ಕಾಂಗ್ರೆಸ್ ನಂಬಿ ನಾವು ಹಾಳಾದ್ವಿ

ತುಮಕೂರು: ಜಿಲ್ಲೆಯಲ್ಲಿ ಎಚ್.ಡಿ.ದೇವೇಗೌಡರ ಸೋಲಿಗೆ ಮೈತ್ರಿ ಪಕ್ಷದ ಕಾಂಗ್ರೆಸ್ ಮುಖಂಡರೇ ಕಾರಣ. ನಮಗೆ ಅವರ ಸಹವಾಸವೇ ಬೇಡ ಎಂದು ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಗುಡುಗಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ, ಧೈರ್ಯವಿದ್ದರೆ ಬಹಿರಂಗವಾಗಿ ಹೇಳಿಕೊಳ್ಳಲಿ ಎಂದು ಸವಾಲೆಸೆದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್​ಗೆ ಹಿನ್ನಡೆ ಆಗುವಂತೆ ಮಾಡಲು ವ್ಯವಸ್ಥಿತವಾಗಿ ಪಿತೂರಿ ಮಾಡಿದರು. ಮಾಜಿ ಸಚಿವ ಸೊಗಡು ಶಿವಣ್ಣ, ಕೆ.ಎನ್.ರಾಜಣ್ಣ ಮತ್ತಿತರರು ಬಸವರಾಜು ಜತೆ ಸೇರಿಕೊಂಡು ಬಿಜೆಪಿಗೆ ಮುನ್ನಡೆ ಕೊಡಿಸಿದರು. ಆದರೆ ನಾವು ಕಾಂಗ್ರೆಸ್ ನಂಬಿ ಹಾಳಾದೆವು ಎಂದರು.

ಕೈ ಮುಖಂಡರನ್ನು ಸಮಾಧಾನಪಡಿಸುವುದರಲ್ಲೇ ಚುನಾವಣೆ ಮುಗಿಯಿತು, ಪೂರ್ವ ತಯಾರಿಗೂ ಸಮಯ ಇರಲಿಲ್ಲ, ಕಾಂಗ್ರೆಸ್ ಅಷ್ಟೊಂದು ಮೋಸ ಮಾಡಿದ್ದರೂ ನಾವು ಉತ್ತಮ ಮತ ಪಡೆದಿದ್ದೇವೆ. ಆದರೆ, ಗೆಲ್ಲುವ ಮತ ಸಿಕ್ಕಿಲ್ಲವಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಾನು ಗೆದ್ದಾಗ ಅಡ್ಜೆಸ್ಟ್​ಮೆಂಟ್ ಎಂದು ದೂರಿದ್ದವರೇ ಇಂದು ಕಾಂಗ್ರೆಸ್ ಮುಖಂಡರ ಜತೆ ಅಡ್ಜೆಸ್ಟ್​ಮೆಂಟ್ ಮಾಡಿಕೊಂಡು ಜೆಡಿಎಸ್​ಗೆ ಹಿನ್ನಡೆ ಮಾಡಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ನೀತಿಗೆಟ್ಟ ಹೊಂದಾಣಿಕೆಯ ನಾಯಕರು ನೇರವಾಗಿ ಯುದ್ಧಕ್ಕೆ ಬರಲಿ ಎಂದು ಸವಾಲೆಸೆದರು.

ಜಿ.ಎಸ್.ಬಸವರಾಜುಗೆ ಲೋಕಸಭೆಯಲ್ಲಿ ಮಾತನಾಡುವ ಸಾಮರ್ಥ್ಯವಿಲ್ಲ, ಗಂಗೆಯ ಶಾಪ ಎಂದು ಸುಳ್ಳು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ಜಿಲ್ಲೆಯ ಕೆರೆಗಳನ್ನು ತುಂಬಿಸದಿದ್ದರೆ ಜನರು ಅವರ ಕೊರಳಪಟ್ಟಿ ಹಿಡಿದು ಕೇಳಬೇಕು ಎಂದರು.

ಮುಖಂಡರಾದ ಬೆಳಗುಂಬ ವೆಂಕಟೇಶ್, ಉಮೇಶ್, ಹಾಲನೂರು ಅನಂತ್, ಕೆಂಪರಾಜಯ್ಯ ಮತ್ತಿತರರು ಇದ್ದರು.

ಕಾಂಗ್ರೆಸ್ ದೂರವಿಟ್ಟು ನಾವೇ ಚುನಾವಣೆ ಮಾಡಿದ್ದರೆ ದೇವೇಗೌಡರು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಅಧಿಕಾರಕ್ಕಾಗಿ ದೊಡ್ಡ ನಾಯಕರು ಒಂದಾದರೂ ತಳಮಟ್ಟದ ಕಾರ್ಯಕರ್ತರು ಒಂದಾಗಲಿಲ್ಲ. ಕಾಂಗ್ರೆಸ್ ಸಹವಾಸ ನಮಗೆ ಸಾಕು.

| ಡಿ.ಸಿ.ಗೌರಿಶಂಕರ್, ಜೆಡಿಎಸ್ ಶಾಸಕ

ಕೆಎನ್​ಆರ್ ವಿರುದ್ಧ ಗೌರಿಶಂಕರ್ ಗರಂ! : ಮಾಜಿ ಶಾಸಕ ಕೆ.ಎನ್.ರಾಜಣ್ಣ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾನು ಮಾತನಾಡಬೇಕಾಗುತ್ತದೆ. ಸರ್ಕಾರದಲ್ಲಿ ದುಡ್ಡು ಹೊಡೆದಿರುವ ಗೌಡರ ಕುಟುಂಬ ದೇವಾಲಯಕ್ಕೆ ಹೋಗುತ್ತಿದೆ ಎಂದಿರುವ ರಾಜಣ್ಣ ಅಪೆಕ್ಸ್ ಬ್ಯಾಂಕ್ ನೇಮಕಾತಿಯಲ್ಲಿ ನಡೆಸಿರುವ ಅವ್ಯವಹಾರದ ಬಗ್ಗೆ ನಾವು ಮಾತನಾಡುತ್ತೇವೆ ಎಂದು ಗೌರಿಶಂಕರ್ ಎಚ್ಚರಿಸಿದರು.

ರಾಜಣ್ಣ ಮಾತನಾಡುವಾಗ ವಯಸ್ಸಿಗೆ ತಕ್ಕನಾಗಿ ಮಾತನಾಡಬೇಕು. ನಾವೇನು ಅವರ ಮನೆ ಕೂಲಿಯಾಳುಗಳಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋತರೆ ವೀರಭದ್ರಯ್ಯನ ಮನೆಯಲ್ಲಿ ಕಸ ಹಾಕುತ್ತೇನೆ ಎಂದು ಹೇಳಿದ್ದ ಅವರು, ಮೊದಲು ಆ ಮಾತು ಪಾಲಿಸಲಿ. ರಾಜಣ್ಣ ಗೆದ್ದು ಮಂತ್ರಿಯಾಗಿದ್ದರೆ ಇದೇ ಸರ್ಕಾರ ಒಳ್ಳೆಯದು, ಆದರೆ ದುರಹಂಕಾರದಿಂದ ಸೋತು ಮನೆಯಲ್ಲಿರುವವರಿಗೆ ಈ ಸರ್ಕಾರ ಇಷ್ಟವಾಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಮಧುಗಿರಿಯಲ್ಲಿ ರಾಜಣ್ಣ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ, ಧೈರ್ಯವಿದ್ದರೆ ಗೆದ್ದು ತೋರಿಸಲಿ ಎಂದು ಸವಾಲೆಸೆದರು.

Leave a Reply

Your email address will not be published. Required fields are marked *