ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಲೋಕಸಭಾ ಅಭ್ಯರ್ಥಿಯೇ ಗೈರು

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಹಾಜರಾಗಬೇಕಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗೈರಾಗಿದ್ದರು.

ಮಂಗಳವಾರ ಸಂಜೆ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಹಾಗೂ ಸ್ಥಳೀಯ ಮುಖಂಡರು ಹಾಜರಾಗಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಬೇಕೆಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಕೋರಿದ್ದರು. ಅದರಂತೆ ಕಾರ್ಯಕರ್ತರು ಆಗಮಿಸಿದ್ದರು. ಆದರೆ, ಅಭ್ಯರ್ಥಿಯೇ ಬರಲಿಲ್ಲ.

ಸ್ಥಳೀಯ ಕಾಂಗ್ರೆಸ್ಸಿನಲ್ಲಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ಘಟಕ ಎಂಬುದು ಇಲ್ಲ. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯಾನಗರ ಹಾಗೂ ಉಣಕಲ್ ಕಾಂಗ್ರೆಸ್ ಬ್ಲಾಕ್​ಗಳಿವೆ. ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿಂದಿನ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಡಾ. ಮಹೇಶ ನಾಲವಾಡ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕರ್ತರ ಸಭೆ ಮಹತ್ವ ಪಡೆದಿತ್ತು. ಕಾರ್ಯಕರ್ತರ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಅನಿಲಕುಮಾರ ಪಾಟೀಲ ಸಭೆ ಕರೆದಿದ್ದರು. ಅಭ್ಯರ್ಥಿಯೇ ಗೈರಾಗಿದ್ದು ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಅಸಮಾಧಾನ:ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಚಾರದಲ್ಲಿ ಸಾಕಷ್ಟು ಮುಂದಿದ್ದಾರೆ. ಅವರು ನಮ್ಮ ಮನೆಗೆ ಈಗಾಗಲೇ 2-3 ಬಾರಿ ಪ್ರಚಾರ ಸಾಮಗ್ರಿ ತಲುಪಿಸಿ ಆಗಿದೆ. ಕಾಂಗ್ರೆಸ್ ಪ್ರಚಾರ ಸಾಲುತ್ತಿಲ್ಲ. ನಮಗೆ ಯಾರ ನೇತೃತ್ವದಲ್ಲಿ ಪ್ರಚಾರಕ್ಕೆ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ. ಬ್ಲಾಕ್ ಅಧ್ಯಕ್ಷರೋ ಅಥವಾ ಪಾಲಿಕೆ ಮಾಜಿ ಸದಸ್ಯರ ಮಾತು ಕೇಳಬೇಕೊ ಎಂಬುದು ಗೊತ್ತಾಗುತ್ತಿಲ್ಲ ಎಂದು ಕಾರ್ಯಕರ್ತರು ದೂರಿದರು.

ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ, ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪ್ರಫುಲ್ಲಚಂದ್ರ ರಾಯನಗೌಡ್ರ, ಪ್ರಕಾಶ ಕ್ಯಾರಕಟ್ಟಿ, ವಹಾಬ್ ಮುಲ್ಲಾ, ಶಿವಾ ನಾಯ್ಕ, ನಾಗರಾಜ ಗೌರಿ, ದೀಪಾ ಗೌರಿ, ಸಾಗರ ಹಿರೇಮನಿ, ಅಬ್ದುಲ್ ಗನಿ, ನವೀದ್ ಮುಲ್ಲಾ, ಇನ್ನಿತರರು ಇದ್ದರು.

ಹಳೇ ಪ್ರಕರಣ ಹೊರಬರಲು ಜೋಶಿ ಕುತಂತ್ರ

ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ ಆರೋಪ ಚುನಾವಣೆ ಸಂದರ್ಭದಲ್ಲೇ ನನ್ನ ಮೇಲೆ ಬರಲು ಸಂಸದ ಪ್ರಲ್ಹಾದ ಜೋಶಿ ಅವರ ಕುತಂತ್ರವೇ ಕಾರಣ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನನ್ನ ಹೆಸರು ಎಫ್​ಐಆರ್, ಚಾರ್ಚ್​ಶೀಟ್​ನಲ್ಲಿ ಸಹ ಇಲ್ಲ. ಪ್ರಕರಣ ದಾಖಲಿಸಿರುವ ಗುರುನಾಥಗೌಡ ನಿತ್ಯ ಜೋಶಿ ಅವರೊಂದಿಗೆ ಇರುತ್ತಾರೆ. ಯಾವತ್ತೋ ದಾಖಲಾಗಿರುವ ಪ್ರಕರಣ ಚುನಾವಣೆ ಸಂದರ್ಭದಲ್ಲೇ ನನ್ನ ಮೇಲೆ ಬಂದಿದ್ದು ಏಕೆ? ಎಂದು ಪ್ರಶ್ನಿಸಿದರು.

ನ್ಯಾಯಾಂಗದ ಮೇಲೆ ಅಪಾರ ಗೌರವ ಹೊಂದಿರುವ ನಾನು ಎಂದಿಗೂ ಕುಗ್ಗುವುದಿಲ್ಲ. ಸದ್ಯಕ್ಕಿಂತ ದುಟ್ಟಪ್ಪು ಕೆಲಸ ಮಾಡುತ್ತೇನೆ ಎಂದರು.

ಪ್ರಕರಣದಲ್ಲಿ 62 ಸಾಕ್ಷಿಗಳಲ್ಲಿ 59 ಸಾಕ್ಷಿಗಳ ವಿಚಾರಣೆ ಮುಗಿದಿವೆ. ಧಾರವಾಡದಲ್ಲಿ ಏನೇ ಆದರೂ ವಿನಯ ಕುಲಕರ್ಣಿ ಮಾತ್ರ ಕಾಣುತ್ತಾರೆ ಎಂದು ದೂರಿದರು.

ರಂಭಾಪುರಿ ಶ್ರೀಗಳು ನನ್ನ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಏನೂ ಚಿಂತೆ ಇಲ್ಲ. ಅವರು ನನ್ನ ಪರವಾಗಿ ಇದ್ದಾರೆ. ಚಿಕ್ಕಂದಿನಿಂದಲೂ ಶ್ರೀಗಳ ಜೊತೆ ಆತ್ಮೀಯವಾಗಿದ್ದೇನೆ. ಹೀಗಾಗಿ ಅವರನ್ನು ಭೇಟಿ ಮಾಡಿದ್ದು ಏನೂ ತಪ್ಪಲ್ಲ ಎಂದರು.