ಹುಬ್ಬಳ್ಳಿ : ಕಾಂಗ್ರೆಸ್ ದುರ್ಬಲ ರಾಜಕೀಯ ಪಕ್ಷ ಅಲ್ಲ. ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಚಿಗುರೇಳಲಿದೆ. ಇಲ್ಲಿನ ಫಲಿತಾಂಶ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಲ್ಹೋತ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಸರ್ಕಾರ ರಚಿಸುವುದು ಖಚಿತ. ಬಿಜೆಪಿ ಮುಖಂಡರಲ್ಲಿ ಈ ಬಗ್ಗೆ ಆತಂಕ ಮೂಡಿದೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿಯ ಇತರ ರಾಷ್ಟ್ರೀಯ ಮುಖಂಡರು ಇಲ್ಲಿ ಬೀಡುಬಿಟ್ಟಿದ್ದಾರೆ ಎಂದರು.
ಬಿಜೆಪಿಯವರಿಗೆ ಆಡಳಿತ ನಡೆಸುವುದಕ್ಕಿಂತ ಚುನಾವಣೆ ಮುಖ್ಯವಾಗಿದೆ. ಕೇಂದ್ರದ ಇಡಿ ಸರ್ಕಾರ ಕರ್ನಾಟಕ ಚುನಾವಣೆಯಲ್ಲಿ ವ್ಯಸ್ತವಾಗಿದೆ. ಕೇಂದ್ರದಲ್ಲಿ ಅಧಿಕಾರ ತಟಸ್ಥವಾಗಿದೆ ಎಂದು ದೂರಿದರು.
ಕರ್ನಾಟಕ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟವಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪ್ರಧಾನಿ ಮೋದಿ, ತಮ್ಮ ಅಕ್ಕಪಕ್ಕದಲ್ಲಿ ಭ್ರಷ್ಟ ರಾಜಕರಾಣಿಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಹಿಂಸೆ, ಜನಾಂಗೀಯ ಹೊಡೆದಾಟ ಹೆಚ್ಚಾಗಿದೆ. ಇದರ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಅಟ್ಟಲಾಗುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೂ, ಬಿಜೆಪಿ ಆಡಳಿತಕ್ಕೂ ಹೋಲಿಕೆ ಮಾಡಿದಾಗ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿರುವುದು ಕಾಣಿಸುತ್ತದೆ. ಮತದಾರರು ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎಂದರು.
ಆರ್ಎಸ್ಎಸ್ ಅನುಯಾಯಿ, ಬಿಜೆಪಿಯಿಂದ 6 ಬಾರಿ ಗೆದ್ದಿರುವ ಜಗದೀಶ ಶೆಟ್ಟರ್ ಅವರು ಆ ಪಕ್ಷದಿಂದ ಹೊರಗೆ ಬರಬೇಕಾದರೆ ಅಲ್ಲಿನ ಉಸಿರುಗಟ್ಟುವ ವಾತಾವರಣ ಹೇಗಿರಬೇಕೆಂಬುದನ್ನು ಊಹಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಿಸುವ ಭರವಸೆ ನೀಡಿದ್ದರಿಂದ ಅಚ್ಚರಿಪಡಬೇಕಿಲ್ಲ. ಜನಾಂಗೀಯ ಆಧಾರದ ಮೇಲೆ ಸಂಘಟನೆಗಳನ್ನು ಕಟ್ಟಿಕೊಂಡು, ಗಲಭೆ ಸೃಷ್ಟಿಸುವ ಸಂಘಟನೆಗಳನ್ನು ನಿಷೇಧಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ರಾಜಸ್ಥಾನ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದೆ. ಪ್ರಣಾಳಿಕೆಯಲ್ಲಿನ ಬಹುತೇಕ ಭರವಸೆಗಳನ್ನು ಈಡೇರಿಸಿದೆ ಎಂದು ತಿಳಿಸಿದರು.
ಮಾಜಿ ಸಿಎಂ, ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್, ಎಐಸಿಸಿ ವಕ್ತಾರ ರೋಹನ ಗುಪ್ತಾ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.