ಕಾಂಗ್ರೆಸ್​ನಿಂದ ಜಿಲ್ಲಾ ಬಂದ್​ಗೆ ಕರೆ

* ಸಹಕರಿಸಲು ಸಚಿವ ಸಿ.ಪುಟ್ಟರಂಗಶೆಟ್ಟಿ ಮನವಿ

ಚಾಮರಾಜನಗರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೆ.10ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಬಂದ್ ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ನಿಯಂತ್ರಿಸಲು ಮುಂದಾಗದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ್ದ ಕಾಂಗ್ರೆಸ್ ಭಾರತ್​ಬಂದ್​ಗೆ ಕರೆ ನೀಡಿದೆ. ಇದನ್ನು ಯಶಸ್ವಿಗೊಳಿಸಲು ಜಿಲ್ಲಾ ಬಂದ್ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಬಂದ್​ಗೆ ಬೆಂಬಲ ನೀಡುವಂತೆ ಎಸ್​ಡಿಪಿಐ, ಬಿಎಸ್ಪಿ, ಖಾಸಗಿ ಬಸ್, ಲಾರಿ, ಆಟೋ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಮಾಲೀಕರು, ಕನ್ನಡ ಪರ ಸಂಘಟನೆಗಳ, ಜಿಲ್ಲಾ ವರ್ತಕರ ಸಂಘ, ಹೊಟೇಲ್ ಮಾಲೀಕರ ಸಂಘ, ವಿದ್ಯಾರ್ಥಿಗಳ ಸಂಘಟನೆಗಳ, ಮಹಿಳಾ ಸಂಘಟನೆಗಳ, ಪೆಟ್ರೋಲ್ ಬಂಕ್​ಗಳ, ಚಲನಚಿತ್ರ ಮಂದಿರಗಳ ಮಾಲೀಕರಲ್ಲಿ ಮನವಿ ಮಾಡಲಾಗಿದೆ ಎಂದರು.

ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳವಾಗುತ್ತಿವೆೆ. ಇದರಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ ಈ ಜಡತ್ವವನ್ನು ಜನರಿಗೆ ತಿಳಿಸಲು ಬಂದ್​ಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಜನರು ಬೆಲೆ ಏರಿಕೆ ಬಿಸಿಯಿಂದ ಪಾರಾಗಲು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ಜಿಎಸ್​ಟಿ ವ್ಯಾಪ್ತಿಗೆ ತರುವಂತೆ ಕಾಂಗ್ರೆಸ್ ಹಿಂದಿನಿಂದಲೂ ಒತ್ತಾಯ ಮಾಡುತ್ತಿದೆ. ಆದರೂ ಪ್ರಧಾನಿ ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಬಂದ್ ಅಂಗವಾಗಿ ಸೆ.10ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಹಾಜರಿದ್ದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಕಾಂಗ್ರೆಸ್ ಪಕ್ಷವು ಎಸ್​ಡಿಪಿಐ, ಬಿಎಸ್ಪಿ, ಪಕ್ಷೇತರರೊಬ್ಬರ ಬೆಂಬಲದೊಂದಿಗೆ ನಗರಸಭೆಯ ಅಧಿಕಾರ ಹಿಡಿಯಲಿದೆ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿಯಂತೆ ಈ ಸಲವೂ 8ವಾರ್ಡ್​ಗಳಲ್ಲಿ ಕಾಂಗ್ರೆಸ್ ಗೆದ್ದು ಸ್ಥಿರವಾಗಿದೆ. ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರಸಭೆಯ ಮಾಜಿ ಸದಸ್ಯರಾದ ಎಸ್.ನಂಜುಂಡಸ್ವಾಮಿ ಕಾಂಗ್ರೆಸ್ ತತ್ವ, ಸಿದ್ದಾಂತಗಳಲ್ಲಿ ನಂಬಿಕೆಯುಳ್ಳವರು. ನಗರಸಭೆಯ ಅಧಿಕಾರ ಹಿಡಿಯಲು ಪಕ್ಷದ ಜತೆ ಕೈ ಜೋಡಿಸಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯಿಂದ ವಾಮಮಾರ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಮುಖಂಡರು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದರು.

ಯಾವೊಬ್ಬ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಅವರ ಯಾವ ಆಪರೇಷನ್​ಗೂ ಒಳಗಾಗುವುದಿಲ್ಲ ಎಂದ ಅವರು, ಐಟಿ, ಇಡಿ ದಾಳಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಮಾತ್ರ ದಾಳಿ ನಡೆಯುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್​ನ ಪ್ರಭಾವಿ ನಾಯಕ. ಆದ್ದರಿಂದ ಅವರನ್ನು ಗುರಿಯಾಗಿಸಿ ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯ ಮುಖಂಡರ ಮನೆ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಇಂದು ಶಾಲೆ, ಕಾಲೇಜುಗಳಿಗೆ ರಜೆ : ಚಾಮರಾಜನಗರ: ಭಾರತ್ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಬಂದ್ ಆಚರಣೆ ವೇಳೆ ಬಸ್​ಗಳ ಮತ್ತು ಆಟೋಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೊಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಬಲಿಸದಂತೆ ಮನವಿ: ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್​ಗೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ನೀಡಬಾರದು ಎಂದು ಬಿಜೆಪಿಯ ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್.ಎಂ.ಬಸವಣ್ಣ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾದ್ದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಮೂಡಿಸಿ ಬಂದ್ ಮಾಡಲು ಹೊರಟಿದೆ. ಆದ್ದರಿಂದ ಬೆಂಬಲ ನೀಡಬಾರದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ವರ್ತಕರು, ಬಸ್, ಲಾರಿ, ಆಟೋ, ಕಾರು ಮಾಲೀಕರ ಸಂಘಟನೆಗಳು, ಕೂಲಿ ಕಾರ್ವಿುಕರ ಸಂಘಟನೆಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ ಬಸ್ ಸಂಚಾರ : ಚಾಮರಾಜನಗರ: ಬಂದ್ ಪರಿಸ್ಥಿತಿಯನ್ನು ಅವಲೋಕಿಸಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ಓಡಿಸಲಾಗುವುದು ಎಂದು ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕಕುಮಾರ್ ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸ್ಥಿತಿ ಗಮನಿಸಿ ವಾತಾವರಣ ಸೂಕ್ತವಾಗಿದ್ದರೆ ಬಸ್​ಗಳ ಸಂಚಾರ ಆರಂಭವಾಗಲಿದೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ. ಪೊಲೀಸರು ಸೂಕ್ತ ರಕ್ಷಣೆ ನೀಡುವುದಾದರೆ ಬಸ್ ಓಡಿಸಬೇಕು. ಯಾವುದೇ ಕಾರಣಕ್ಕೆ ಬಸ್​ಗಳಿಗೆ ಹಾನಿಯಾಗಬಾರದು. ಇವೆಲ್ಲವನ್ನು ಗಮನಿಸಿ ಸಂಚಾರಕ್ಕೆ ಅವಕಾಶ ನೀಡಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲಧಿಕಾರಿಗಳು ನಮಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.