More

  ಕಾಂಗ್ರೆಸ್ ಗೆ ಪ್ರಧಾನಿ ಅಭ್ಯರ್ಥಿ ಕೊರತೆ ಇಲ್ಲ

  * ಸಿಎಂ ಸಿದ್ದರಾಮಯ್ಯ ಹೇಳಿಕೆ 

   * ಗ್ಯಾರಂಟಿ ಯೋಜನೆಗಳ ಪುನರುಚ್ಛಾರ

  ಕೊಪ್ಪಳ: ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲವೆಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಯಾವುದರಲ್ಲಿ ಕಡಿಮೆ ಇದ್ದಾರೆ. ಬಿಜೆಪಿಯಂತೆ ಒಂದೇ ಅವಧಿಯಲ್ಲಿ ಮೂರು ಸಿಎಂಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  ಕುಷ್ಟಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಪ್ರಜಾಧ್ವನಿ ಲೋಕಸಭಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

  ಬಿಜೆಪಿ ಮೂರು ವರ್ಷ ಆಡಳಿತ ಮಾಡಿದರೂ ರಾಜ್ಯ ಅಭಿವೃದ್ಧಿ ಮಾಡಿಲ್ಲ. ರಾಜ್ಯ ಲೂಟಿ ಹೊಡೆದಿದ್ದಾರೆ. ತನಿಖೆಗೆ ಆಯೋಗ ರಚಿಸಿದ್ದು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲಿದೆ. ಮೋದಿ ಹತ್ತು ವರ್ಷ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ಮಾಡಿದ್ದಾರೆ. ದಲಿತರು, ಬಡವರು, ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಬೆಲೆ ಏರಿಕೆ ಪರಿಣಾಮ ಸಾಮಾನ್ಯರು ಬದುಕು ದುಸ್ತರವಾಗಿದೆ. ನಾವು ಐದು ಗ್ಯಾರಂಟಿ ಘೋಷಣೆ ಮಾಡಿ ಎಂಟು ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆಯಡಿ 200 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.

  ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡಲು ಕೇಂದ್ರ ನಿರಾಕರಿಸಿತು. ಇದು ಬಿಜೆಪಿ ಜನರಿಗೆ ಮಾಡಿದ ದೊಡ್ಡ ದ್ರೋಹ. ಆದರೂ ನಾವು ಐದು ಕೆಜಿ ಅಕ್ಕಿ ಮೊತ್ತವನ್ನು ನಿಮ್ಮ ಖಾತೆಗೆ ಹಾಕುತ್ತಿದ್ದೇವೆ. 1.5 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ. ಗೃಹ ಲಕ್ಷ್ಮೀ ಯೋಜನೆಯಡಿ 1.20 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2 ಸಾವಿರ ರೂ. ಹಾಕಲಾಗುತ್ತಿದೆ. ಏಪ್ರೀಲ್ ವರೆಗೆ ಕೊಟ್ಟಿದ್ದೇವೆ. ಮೋದಿ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಕೊಡಲಿಲ್ಲ. ಬದಲಿಗೆ ಚುನಾವಣೆ ಬಳಿಕ ನಾವು ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ನಾಲ್ಕು ವರ್ಷ ಇರಲಿದ್ದು, ಪ್ರತಿ ತಿಂಗಳು ಬರುತ್ತವೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.

  ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನವಲಿ‌ ಜಲಾಶಯ ನಿರ್ಮಿಸಬೇಕೆಂಬುದು ಈ ಭಾಗದ ಬೇಡಿಕೆ. ಈಗಾಗಲೇ ಬಜೆಟ್ ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಚುನಾವಣೆ ಮುಗಿದ ಬಳಿಕ ತೆಲಂಗಾಣ, ಆಂಧ್ರ ಸರ್ಕಾರಗಳೊಂದಿಗೆ ಮಾತನಾಡಲಾಗುವುದು. ಕಳೆದ ಬಾರಿ ನಮ್ಮ ಕುದುರೆ ಸೋತಿತ್ತು. ಸಂಗಣ್ಣ ಗೆದ್ದಿದ್ದರು. ಈಗ ಸಂಗಣ್ಣ ನಮ್ಮೊಂದಿಗಿದ್ದಾರೆ. ಇನ್ನಷ್ಟು ಶಕ್ತಿ ಬಂದಿದೆ. ನೀವು ಆಶೀರ್ವಾದ ಮಾಡಿ. ಕಮಲ ಕೆಸರಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಸಿದ್ದರಾಮಯ್ಯ ಬಸವಣ್ಣ ಅವರ ತತ್ವ ಅನುಸಾರ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ‌ನಾಯಕನೆಂದು ಘೋಷಿಸಿದ್ದೇವೆ. ಮಹದಾಯಿ, ಮೇಕೆದಾಟು ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೇಂದ್ರ ಯೋಜನೆಗಳಿಗೆ ಸಹಕರಿಸಿಲ್ಲ ಎಂದು ಟೀಕಿಸಿದರು.

  ಬಿಜೆಪಿಯವರು ಒಂದಾದರು ಜನಪರ ಯೋಜನೆ ಜಾರಿ ತಂದಿದ್ದೀರಾ? ಧರ್ಮ, ಜಾತಿ ಜಗಳ ಹಚ್ಚುತ್ತಾರೆ. ಅವರು ಕತ್ತರಿ ಇದ್ದಂತೆ ಜನರ ಮನಸ್ಸು ಕತ್ತರಿಸುತ್ತಾರೆ. ನಾವು ಸೂಜಿ ಇದ್ದಂತೆ ಮತ್ತೆ ಒಂದು ಮಾಡಲು ಹೊಲಿಗೆ ಹಾಕುತ್ತೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಯೋಜನೆ ಜಾರಿ ಮಾಡುತ್ತೇವೆ. ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ.‌ಕೊಡುತ್ತೇವೆ. ” ಭಾಗ್ಯದ ಲಕ್ಷ್ಮೀ ಬಾರಮ್ಮ.. ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ‌ಎಂದು” ಬಾಗಿಲು ತೆಗೆದು ಲಕ್ಷ್ಮೀಯನ್ನು ಮನೆ ಒಳಗೆ ಕರೆದುಕೊಳ್ಳಿ. ಅದು ಬಿಟ್ಟು ಬಾಗಿಲು ಮುಚ್ಚಿಕೊಂಡು ಕೂತರೆ ಲಕ್ಷ್ಮೀ ಮುಂದೆ ಹೋಗುತ್ತಾಳೆ ಎಂದರು.

  ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿದರು. 

  ಸಿಎಂ ಆರ್ಥಿಕ‌ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯರಾದ ವಿ.ಆರ್.ಸುದರ್ಶನ, ಶರಣೇಗೌಡ ಬಯ್ಯಾಪುರ, ಎಎಪಿ ಜಿಲ್ಲಾಧ್ಯಕ್ಷ‌ ಕನಕಪ್ಪ ಮಳಗಾವಿ, ಅಮರೇಶ ಕರಡಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಇತರರಿದ್ದರು.

  ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆ, ಯುವಕರಿಗೆ ವರ್ಷಕ್ಕೆ ಒಂದು ಲಕ್ಷ‌ರೂ., ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇವೆ. ಮೋದಿ ರೈತರ ಬದಲು ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಪ್ರವಾಹ, ಬರ ಬಂದರೂ ರಾಜ್ಯಕ್ಕೆ ಬರಲಿಲ್ಲ. ಚುನಾವಣೆ ಬಂದಾಗಲಷ್ಟೇ ರಾಜ್ಯಕ್ಕೆ ಬರುತ್ತಾರೆ. ಸುಳ್ಳು ಹೇಳಿ ಮತ ಪಡೆಯುತ್ತಾರೆ. ಇದಕ್ಕೆ ಮತದಾರರು ಅವಕಾಶ ನೀಡಬೇಡಿ.

  ಸಿದ್ದರಾಮಯ್ಯ. ಸಿಎಂ.

  ನಮ್ಮ ಯೋಜನೆ ನಿಲ್ಲಿಸುವ ತಾಕತ್ತು ಬಿಜೆಪಿಗಿಲ್ಲ. ಜನ ಅಷ್ಟು ಸುಲಭಕ್ಕೆ ನಮ್ಮ ಸರ್ಕಾರ ಕೈ ಬಿಡುವುದಿಲ್ಲ.‌ ಜನ ಹಾಗೂ ನಮ್ಮದು ಭಕ್ತ ಮತ್ತು ಭಗವಂತನ ಸಂಬಂಧ. ಎಚ್ಡಿಕೆ ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎನ್ನುತ್ತಾರೆ. ಈಗ ಯಾರು ದಾರಿ ತಪ್ಪಿದ್ದಾರೆಂಬುದನ್ನು ಅವರೇ ನೋಡಿಕೊಳ್ಳಲಿ.

  ಡಿ.ಕೆ.ಶಿವಕುಮಾರ. ಡಿಸಿಎಂ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts