ಕಾಂಗ್ರೆಸ್​ನಿಂದ ಸೇನೆಗೆ ನಿರಂತರ ಅಪಮಾನ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ

ಕಾರವಾರ: ಭಾರತೀಯ ಸೇನೆಗೆ ಅಪಮಾನ ಮಾಡುವ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು.

ನಗರದ ಮಾಲಾದೇವಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನೆಹರೂ ಅವರ ಕಾಲದಲ್ಲಿ ಜನರಲ್ ಕಾರ್ಯಪ್ಪ ಅವರಿಗೆ ಅಪಮಾನವಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಅಂತ್ಯಕಾಲದಲ್ಲಿ ಒಬ್ಬರೂ ಇರಲಿಲ್ಲ. ಹೀಗೆ ಸದಾ ಕಾಂಗ್ರೆಸ್ ಭಾರತೀಯ ಸೇನೆಗೆ ಅಪಮಾನ ಮಾಡುತ್ತ ಬಂದಿದೆ ಎಂದು ಟೀಕಿಸಿದರು.

ಕನ್ನಡದಲ್ಲಿ ಸಾಕಷ್ಟು ಸಾಹಿತ್ಯ ಬರೆಯುವ ಕರ್ನಾಟಕದ ಕಾಂಗ್ರೆಸ್ ಮುಖಂಡರೊಬ್ಬರು ವಾಯು ಸೇನೆಯ ವರಿಷ್ಠರನ್ನು ಸುಳ್ಳುಗಾರ ಎಂದು ಕರೆಯುತ್ತಾರೆ. ದೆಹಲಿಯಲ್ಲಿ ಕುಳಿತು ಮಾತನಾಡುವ ಇನ್ನೊಬ್ಬ ಮುಖಂಡರು ಭೂಸೇನೆಯ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದು ಸಂಬೋಧಿಸುತ್ತಾರೆ. ಲಂಡನ್​ನಲ್ಲಿ ಕುಳಿತು ಸುಳ್ಳು ವೆಬ್​ಸೈಟ್ ಸಿದ್ಧ ಮಾಡಿಕೊಂಡು ಇವಿಎಂ ಬಗ್ಗೆ ಪ್ರಶ್ನೆ ಎತ್ತುವ, 2ಜಿ ತರಂಗಾಂತರ ಹಂಚಿಕೆಯಲ್ಲಿ ‘0 ಪರ್ಸೆಂಟ್ ಲಾಸ್’ ಎಂದು ಹೇಳಿಕೆ ನೀಡುವ ಇನ್ನೊಬ್ಬ ಮುಖಂಡರು ಭಾರತೀಯ ರಕ್ಷಣಾ ಇಲಾಖೆಗಳ ಮೇಲೆ ಸುಳ್ಳು ಆರೋಪ ಹೊರಿಸುತ್ತಾರೆ. ವಾಯು ಸೇನೆಯು ವಿದೇಶದಿಂದ ಅಕ್ರಮ ಹಣ ಸಾಗಿಸಿತು ಎಂದು ಆಪಾದಿಸುತ್ತಾರೆ ಎಂದು ನಾಯಕರ ಹೆಸರು ಹೇಳದೇ ಹರಿಹಾಯ್ದರು.

ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಹತ್ಯೆ ಮಾಡಿದ ಜೈಷ್-ಎ ಮೊಹಮದ್ ಸಂಘಟನೆಯ ತರಬೇತಿ ಕೇಂದ್ರದ ಮೇಲೆ ಬಹುಜನ ಭಾರತೀಯರ ಬೇಡಿಕೆಯಂತೆ ಭಾರತೀಯ ಸೇನೆ ವೀರಾವೇಷದಿಂದ ವೈಮಾನಿಕ ದಾಳಿ ಮಾಡಿ ಪ್ರತೀಕಾರ ತೀರಿಸಿತು. ಅದರ ಹಿಂದೆ ನರೇಂದ್ರ ಮೋದಿ ಅವರ ಶಕ್ತಿ ಇತ್ತು. ಅದನ್ನು ನಾವು ಹೇಳಲು ಹೋದರೆ, ಸೇನೆಯನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ಕಾಂಗ್ರೆಸ್ ಹೇಳುತ್ತದೆ. ನಿಮ್ಮ ಕಾಲದಲ್ಲಿ ಆಗದ ಅಂಶಗಳನ್ನು ಈಗ ಹೇಳುತ್ತಿದ್ದೇವೆ ಎಂದರು.

ಸೀಬರ್ಡ್ ನಿರಾಶ್ರಿತರ ಸಮಸ್ಯೆಗೆ ಶೀಘ್ರ ಪರಿಹಾರ: ಸೀಬರ್ಡ್ ನಿರಾಶ್ರಿತರ ಎಲ್ಲ ಬಾಕಿ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು. ಸ್ಥಳೀಯ ಶಾಸಕರು, ಸಂಸದರ ಮುತುವರ್ಜಿಯ ಕಾರಣ ನಾನು ಇಲ್ಲಿ ಬಂದು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದೆ. ನಿರಾಶ್ರಿತರಿಗೆ ಪರಿಹಾರ ಒದಗಿಸಿದೆ. ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣದಿಂದ ಇನ್ನೂ ಕೆಲವು ಪ್ರಕರಣಗಳು ಬಾಕಿ ಇದ್ದು ಅವುಗಳಿಗೂ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ನೀರಿನ ಸಮಸ್ಯೆಗೆ ಪರಿಹಾರ: ಸುತ್ತಲೂ ಸಮುದ್ರದ ನೀರಿದ್ದರೂ ಕುಡಿಯುವ ನೀರಿನ ಕೊರತೆ ಎದುರಿಸುವ ಕಾರವಾರದಂಥ ಭಾಗಗಳ ಸಮಸ್ಯೆ ನೀಗಿಸಲು ಯೋಜನೆ ರೂಪಿಸಲಾಗುವುದು. ಬಿಜೆಪಿಯ ಈ ಬಾರಿಯ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ. ಉತ್ತರ ಕನ್ನಡ ಭಾಗದ ಪ್ರಮುಖ ಉದ್ಯೋಗವಾಗಿರುವ ಮೀನುಗಾರಿಕೆಗೆ ಮಹತ್ವ ನೀಡುವ ಸಲುವಾಗಿ ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ಮೀನುಗಾರಿಕೆ ಇಲಾಖೆ ಪ್ರಾರಂಭಿಸಲಾಗುತ್ತಿದೆ ಎಂದರು.

ಹಣ ಪಡೆದವರಿಗೆ ಶಿಕ್ಷೆಯಾಗಲಿ: ಅಗಸ್ಟಾ ವೆಸ್ಟ್​ಲ್ಯಾಂಡ್ ಗಣ್ಯರ ಹೆಲಿಕ್ಯಾಪ್ಟರ್ ಖರೀದಿ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಅವರು ‘ಫ್ಯಾಮ್ ಹಾಗೂ ‘ಎಪಿ’ಅವರಿಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಫ್ಯಾಮ್ ಎಂದರೆ ಕಾಂಗ್ರೆಸ್​ನ ಮೊದಲ ಕುಟುಂಬ. ಎಪಿ ಎಂದರೆ ಅಹಮದ್ ಪಟೇಲ್ ಇರಬಹುದು ಎಂದುಕೊಂಡಿದ್ದೇನೆ. ಹಣ ಕೊಟ್ಟವನಿಗೆ ಶಿಕ್ಷೆ ಘೊಷಣೆಯಾಗಿದೆ. ಹಣ ಪಡೆದವರಿಗೆ ಶಿಕ್ಷೆಯಾಗಬೇಕೆ ಬೇಡವೇ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ಗಂಗಾಧರ ಭಟ್, ವಿ.ಎಸ್.ಪಾಟೀಲ್, ಮಾಧ್ಯಮ ಸಂಚಾಲಕ ನಾಗರಾಜ ನಾಯಕ, ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ, ರೇಖಾ ಹೆಗಡೆ ಮಾತನಾಡಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಎದುರಾಳಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಗಣಪತಿ ಉಳ್ವೇಕರ್, ಭಾಸ್ಕರ ನಾರ್ವೆಕರ್ ಇತರರು ಇದ್ದರು. ವೆಂಕಟೇಶ ನಾಯ್ಕ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾವಂತ ರ‍್ಯಾಲಿ: ಉತ್ತರ ಕನ್ನಡ, ಕಾರವಾರದ ಜೊತೆಗೆ ಗೋವಾದ ನಿಕಟವಾದ ‘ರೋಟಿ ಬೇಟಿ’ ಸಂಬಂಧವಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು. ನಗರದ ಮಿತ್ರ ಸಮಾಜದಿಂದ ಬಿಜೆಪಿ ರ್ಯಾಲಿಯಲ್ಲಿ ಆಗಮಿಸಿ ಮತ ಯಾಚಿಸಿದರು. ನಂತರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ -ಗೋವಾ ಗಡಿ ಭಾಗದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು ಇದರಿಂದ ಗೋವಾ ಹಾಗೂ ಕರ್ನಾಟಕದ ಗಡಿ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ಮುಂದಾದಲ್ಲಿ ತಾವೂ ಸಹಕಾರ ನೀಡುವು ದಾಗಿ ಭರವಸೆ ನೀಡಿದರು. ಇದುವರೆಗೆ ಜನರಿಗೆ 72 ಪೈಸೆ ನೀಡದ ಕಾಂಗ್ರೆಸ್ ಸರ್ಕಾರ 72 ಸಾವಿರ ನೀಡುವುದಾಗಿ ಸುಳ್ಳು ಭರವಸೆ ನೀಡಿದೆ ಎಂದು ಆರೋಪಿಸಿದರು.

ಬಿಜೆಪಿ ಸೇರಿದ ಸಾವಂತ: ಜೆಡಿಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ, ಕಾರವಾರ ಕ್ಷೇತ್ರಾಧ್ಯಕ್ಷ ಪುರುಷೋತ್ತಮ ಸಾವಂತ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಸೇರಿದರು. ಕೋಮಾರಪಂಥ ಸಮಾಜದ ಅಧ್ಯಕ್ಷ ಎಸ್.ಆರ್.ನಾಯ್ಕ, ಹಾಗೂ ಕಡವಾಡ ಗ್ರಾಪಂನ ಎಲ್ಲ ಸದಸ್ಯರು ಬಿಜೆಪಿ ಸೇರಿದರು.