ಕಾಂಗ್ರೆಸ್-ಜೆಡಿಎಸ್​ಗೆ ತಕ್ಕ ಪಾಠ

ಲಕ್ಷೆ್ಮೕಶ್ವರ:ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಶಿವಕುಮಾರ ಉದಾಸಿ ಅವರ ಪ್ರಚಾರಾರ್ಥ ಗುರುವಾರ ಆಯೋಜಿಸಿದ್ದ ಬೃಹತ್ ರೋಡ್​ಶೋನಲ್ಲಿ ಅವರು ಮಾತನಾಡಿದರು.

ದೇವೇಗೌಡರಿಗೆ ಹಳೇ ಮೈಸೂರು ಮಾತ್ರ ರಾಜ್ಯವಾಗಿದೆ. ಈ ಕ್ಷೇತ್ರಗಳಲ್ಲಿ ಜಾತಿ, ಧರ್ಮ, ಹಣ, ಅಧಿಕಾರ ಮತ್ತು ತೋಳ್ಬಲ ಬಳಸಿ ರಾಜಕಾರಣ ಮಾಡುತ್ತಿರುವ ಇವರು, ತಾಕತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ರಾಜಕಾರಣ ಮಾಡಲಿ ಎಂದು ಸವಾಲು ಹಾಕಿದರು.

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್​ಖಾನ್, ಮೋದಿ ಮತ್ತೆ ಪ್ರಧಾನಿಯಾದರೆ ಮಾತ್ರ ಕಾಶ್ಮೀರ ಮತ್ತು ಭಯೋತ್ಪಾದನೆ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ. ಇದನ್ನು ಮೋದಿ ವಿರೋಧಿಗಳು ಅರ್ಥಮಾಡಿಕೊಂಡು ಬಿಜೆಪಿ ಬೆಂಬಲಿಸಲು ಮುಂದಾಗಲಿ. ಅಲ್ಪಸಂಖ್ಯಾತರು ಕಾಂಗ್ರೆಸ್​ನವರು ಹಾಕಿರುವ ಟೋಪಿ ಕಿತ್ತೆಸೆದು, ಸದೃಢ ರಾಷ್ಟ್ರ ನಿರ್ವಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ, ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಾ. ವೈ.ಎಫ್.ಹಂಜಿ, ಅಶೋಕ ಪಲ್ಲೇದ, ವಿರೂಪಾಕ್ಷಪ್ಪ ಅಣ್ಣಿಗೇರಿ, ಪೂರ್ಣಾಜಿ ಖರಾಟೆ, ನಿಂಗಪ್ಪ ಬನ್ನಿ, ಸೋಮಣ್ಣ ಡಾಣಗಲ್, ನೀಲಪ್ಪ ಕರ್ಜೆಕಣ್ಣವರ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಡಾ. ಭೀಮಸಿಂಗ್ ರಾಥೋಡ, ಸಿದ್ಧನಗೌಡ ಬಳ್ಳೊಳ್ಳಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆ ದೇಶದ ಭದ್ರತೆ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಹಗರಣಗಳ ಪಕ್ಷವಾಗಿದೆ. ಆದರೆ, ಮೋದಿಯವರನ್ನು ರಫೆಲ್ ಹಗರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದೆ. ದೇಶದ ಅಭಿವೃದ್ಧಿಗಾಗಿ ಮೋದಿ ಕೈ ಬಲಪಡಿಸಲು ಶಿವಕುಮಾರ ಉದಾಸಿ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಮೋದಿ ಪರ ಘೊಷಣೆ

ರೋಡ್​ಶೋ ಸೋಮೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾಗಿ ಗದಗ ನಾಕಾ, ಹೊಸ ಬಸ್ ನಿಲ್ದಾಣ, ಶಿಗ್ಲಿ ನಾಕಾ, ಮುಖ್ಯ ಬಜಾರ್ ರಸ್ತೆ ಮೂಲಕ ಪೇಟೆ ಹನುಮಂತದೇವರ ದೇವಸ್ಥಾನ, ಭರಮದೇವರ ಸರ್ಕಲ್, ಹಳ್ಳದಕೇರಿ, ವಿದ್ಯಾರಣ್ಯ, ವೃತ್ತಪಂಪವೃತ್ತದ ವರೆಗೆ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ ಪರ ಘೊಷಣೆ ಮೊಳಗಿಸಿದರು.