ಕಾಂಗ್ರೆಸ್​ನಿಂದ ಮಹಿಳೆಯರಿಗೆ ಅನ್ಯಾಯ

ಕುಂದಗೋಳ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಿಳೆಯರಿಗಾಗಿ ರೂಪಿಸಿದ್ದ ಯೋಜನೆಗಳನ್ನು ನೆನಪು ಮಾಡಿಕೊಡುವುದರೊಟ್ಟಿಗೆ, ಈಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಮಹಿಳೆಯರನ್ನು ನಿರ್ಲಕ್ಷಿಸಿದೆ ಎಂದು ಬಿಂಬಿಸುವಲ್ಲಿ ಗುರುವಾರ ಸಂಜೆ ಪಟ್ಟಣದ ಹೊರವಲಯದ ಪೊಲೀಸ್ ಠಾಣೆ ಎದುರಿನ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಬಹುತೇಕ ಯಶಸ್ವಿಯಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಾನು ಸಿಎಂ ಆಗಿದ್ದಾಗ ಸ್ತ್ರೀ ಶಕ್ತಿ ಗುಂಪುಗಳಿಗೆ ಕಡಿಮೆ ಬಡ್ಡಿ ದರದ ಸಾಲ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಪ್ರೋತ್ಸಾಹಧನ, ಮಹಿಳಾ ಸಬಲೀಕರಣಕ್ಕಾಗಿ ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಸೈಕಲ್ ವಿತರಣೆ, ಪ್ರತಿ ಹೆಣ್ಣು ಮಗುವೂ ಶಿಕ್ಷಣ ಪಡೆಯಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಿನೂತನ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೆ ಎಂದು ವಿವರಿಸಿದರು. ಮಹಿಳೆಯರು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಬಸವರಾಜ ಬೊಮ್ಮಾಯಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಸಂಸದ ಪ್ರಲ್ಹಾದ ಜೋಶಿ ಮಾತನಾಡಿದರು.

ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಮತ ಯಾಚಿಸಿದರು. ಪ್ರಮುಖರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ, ಸಿ.ಟಿ. ರವಿ, ಪ್ರೀತಂಗೌಡ, ಅರವಿಂದ ಬೆಲ್ಲದ, ಸೀಮಾ ಮಸೂತಿ, ಚೈತ್ರಾ ಶಿರೂರು, ನಂದಾ ಚಿಕ್ಕನಗೌಡ್ರ, ಮಾಣಿಕ್ಯ ಚಿಲ್ಲೂರ, ಭಾರತಿ ಅಳಗುಂಡಿ, ಮಲ್ಲಿಕಾರ್ಜುನ ಕಿರೇಸೂರ, ರಮೇಶ ಕೊಪ್ಪದ, ಈಶ್ವರಪ್ಪ ಗಂಗಾಯಿ, ಇತರರಿದ್ದರು.

ಅಳುವ ಧುರೀಣರು ಬೇಡ

ಚಿತ್ರನಟಿ ಶ್ರುತಿ ಮಾತನಾಡಿ, ನಾನು ಪರದೆ ಮೇಲೆ ಅಳುವ ನಟಿ. ಅದರಿಂದಲೇ ನಾನು ಜನಪ್ರಿಯವಾದರೆ ಇಂದಿನ ಜೆಡಿಎಸ್-ಕಾಂಗ್ರೆಸ್​ನಲ್ಲಿ ಬಹಳ ಜನ ಅಳುತ್ತಿದ್ದಾರೆ. ಇಂಥ ಅಳುವ ನಾಯಕರನ್ನು ಮನೆಗೆ ಕಳುಹಿಸಿ, ಕಣ್ಣೀರು ಒರೆಸುವ, ಕಾಳಜಿಯಿಂದ ಆಡಳಿತ ನಡೆಸುವ ಸರ್ಕಾರಕ್ಕಾಗಿ ಚಿಕ್ಕನಗೌಡ್ರ ಅವರನ್ನು ಗೆಲ್ಲಿಸಿ ಎಂದು ಕೋರಿದರು.

Leave a Reply

Your email address will not be published. Required fields are marked *