ಕಾಂಗ್ರೆಸ್​ಗೆ ಟಾನಿಕ್ ಸಿಗುವುದೇ?

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ಸಾಧನೆಯಿಂದಾಗಿ ಬಿಜೆಪಿ ಮೊಗಸಾಲೆಯಲ್ಲಿ ಸಹಜವಾಗಿಯೇ ಸಂಭ್ರಮ ಮುಗಿಲು ಮುಟ್ಟಿದ್ದರೆ, ಕಾಂಗ್ರೆಸ್ ಪಾಳಯದಲ್ಲಿ ಆತಂಕದ ಮೋಡಗಳು ಕವಿದಿವೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಬಹುತೇಕ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ಸನ್ನಿವೇಶವನ್ನು ಅವಲೋಕಿಸಿದಾಗ, 2014ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಹಂತಹಂತವಾಗಿ ಕುಸಿಯುತ್ತಾ ಬಂದಿದ್ದು, ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇದಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮತ್ತೊಂದು ಅಧ್ಯಾಯ ಎನ್ನಲಡ್ಡಿಯಿಲ್ಲ. ರಾಜಕೀಯ ಹಣಾಹಣಿಯಲ್ಲಿ ಸೋಲು-ಗೆಲುವುಗಳು ಸಹಜ ಬೆಳವಣಿಗೆಗಳಾದರೂ, ಈ ಮಟ್ಟಿಗಿನ ಕುಸಿತ ಕಂಡಿರುವುದನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಿ ಕಾಂಗ್ರೆಸ್ ಆತ್ಮಾವಲೋಕನಕ್ಕೆ ಮತ್ತು ಮರುಚೇತರಿಕೆಗೆ ಮುಂದಾಗಬೇಕಿದೆ.

ಈ ನಡುವೆ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದಾರೆ; ತಾವು ಉಸ್ತುವಾರಿ ವಹಿಸಿದ್ದ ಒಡಿಶಾ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಸೋತಿದ್ದೇ ಈ ರಾಜೀನಾಮೆಗೆ ಕಾರಣ ಎಂಬ ಸಮರ್ಥನೆ ಅವರಿಂದ ಹೊಮ್ಮಿದೆಯಾದರೂ, ಇದು ಎಐಸಿಸಿ ಪುನಾರಚನೆಯ ನಿಟ್ಟಿನಲ್ಲಿನ ಮುನ್ಸೂಚನೆ ಎಂಬುದು ರಾಜಕೀಯ ಪಂಡಿತರ ಅಭಿಮತ. ಅದೇನೇ ಇರಲಿ, ಒಂದು ಕಾಲಕ್ಕೆ ದೇಶವನ್ನು ಆವರಿಸಿದ್ದ ತಮ್ಮ ಪಕ್ಷ ಈಗ ಬೆರಳೆಣಿಕೆಯ ರಾಜ್ಯಗಳಲ್ಲಿ ಗದ್ದುಗೆ ಹಿಡಿಯುವ ಮಟ್ಟಕ್ಕೆ ಕುಸಿದಿರುವ ಹಾಗೂ ಲೋಕಸಭೆಯಲ್ಲಿ 50 ಸ್ಥಾನಗಳನ್ನೂ ದಕ್ಕಿಸಿಕೊಳ್ಳಲಾಗದಿರುವ ಬೆಳವಣಿಗೆಯಿಂದಾಗಿ ಕಾಂಗ್ರೆಸ್ಸಿಗರಲ್ಲಿ ಆತಂಕ ಮನೆಮಾಡಿರುವುದು ಸಹಜವೇ. ಮೋದಿಯವರ ಸಮರ್ಥ ನಾಯಕತ್ವ ಮತ್ತು ಅವರ ಒಡನಾಡಿಗಳ ತಂತ್ರಗಾರಿಕೆಯ ಪರಿಣಾಮವಾಗಿ ರಾಜಕೀಯ ರೇಸ್​ನಲ್ಲಿ ನಾಗಾಲೋಟದಿಂದ ಓಡುತ್ತಿದೆ ಬಿಜೆಪಿ ಕುದುರೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆಂಬ ಲೆಕ್ಕಾಚಾರ ಕಾಂಗ್ರೆಸ್ ಮೊಗಸಾಲೆಗಳಲ್ಲಿ ಮೊಳೆತಿರಲಿಕ್ಕೂ ಸಾಕು. ಹೀಗಾಗಿ ಎಐಸಿಸಿ ಪುನಾರಚನೆ, ಪಕ್ಷದ ಸಾರಥ್ಯ ಕುರಿತಾದ ಚರ್ಚೆ ಸೇರಿದಂತೆ ಹಲವು ಅನಿವಾರ್ಯ ಕ್ರಮಗಳಿಗೆ ಅದು ಚಿಂತನೆಗೆ ಮುಂದಾದಲ್ಲಿ ಅದು ಸಹಜ ಬೆಳವಣಿಗೆಯೇ. ಕಾರಣ, ಹೇಳಿಕೇಳಿ ನಮ್ಮದು ಬಹುಪಕ್ಷೀಯ ಪ್ರಜಾಪ್ರಭುತ್ವ; ಆದರೆ ಲೋಕಸಭೆಯಲ್ಲಿ ಬಲಾಢ್ಯ ಆಡಳಿತ ಪಕ್ಷದೆದುರು ವಿಪಕ್ಷಗಳು ನಗಣ್ಯವಾಗುವುದು ಇಲ್ಲವೇ ಅವು ಬಾಯಿಹೊಲಿದು ಕೂರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಡಳಿತ ಪಕ್ಷ ಕೈಗೊಳ್ಳಬಹುದಾದ ‘ಏಕಪಕ್ಷೀಯ ಛಾಯೆಯ’ ನಿರ್ಣಯಗಳನ್ನು ಸದನದಲ್ಲಿ ಗಟ್ಟಿದನಿಯಲ್ಲಿ ಪ್ರಶ್ನಿಸುವವರು ಇರಬೇಕೆಂಬ ಸಂಪ್ರದಾಯವನ್ನು ಕಾಪಾಡಲಿಕ್ಕಾದರೂ ಪ್ರಬಲ ವಿಪಕ್ಷ ಬೇಕು. ಅಖಿಲ ಭಾರತ ಮಟ್ಟದಲ್ಲಿ ಬೇರುಗಳನ್ನು ಹೊಂದಿರುವ ಕಾಂಗ್ರೆಸ್​ನಿಂದ ಮಾತ್ರ ಇದು ಸಾಧ್ಯ. ಇದು ಕೈಗೂಡೀತೇ? ಧೂಳಿನಿಂದೆದ್ದು ಬರುವ ಫೀನಿಕ್ಸ್ ಪಕ್ಷಿಯಂತೆ ಕಾಂಗ್ರೆಸ್ ಮತ್ತೊಮ್ಮೆ ಗರಿಗೆದರಲಿದೆಯೇ? ಎಂಬುದು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿರುವ ಸಂಗತಿ.

 

Leave a Reply

Your email address will not be published. Required fields are marked *