ಕಾಂಗ್ರೆಸ್​ನ ‘ವಿಜಯ’ಲಕ್ಷ್ಮೀಗೆ ಗದ್ದುಗೆ

ಧಾರವಾಡ: ಅಂತೂ ಇಂತೂ ಕಾಂಗ್ರೆಸ್ ಪಕ್ಷ ಜಿ.ಪಂ. ಅಧಿಕಾರದ ಗದ್ದುಗೆ ಹಿಡಿದುಕೊಂಡಿದೆ. ಬಿಜೆಪಿ ಅಧಿಕಾರವಿದ್ದ ಜಿ.ಪಂ.ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಮೂಲಕ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಪಕ್ಷದ ಚಿಹ್ನೆಯ ಮೇಲೆ ಆರಿಸಿಬಂದಿರುವ ಸದಸ್ಯೆ ವಿಜಯಲಕ್ಷ್ಮೀ ಪಾಟೀಲ ಅವರನ್ನು ನೂತನ ಅಧ್ಯಕ್ಷರನ್ನಾಗಿಸಿದೆ.

ಬುಧವಾರ ಜರುಗಿದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು. 22 ಸದಸ್ಯ ಬಲದ ಜಿ.ಪಂ.ನಲ್ಲಿ ಕಾಂಗ್ರೆಸ್ 10, ಬಿಜೆಪಿ 11 ಹಾಗೂ ಓರ್ವ ಪಕ್ಷೇತರ ಸದಸ್ಯ ಚುನಾಯಿತರಾಗಿದ್ದಾರೆ. ಪ್ರಸಕ್ತ ಅವಧಿಯ ಆರಂಭದಿಂದ ಬಿಜೆಪಿಯ ಚೈತ್ರಾ ಶಿರೂರ ಅಧ್ಯಕ್ಷರಾಗಿದ್ದರು. ಪಕ್ಷೇತರ ಸದಸ್ಯ ಶಿವಾನಂದ ಕರಿಗಾರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಫೆ. 5ರಂದು ಅಧ್ಯಕ್ಷೆ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಜಯ ಗಳಿಸಿದ್ದರು. ಬಿಜೆಪಿಯಿಂದ ಗೆದ್ದಿರುವ ರತ್ನಾ ಪಾಟೀಲ, ಮಂಜವ್ವ ಹರಿಜನ, ಜ್ಯೋತಿ ಬೆಂತೂರ ಹಾಗೂ ಅಣ್ಣಪ್ಪ ದೇಸಾಯಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರಿಂದ 16 ಮತಗಳಿಂದ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಗೆಲುವು ಸಾಧಿಸಿತ್ತು.

ಫೆ. 20ರಂದು ನಿಗದಿಯಾಗಿದ್ದ ಅಧ್ಯಕ್ಷರ ಆಯ್ಕೆ ಚುನಾವಣೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಉಸ್ತುವಾರಿಯಲ್ಲಿ ಜಿ.ಪಂ. ಸಭಾಂಗಣದಲ್ಲಿ ಜರುಗಿತು. ನಿಯಮಾವಳಿಯಂತೆ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಯಿತು. ಕಾಂಗ್ರೆಸ್​ನಿಂದ ಮೊರಬ ಕ್ಷೇತ್ರದ ಜಿ.ಪಂ. ಸದಸ್ಯೆ ವಿಜಯಲಕ್ಷ್ಮೀ ಪಾಟೀಲ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.

ರೆಬೆಲ್ ಸದಸ್ಯರೂ ಗೈರು: ಅಧ್ಯಕ್ಷರ ಆಯ್ಕೆ ಚುನಾವಣೆ ನಿಗದಿಯಾಗಿದ್ದರೂ ಬಿಜೆಪಿಯ 6 ಸದಸ್ಯರು ಜಿ.ಪಂ.ನತ್ತ ಸುಳಿಯಲಿಲ್ಲ. ಅಲ್ಲದೆ ಕಾಂಗ್ರೆಸ್ ಬೆಂಬಲಿಸಿದ್ದ ಬಿಜೆಪಿಯ ರೆಬೆಲ್ ಸದಸ್ಯರಾದ ರತ್ನಾ ಪಾಟೀಲ, ಮಂಜವ್ವ ಹರಿಜನ, ಜ್ಯೋತಿ ಬೆಂತೂರ ಹಾಗೂ ಅಣ್ಣಪ್ಪ ದೇಸಾಯಿ ಕೂಡ ಇತ್ತ ಸುಳಿಯಲಿಲ್ಲ. ಕಾಂಗ್ರೆಸ್​ನ 11 ಹಾಗೂ ಪಕ್ಷೇತರ ಸದಸ್ಯ ಹಾಗೂ ಹಾಲಿ ಉಪಾಧ್ಯಕ್ಷ ಶಿವಾನಂದ ಕರಿಗಾರ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

ಅವಿರೋಧ ಆಯ್ಕೆ ಘೊಷಣೆ: ಮಧ್ಯಾಹ್ನ 1 ಗಂಟೆಗೆ ಸಭೆ ಸೇರಿದ ಪ್ರಾದೇಶಿಕ ಆಯುಕ್ತ ಮೇಘಣ್ಣವರ, ವಿಜಯಲಕ್ಷ್ಮೀ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೊಷಿಸಿದರು.

ಕೈ ಪಾಳಯದಿಂದ ವಿಜಯೋತ್ಸವ: ಜಿ.ಪಂ.ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವ ಹಿನ್ನೆಲೆಯಲ್ಲಿ ಕೈ ಪಾಳಯದ ಕಾರ್ಯಕರ್ತರು ಭಾರಿ ಪ್ರಮಾಣದಲ್ಲಿ ಜಿ.ಪಂ. ಆವರಣದಲ್ಲಿ ಸೇರಿದ್ದರು. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪರಿಸಿದ್ದರು. ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಬೆಂಬಲಿಗರು ಆವರಣಕ್ಕೆ ಆಗಮಿಸಿದ್ದರು. ಆಯ್ಕೆ ಘೊಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ಥಳಕ್ಕೆ ಆಗಮಿಸಿದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ನೂತನ ಅಧ್ಯಕ್ಷೆ ವಿಜಯಲಕ್ಷ್ಮೀಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ನಾಲ್ವರಿಗೆ ಸದಸ್ಯತ್ವ ರದ್ದತಿಯ ತೂಗುಗತ್ತಿ : ಇತ್ತೀಚೆಗೆ ಜಿ.ಪಂ.ನ ನಿರ್ಗಮಿತ ಅಧ್ಯಕ್ಷೆ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದಾಗ ವಿಪ್ ಉಲ್ಲಂಘಿಸಿ ಅವಿಶ್ವಾಸಪರ ಪರ ಮತ ಚಲಾಯಿಸಿದ್ದ ನಾಲ್ವರು ಬಿಜೆಪಿ ಸದಸ್ಯರ ವಿರುದ್ಧ ಪಕ್ಷದ ಮುಖಂಡರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸದಸ್ಯರಾದ ಗರಗ ಕ್ಷೇತ್ರದ ರತ್ನಾ ಪಾಟೀಲ, ತಬಕದಹೊನ್ನಿಹಳ್ಳಿ ಕ್ಷೇತ್ರದ ಮಂಜವ್ವ ಹರಿಜನ, ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ ಹಾಗೂ ಗಳಗಿ ಕ್ಷೇತ್ರದ ಅಣ್ಣಪ್ಪ ದೇಸಾಯಿ ಪಕ್ಷದ ವಿಪ್ ಉಲ್ಲಂಘಿಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸದ ಪರ ಮತ ಚಲಾಯಿಸಿದ್ದರು. ಈ ನಾಲ್ವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಜಿ.ಪಂ. ಸದಸ್ಯತ್ವ ರದ್ದತಿಗೆ ಪಕ್ಷ ಕ್ರಮಕ್ಕೆ ಹೋರಾಟಕ್ಕಿಳಿದಿದೆ. ಈ ನಾಲ್ವರು ಸದಸ್ಯರು ಪಕ್ಷ ನೀಡಿದ್ದ ವಿಪ್ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಜಿ.ಪಂ. ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಕ್ರಮ ಜರುಗಿಸುವ ಕುರಿತು ದೂರು ಸಲ್ಲಿಸಲು ಕಾಲಾವಕಾಶವಿದೆ. ಹಾಗಾಗಿ ಜಿ.ಪಂ. ಸಿಇಒ ಮುಖಾಂತರ ಫೆ. 21ರಂದು ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಈರಣ್ಣ ಜಡಿ ತಿಳಿಸಿದ್ದಾರೆ.