ಕಾಂಗ್ರೆಸ್ ಕಚೇರಿಗೆ ಬೀಗ!

ಹಾವೇರಿ: ಲೋಕಸಭೆ ಚುನಾವಣೆ ಮಹಾಸಮರದಲ್ಲಿ ಮೋದಿ ಅಲೆ ಎದುರು ಹೀನಾಯ ಸೋಲು ಕಂಡಿರುವ ಕೈ ಪಾಳಯದಲ್ಲೀಗ ನೀರವ ಮೌನ ಆವರಿಸಿದೆ.

ಚುನಾವಣೆ ಸಮಯದಲ್ಲಿ ಸದಾ ಕಾರ್ಯಕರ್ತರು, ಮುಖಂಡರಿಂದ ತುಂಬಿ ತುಳುಕುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೀಗ ಜಡಿಯಲಾಗಿದೆ. ಕಚೇರಿಯತ್ತ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಸುಳಿಯುತ್ತಿಲ್ಲ.

ಹಾವೇರಿ ಕ್ಷೇತ್ರವನ್ನು ಕಾಂಗ್ರೆಸ್ ಮುಸ್ಲಿಂ ಮೀಸಲುಎನ್ನುವಂತೆ ಮಾಡಿರುವುದರಿಂದ ಇಲ್ಲಿ ಗೆಲುವು ಸಾಧ್ಯವಿಲ್ಲ. ಮುಸ್ಲಿಮೇತರ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲುವು ಸುಲಭ ಎಂಬ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ಕೆಲ ಮುಖಂಡರು ಇಟ್ಟಿದ್ದರು. ಅದರಂತೆ ಹೈಕಮಾಂಡ್ ಗದಗ ವಿಧಾನಸಭೆ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಡಿ.ಆರ್. ಪಾಟೀಲರನ್ನು ಅಭ್ಯರ್ಥಿಯನ್ನಾಗಿ ಘೊಷಿಸಿತ್ತು. ಆದರೆ, ಚುನಾವಣೆಯಲ್ಲಿ ಅವರು ವಿಫಲರಾದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲರು ಹಾವೇರಿ ಜಿಲ್ಲೆಯ ಕೈ ಮುಖಂಡರಲ್ಲಿದ್ದ ಅಸಮಾಧಾನ ಹೋಗಲಾಡಿಸಲು ಪ್ರಯತ್ನಿಸಿದ್ದರು. ಮೇಲ್ನೋಟಕ್ಕೆ ಎಲ್ಲವೂ ಸರಿಯಾದಂತೆ ಕಂಡುಬಂದಿತ್ತು. ಆದರೆ, ಒಳಗೊಳಗೆ ಅಸಮಾಧಾನ ಕಮ್ಮಿಯಾಗಿರಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಈ ಹಿಂದಿನ ಕಾಂಗ್ರೆಸ್​ನ ಮುಸ್ಲಿಂ ಅಭ್ಯರ್ಥಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಡಿ.ಆರ್.ಪಾಟೀಲರು ಸೋಲು ಕಾಣುವಂತಾಯಿತು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ಮತ ಎಣಿಕೆಗೂ ಮುನ್ನವೇ ಸೋಲು ತಿಳಿದಿತ್ತೆ?: ಹಾವೇರಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಮತ ಎಣಿಕೆಗೂ ಮುನ್ನವೇ ತಮ್ಮ ಅಭ್ಯರ್ಥಿ ಸೋಲುವುದು ಖಚಿತವಾಗಿತ್ತು. ಹೀಗಾಗಿ, ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮುಖಂಡರ್ಯಾರೂ ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ. ಆದರೆ, ಗದಗ ಜಿಲ್ಲೆಯಿಂದ ಡಿ.ಆರ್. ಪಾಟೀಲರೊಂದಿಗೆ ರೋಣದ ಮಾಜಿ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಸೇರಿ ಅನೇಕರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು.

ವಿಶ್ವಾಸವಿದ್ದ ಕ್ಷೇತ್ರಗಳಲ್ಲಿಯೇ ಭಾರಿ ಹಿನ್ನಡೆ: ಡಿ.ಆರ್. ಪಾಟೀಲರ ಸ್ವಕ್ಷೇತ್ರ ಗದಗ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ವಿಶ್ವಾಸದಲ್ಲಿದ್ದರು ಕಾಂಗ್ರೆಸ್ ನಾಯಕರು. ಆದರೆ, ಈ 3 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಮತದಾರರು ಬಿಜೆಪಿಗೆ ಜೈ ಎಂದರು. ಇನ್ನು, ಕಾಂಗ್ರೆಸ್​ನ ಶಾಸಕರಿರುವ ಹಿರೇಕೆರೂರ ವಿಧಾನಸಭೆ ಕ್ಷೇತ್ರದಲ್ಲಿ 22 ಸಾವಿರ ಅಧಿಕ ಮತಗಳ ಮುನ್ನಡೆ ಬಿಜೆಪಿಗೆ ಬಂದಿದೆ. ಡಿ.ಆರ್. ಪಾಟೀಲರ ಸಂಬಂಧಿ ಕೆ.ಬಿ. ಕೋಳಿವಾಡರು ಕಳೆದ ಬಾರಿ ಪ್ರತಿನಿಧಿಸಿದ್ದ ವಿಧಾನಸಭೆ ಕ್ಷೇತ್ರ ರಾಣೆಬೆನ್ನೂರಿನಲ್ಲಿ 26 ಸಾವಿರಕ್ಕೂ ಅಧಿಕ ಮತಗಳ ಲೀಡ್ ಉದಾಸಿ ಅವರಿಗೆ ದೊರೆತಿದೆ. ಎಚ್.ಕೆ. ಪಾಟೀಲರಿಗೆ ಪರಮಾಪ್ತರಾಗಿದ್ದ ಮಾಜಿ ಶಾಸಕ ರುದ್ರಪ್ಪ ಲಮಾಣಿ, ಕೊಟ್ರೇಶಪ್ಪ ಬಸೇಗಣ್ಣಿ, ಬಸವರಾಜ ಶಿವಣ್ಣನವರ ಅವರು ಸ್ವಕ್ಷೇತ್ರವಾದ ಹಾವೇರಿಯಲ್ಲಿ ಹೆಚ್ಚು ಮತಗಳನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಮೋದಿ ಅಲೆ ಇಲ್ಲ, ಇರುವುದೆಲ್ಲಾ ಕಾಂಗ್ರೆಸ್ ಅಲೆ ಎಂದು ಚುನಾವಣೆ ಪೂರ್ವದಲ್ಲಿ ಭರ್ಜರಿ ಭಾಷಣ ಮಾಡಿದ್ದ ಕೈ ನಾಯಕರು ಇದೀಗ, ರಾಷ್ಟ್ರಾದ್ಯಂತ ಮೋದಿ ಅಲೆ ಬೀಸಿದ ಪರಿಣಾಮ ಚುನಾವಣೆಯಲ್ಲಿ ಸೋಲಬೇಕಾಯಿತು ಎನ್ನುತ್ತಿದ್ದಾರೆ.

ಇಂದಿರಾ ಗಾಂಧಿ ಆಡಳಿತ ಸಮಯದಲ್ಲಿ ಇದೇ ರೀತಿಯ ಫಲಿತಾಂಶ ಬಂದಿತ್ತು. ಈಗ ದೇಶದಲ್ಲಿ ಮೋದಿ ಅಲೆ ಎದ್ದಿರುವುದೇ ಸೋಲಿಗೆ ಪ್ರಮುಖ ಕಾರಣವಾಗಿದೆ. ಮುಸ್ಲಿಂಯೇತರ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಲಿದ್ದೇವೆ ಎಂಬ ವಿಶ್ವಾಸವೂ ಹುಸಿಯಾಯಿತು. ಜಾತಿ ಮೀರಿ ಜನ ಮತ ಹಾಕಿದ್ದಾರೆ. ಎಲ್ಲ ನಾಯಕರು ಒಗಟ್ಟಿನಿಂದ ಕೆಲಸ ಮಾಡಿದ್ದರಿಂದ ಗೆಲುವಿನ ವಿಶ್ವಾಸವಿತ್ತು. ಜನರ ತೀರ್ಪನ್ನು ಸ್ವಾಗತಿಸುತ್ತೇವೆ.
| ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾವೇರಿ

Leave a Reply

Your email address will not be published. Required fields are marked *