್ದು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆ ಸಿದ್ಧತೆಯ ಕುರಿತು ಚರ್ಚೆ ಆರಂಭಿಸಿದ್ದಾರೆ.

ಹಿರೇಕೆರೂರ ಕ್ಷೇತ್ರದ ವೀಕ್ಷಕ ಡಿ.ಆರ್. ಪಾಟೀಲ ನೇತೃತ್ವದಲ್ಲಿ ಬಿ.ಎನ್. ಬಣಕಾರ ಅವರ ನಿವಾಸದಲ್ಲಿ ಭಾನುವಾರ ಪ್ರಮುಖರ ಸಭೆ ಸೇರಿ ಚುನಾವಣೆಯ ಮುಂದಿನ ಸಿದ್ಧತೆಗಳ ಕುರಿತು ರ್ಚಚಿಸಿದರು.

ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆ ಎದುರಿಸಲು ಸಜ್ಜಾಗುವಂತೆ ಸೂಚಿಸಬೇಕು. ಪಕ್ಷವು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಆಕಾಂಕ್ಷಿಗಳಲ್ಲಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಎಲ್ಲರೂ ಸರ್ವಾನುಮತದಿಂದ ಬೆಂಬಲಿಸಬೇಕು. ಕ್ಷೇತ್ರದ ಮಾಜಿ ಶಾಸಕರು ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಮೋಸ ಮಾಡಿದ್ದು, ಅವರೇನಾದರೂ ಚುನಾವಣೆಗೆ ಸ್ಪರ್ಧಿಸಿದರೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಮತದಾರರು ಕಾಯ್ದು ಕುಳಿತಿದ್ದಾರೆ. ಅವರನ್ನೆಲ್ಲ ಒಗ್ಗೂಡಿಸಿ ಕೆಲಸ ಮಾಡಬೇಕು. ಬಿ.ಸಿ. ಪಾಟೀಲರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಹಿಂದಿನ ಸರ್ಕಾರದ ಸಾಧನೆಗಳಾಗಿವೆ. ಅವುಗಳನ್ನು ಜನರಿಗೆ ಸಮರ್ಪಕವಾಗಿ ತಿಳಿಸುವ ಕಾರ್ಯವನ್ನು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮಾಡಬೇಕು ಎಂದು ಮುಖಂಡರು ವಿವಿಧ ಘಟಕಗಳ ಪ್ರಮುಖರಿಗೆ ಸೂಚಿಸಿದ್ದಾರೆ.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಇತರ ಮುಖಂಡರು ಮಾತನಾಡಿ, ಕಾರ್ಯಕರ್ತರು ಪಕ್ಷ ದ್ರೋಹಿಗಳಿಗೆ ತಕ್ಕಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದರು. ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಮುಖಂಡರಾದ ಬಿ.ಎನ್. ಬಣಕಾರ, ಅಶೋಕ ಪಾಟೀಲ, ಎಸ್.ಬಿ. ತಿಪ್ಪಣ್ಣನವರ, ಸಲೀಂ ಮುಲ್ಲಾ, ರಾಜು ಒಡೆಯರ, ಉಳಿವೆಪ್ಪ ಸಾಲಿ, ಸತೀಶ ತಂಬಾಕದ, ದುರುಗಪ್ಪ ನೀರಲಗಿ, ಶಿವನಗೌಡ, ಪರಮೇಶಪ್ಪ ಕಟ್ಟೆಕಾರ, ಶೇಖಣ್ಣ ಉಕ್ಕುಂದ ಇತರರಿದ್ದರು.

ಸುಪ್ರೀಂ ತೀರ್ಪಿನತ್ತ ಬಿಜೆಪಿ ಚಿತ್ತ

ಅನರ್ಹ ಶಾಸಕರ ಪ್ರಕರಣ ಸೆ. 23ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದ್ದು, ಅಲ್ಲಿನ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಬಿಜೆಪಿ ನಾಯಕರು ಚಿಂತನೆಯಲ್ಲಿ ತೊಡಗಿದ್ದಾರೆ. ಇನ್ನು ಅನರ್ಹ ಶಾಸಕರಿಬ್ಬರು ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳುವರು ಎಂಬುದನ್ನು ಕಾಯ್ದು ನೋಡುತ್ತಿದ್ದಾರೆ.

ರಾಣೆಬೆನ್ನೂರಿಗೆ ಸಿದ್ದರಾಮಯ್ಯ ಬರ್ತಾರೆ

ರಾಣೆಬೆನ್ನೂರ: ಕ್ಷೇತ್ರದಲ್ಲಿ ಆರ್. ಶಂಕರ ಆಗಲಿ, ಯಾರೇ ಬರಲಿ ಅವರನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್​ಗೆ ಇದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅಚ್ಚರಿ ಮೂಡಿಸಿದರು.

ನಗರದಲ್ಲಿ ಭಾನುವಾರ ವಿಜಯವಾಣಿ ಹಾಗೂ ದಿಗ್ವಿಜಯದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ, ಆದರೆ, ಇವತ್ತು ಪರಿಸ್ಥಿತಿ ಬೇರೆಯಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಡಳಿತ ಕುರಿತು ಜನರಿಗೆ ತಿಳಿಹೇಳಿ ಚುನಾವಣೆ ಎದುರಿಸುತ್ತೇವೆ ಎಂದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನಲ್ಲಿ ಯಾವುದನ್ನೂ ಹೇಳೋಕೆ ಆಗಲ್ಲ. ಚುನಾವಣೆ ಮಾಡಿ ಬಹುಮತದಿಂದ ನಮ್ಮ ಕಾಂಗ್ರೆಸ್ ಬಂದರೆ, ಹೈಕಮಾಂಡ್ ಸಿಎಲ್​ಪಿ ಸಭೆ ಕರೆದು ಒಮ್ಮತದ ನಿರ್ಣಯ ಸಂಗ್ರಹಿಸುತ್ತದೆ. ಹೈಕಮಾಂಡ್ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿ ಆಗುತ್ತಾರೆ. ನಮ್ಮಷ್ಟಕ್ಕೆ ನಾವೇ ಆಗುತ್ತವೆ ಎಂದರೆ ಆಗಲ್ಲ. ಕಾಂಗ್ರೆಸ್ ಪಕ್ಷದ ವ್ಯವಸ್ಥೆಯೇ ಹಾಗಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಕೈ ಬಲಪಡಿಸಲು ಕಾರ್ಯತಂತ್ರ

ರಾಣೆಬೆನ್ನೂರ ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೊಷಣೆ ಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಂಡಿದೆ. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ನೇತೃತ್ವದಲ್ಲಿ ಭಾನುವಾರ ನಗರದ ಕೋಳಿವಾಡರ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.

‘ಕಾರ್ಯಕರ್ತರು ಬೂತ್​ವುಟ್ಟ ದಿಂದಲೇ ಮತದಾರರನ್ನು ಸೆಳೆಯಲು ಮುಂದಾಗಬೇಕು. ಈ ಹಿಂದೆ ಆಯ್ಕೆಯಾದ ಶಾಸಕರು ಕ್ಷೇತ್ರಕ್ಕೆ ಯಾವುದೇ ಅನುದಾನ, ವಿಶೇಷ ಯೋಜನೆ ಜಾರಿಗೊಳಿಸಿಲ್ಲ. ಕ್ಷೇತ್ರದ ಜನರ ಕೈಗೂ ಅವರು ಸಿಗುತ್ತಿರಲಿಲ್ಲ. ಇದರಿಂದ ಮತದಾರರು ಅಸಮಾಧಾನ ಗೊಂಡಿದ್ದಾರೆ. ಹೊರಗಿ ನವರನ್ನು ಗೆಲ್ಲಿಸಿದರೆ ಇಂಥ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕುರಿತು ಪ್ರತಿ ಮತದಾರರ ಮನೆಮನೆಗೂ ತೆರಳಿ ಜಾಗೃತಿ ಮೂಡಿಸಬೇಕು’ ಎಂದು ಕೆ.ಬಿ. ಕೋಳಿವಾಡ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಮಾಜಿ ಶಾಸಕ ಡಿ.ಆರ್. ಪಾಟೀಲ, ಪಕ್ಷ ಬಿಟ್ಟು ಹೋಗುವವರಿಗೆ ಹಾಗೂ ಕ್ಷೇತ್ರದ ಜನರ ಮತದಿಂದ ಗೆದ್ದು ಅವರನ್ನು ತಿರುಗಿ ನೋಡದವರಿಗೆ ಪಾಠ ಕಲಿಸಲು ಇದೊಂದು ಅವಕಾಶ. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕು ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ಪ್ರಮುಖರಾದ ಆರ್.ಎಂ. ಕುಬೇರಪ್ಪ, ಪುಟ್ಟಪ್ಪ ಮರಿಯಮ್ಮನವರ, ಎ.ಎಂ. ನಾಯಕ, ಶೇರುಖಾನ ಖಾಬುಲಿ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಂಚಲನ ಮೂಡಿಸಿದ ಕಾಂತೇಶ ಈಶ್ವರಪ್ಪ

ಕಳೆದ ಮೂರು ತಿಂಗಳಿಂದ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಓಡಾಡುತ್ತಿರುವುದು ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳು 2ನೇ ಸ್ಥಾನದಲ್ಲಿ ನಿರ್ಣಾಯಕ ಆಗಿರುವುದರಿಂದ ಹಾಗೂ ಆರ್. ಶಂಕರ ಇಲ್ಲವಾದರೆ ಕಾಂತೇಶ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಕಾಂತೇಶ ಅವರು ತಮ್ಮ ಶಾಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ಕ್ಷೇತ್ರದಲ್ಲಿ ಓಡಾಡುತ್ತ ಈಗಾಗಲೇ ಜನರ ಗಮನ ಸೆಳೆದಿದ್ದಾರೆ. ಆದ್ದರಿಂದ ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ ಎಂದು ಬಿಜೆಪಿ ಮುಖಂಡ ಸಿದ್ದು ಚಿಕ್ಕಬಿದರಿ ‘ವಿಜಯವಾಣಿ’ಗೆ ತಿಳಿಸಿದರು.

Leave a Reply

Your email address will not be published. Required fields are marked *