ಕೊಪ್ಪಳ:ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ. ಚುನಾವಣೆಯಲ್ಲಿ ನೀಡಿದ ಭರವಸೆಗಳ ಪೈಕಿ ಐದೂ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ತಾಲೂಕಿನ ಗಿಣಗೇರಾ ಹಾಗೂ ಹಿಟ್ನಾಳ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಜನಸಂಪರ್ಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ ಅನುಷ್ಠಾನವಾಗಿವೆ. ಇದೇ ತಿಂಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಜಾರಿಯಾಗಲಿದೆ. ವಿಪಕ್ಷದವರು ಅನಗತ್ಯವಾಗಿ ಯೋಜನೆ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲವಾಗಿದೆ. ಪ್ರತಿ ಮನೆಗೆ ತಿಂಗಳಿಗೆ 4-5ಸಾವಿರ ರೂ.ಹಣ ನೇರವಾಗಿ ಹೋಗುತ್ತಿದೆ. ಇದರಿಂದ ಬಡತನ ನಿರ್ಮೂಲನೆಯಾಗಲಿದೆ ಎಂದರು.
ಗುಳದಲ್ಲಿ ಗ್ರಾಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾಚಕ್ಕಿ ವಿತರಣೆಯ ಕಾರ್ಯಕ್ರಮಕ್ಕೆ ಶಾಸಕ ಹಿಟ್ನಾಳ್ ಚಾಲನೆ ನೀಡಿದರು. ಗಬ್ಬೂರು ಗ್ರಾಮದಲ್ಲಿ ಫಲಾನುಭವಿಗಳಿಗೆ ಪಂಪ್ ಮೋಟಾರ್ ಹಾಗೂ ಪೂರಕ ಸಾಮಗ್ರಿ ವಿತರಿಸಲಾಯಿತು.
ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ ಗಲಬಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಪ್ರಮುಖರಾದ ಅಲಿಸಾಬ್, ಗಿರೀಶ್ ಹಿರೇಮಠ, ನಿಂಗಜ್ಜ ಶಹಾಪುರ, ಸಿದ್ದರಾಮಪ್ಪ ಕೆರೆಹಳ್ಳಿ, ಹನುಮಂತ ಹುಲಿಗಿ, ಶಿವಮೂರ್ತಿ ಬೇವಿನಳ್ಳಿ ಇತರರಿದ್ದರು.