More

  ಕಾಂಗ್ರೆಸ್​ನಿಂದ ಸಮಾಜದಲ್ಲಿ ಅರಾಜಕತೆ ಸೃಷ್ಟಿ

  ಗದಗ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮೂಲಕ ದೇಶದಲ್ಲಿರುವ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವುದಿಲ್ಲ. ದೇಶದ ಪ್ರಜೆಗೆ ತೊಂದರೆ ಕೊಡುವಂತಹ ಕಾನೂನು ಇದಲ್ಲ. ಕಾಂಗ್ರೆಸ್ಸಿಗರ ಮಾತನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಕೇಂದ್ರ ಸಚಿವ ಪಲ್ಹಾದ ಜೋಶಿ ಹೇಳಿದರು.

  ನಗರದ ಮುನ್ಸಿಪಲ್ ಮೈದಾನದಲ್ಲಿನ ಬಿಜೆಪಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಗಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ದೇಶದ ಮುಸ್ಲಿಮರ ಜೀವನಕ್ರಮ ಹೇಳಿಕೊಳ್ಳುವಂತಿಲ್ಲ. ಈವರೆಗೂ ಆ ಸಮುದಾಯದ ಜನರು ಅತ್ಯಂತ ಕಠಿಣ ಕೆಲಸಗಳನ್ನು ಮಾಡಿ ಜೀವ ಸಾಗಿಸುತ್ತಿದ್ದಾರೆ. ಮುಸ್ಲಿಮರನ್ನು ಬಾವಿಗಳಿಸಿ ಐದು ವರ್ಷಕ್ಕೊಮ್ಮೆ ಮೇಲೆತ್ತಿ ಮತ ಪಡೆದು ಮತ್ತೆ ಅವರನ್ನು ಬಾವಿಗಿಳಿಸಿ ಕಾಂಗ್ರೆಸ್ಸಿಗರು ಹಾಳು ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್​ಗಾಗಿ ಕಾಂಗ್ರೆಸ್ ಪಕ್ಷ ಆ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡಿಕೊಂಡು ಬಂದಿದೆ. ಸಿಎಎ ವಿಷಯದಲ್ಲಿ ಕೂಡ ಅದೇ ವರ್ತನೆ ಮುಂದುವರಿಸಿದ್ದು, ಕಾಯ್ದೆ ಮೂಲಕ ಮುಸ್ಲಿಮರನ್ನು ದೇಶದಿಂದ ಹೊರಹಾಕುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ದೇಶದ ಯಾವುದೇ ಮುಸ್ಲಿಮರಿಗೂ ಸಿಎಎ ಕಾಯ್ದೆಯಿಂದ ತೊಂದರೆ ಆಗಲ್ಲ. ಪೌರತ್ವ ಕಸಿದುಕೊಳ್ಳುವುದಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

  ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರರು (ಹಿಂದು, ಸಿಖ್, ಪಾರ್ಸಿ, ಜೈನ) ಧಾರ್ವಿುಕ ಅತ್ಯಾಚಾರಕ್ಕೆ ಒಳಗಾಗಿ ದೇಶದಲ್ಲಿ ನೆಲೆಯೂರಿದ್ದಾರೆ. ಅಂಥವರಿಗೆ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಇಂಥವರಿಗೆ ಪೌರತ್ವ ಕೊಟ್ಟರೆ ಕಾಂಗ್ರೆಸ್​ನವರು ಏತಕ್ಕಾಗಿ ಹೋರಾಟ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

  ಕಳೆದ 30 ವರ್ಷದಿಂದ ದೇಶದಲ್ಲಿ ಪೌರತ್ವ ಇಲ್ಲದೇ ಅತ್ಯಂತ ಕಷ್ಟದ ಜೀವನ ನಡೆಸುತ್ತಿರುವ ಜನರಿಗೆ ಪೌರತ್ವ ಕೊಡುವುದರಲ್ಲಿ ತಪ್ಪೇನಿದೆ. ಇತ್ತೀಚೆಗೆ ರಾಜಸ್ಥಾನದ ಬಿಕಾನೇರ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 75 ವರ್ಷದ ವೃದ್ಧರೊಬ್ಬರು ಕಾಲಿಗೆ ನಮಸ್ಕಾರ ಮಾಡಲು ಮುಂದಾದರು, ಏಕೆ ಎಂದು ಪ್ರಶ್ನಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಾಗಿ ನಮಸ್ಕಾರ ಮಾಡುತ್ತಿದ್ದೇನೆ ಎಂದರಲ್ಲದೇ, ತನ್ನ ಜೀವನಕತೆಯನ್ನು ವಿವರಿಸಿದರು. ನಾನು ಮೂಲತಃ ಪಾಕಿಸ್ತಾನದ ಲಾಹೋರ್ ನಿವಾಸಿ. ಅಲ್ಲಿ ನಡೆಯುತ್ತಿರುವ ಧಾರ್ವಿುಕ ಅತ್ಯಾಚಾರದಿಂದ ಭಾರತಕ್ಕೆ ಬಂದು 30 ವರ್ಷ ಕಳೆದಿದೆ. ಆದರೆ, ಇಲ್ಲಿವರೆಗೆ ಇಲ್ಲಿನ ಯಾವ ಸರ್ಕಾರಗಳು ಪೌರತ್ವ ನೀಡಿರಲಿಲ್ಲ. ಇದೀಗ ಪೌರತ್ವ ಕಾಯ್ದೆ ಜಾರಿಗೊಳಿಸಿ ಮೋದಿ ಅವರು ಪುಣ್ಯ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

  ಸಚಿವ ಸಿ.ಸಿ. ಪಾಟೀಲ ಮಾತನಾಡಿದರು. ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಅನಿಲ ಮೆಣಸಿನಕಾಯಿ, ನಿಯೋಜಿತ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ಕಾಂತಿಲಾ ಬನ್ಸಾಲಿ, ಅಶ್ವಿನಿ ಜಗತಾಪ ಮತ್ತಿತರರು ಇದ್ದರು.

  ಜ. 18ರಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದು ಗದಗ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
  |ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

  ಯಾರಿಗೂ ತೊಂದರೆ ಇಲ್ಲ: ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ. ದೇಶದಲ್ಲಿ ಹುಟ್ಟಿ ಬೆಳೆದವರು ಆತಂಕಪಡುವ ಪ್ರಮೇಯ ಇಲ್ಲ. ದೇಶದಲ್ಲಿ ಐದು ವರ್ಷ ವಾಸವಾಗಿರುವ ಪ್ರತಿ ಪ್ರಜೆಗೂ ಪೌರತ್ವ ನೀಡುವ ಕಾಯ್ದೆ ಇದಾಗಿದೆ ಎಂದರು. ಕಲಂ 370, ತ್ರಿವಳಿ ತಲಾಖ್, ಅಯೋಧ್ಯೆ ತೀರ್ಪು ಬಂದ ನಂತರ ದೇಶದಲ್ಲಿ ಗಲಾಟೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ, ಅದ್ಯಾವುದು ಆಗದೇ ಇದ್ದಾಗ ಪೌರತ್ವ ಕಾಯ್ದ ಕುರಿತು ವಿನಾಕಾರಣ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಯಲ್ಲ ಎಂದರು.

  ಸೋನಿಯಾ ನಿಷ್ಠೆಗಾಗಿ ಏಸು ಪ್ರತಿಮೆ

  ಗದಗ: ಡಿ.ಕೆ. ಶಿವಕುಮಾರ ಅವರು ಏಸು ಪ್ರತಿಮೆ ನಿರ್ವಿುಸುವುದಾಗಿ ಘೋಷಿಸಿ ತಮ್ಮ ನಿಷ್ಠೆಯನ್ನು ಸೋನಿಯಾ ಗಾಂಧಿ ಅವರಿಗೆ ತೋರಿಸಿ ಆ ಮೂಲಕ ಕೆಪಿಸಿಸಿ ಅಧ್ಯಕ್ಷ ಅಥವಾ ಪ್ರತಿಪಕ್ಷ ನಾಯಕರಾಗಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

  ಗದಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಅವರಿಗೆ ಏಸು ಒಳ್ಳೆಯದು ಮಾಡಲಿ ಎಂದರು. ಸರ್ಕಾರಿ ಜಾಗದಲ್ಲಿ ಸರಿಯಾಗಿ ಅನುಮತಿ ಪಡೆಯದೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವುದು ತಪ್ಪು. ಇದೇ ಕಾರಣದಿಂದ ಬಿಜೆಪಿ ಆಕ್ಷೇಪಿಸಿ ಹೋರಾಟ ಆರಂಭಿಸಿದೆ ಎಂದರು.

  ಬಿಜೆಪಿ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್ ವಿರೋಧಿಯೂ ಅಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಬಳ್ಳಾರಿಗೆ ಹೋಗಿ ಏಕೆ ಭಾಷಣ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಯು.ಟಿ. ಖಾದರ್ ಹೇಳಿಕೆ ಸರಿಯಲ್ಲ. ಖಾದರ್ ಕೂಡ ಬೇರೆ ಬೇರೆ ಕಡೆ ಹೋಗಿ ಭಾಷಣ ಮಾಡುತ್ತಾರೆ. ಪೌರತ್ವ ಕಾಯ್ದೆ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದರು. ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಮಾತನಾಡಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದುರು.

  ಶಾಂತಿ ಕದಡುವ ಕೆಲಸ

  ಗದಗ: ಏಸು ಪ್ರತಿಮೆ ಸ್ಥಾಪನೆ ವಿವಾದವನ್ನು ಹುಟ್ಟುಹಾಕಿ ಡಿ.ಕೆ. ಶಿವಕುಮಾರ ಹಾಗೂ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.

  ಗದಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಕಾಂಗ್ರೆಸ್​ನವರು ಆಡಳಿತ ನಡೆಸಿದಾಗ ಡಿಕೆಶಿ ಅನಭಿಷಕ್ತ ದೊರೆಯಂತೆ ಮೆರೆದರು. ಆಗ ಪ್ರತಿಮೆ ಸ್ಥಾಪಿಸಲಿಲ್ಲ ಏಕೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಾದ ಹುಟ್ಟುಹಾಕಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದು ಹಾಗೂ ಸರ್ಕಾರವನ್ನು ಒತ್ತಡದಲ್ಲಿ ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಎಲ್ಲ ಜಾತಿ ಸಮುದಾಯದೊಂದಿಗೆ ಸಾಮರಸ್ಯದ ಭಾವನೆ ಹೊಂದಿದೆ. ಬಿಜೆಪಿ ಯಾವುದೇ ಕೋಮಿನ ವಿರೋಧಿ ಅಲ್ಲ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts