ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸಿಂಹಸ್ವಪ್ನ

ಹಾವೇರಿ: ಕಾಂಗ್ರೆಸ್ಸಿಗರ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಸಿಂಹಸ್ವಪ್ನವಾಗಿದ್ದಾರೆ. ಅವರಿಗೆ ರಾತ್ರಿ ಕನಸಲ್ಲೂ ಮೋದಿ ಬರುತ್ತಿದು ಬೆಚ್ಚಿಬೀಳುತ್ತಿದ್ದಾರೆ. ನಮ್ಮಅಭ್ಯರ್ಥಿಗಳ ಮುಖದಲ್ಲೂ ಅವರಿಗೆ ಮೋದಿ ಕಾಣಿಸುತ್ತಿದ್ದಾರೆ. ಈ ಭಯದಿಂದ ವೈಯಕ್ತಿಕ, ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಉಸ್ತುವಾರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಮೈತ್ರಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲೆಡೆ ಬಿಜೆಪಿ ಪರ ವಾತಾವರಣವಿದ್ದು, ಕಾಂಗ್ರೆಸ್​ಗೆ ಸೋಲಿನ ಭೀತಿ ಶುರುವಾಗಿದೆ. ಇದರಿಂದ ಕಂಗೆಟ್ಟಿರುವ ಅವರು ಹತಾಶೆಯಿಂದ ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ. ಇದಕ್ಕೂ ಜನ ತಕ್ಕಪಾಠವನ್ನು ಕಲಿಸಲಿದ್ದಾರೆ ಎಂದರು.

ರಾಹುಲ್ ಹೆಸರು ಹೇಳಿ ಬ್ಯಾಡ ಅಂದೋರ್ಯಾರು..: ಪ್ರಧಾನಿ ಮೋದಿ ನಮ್ಮ ನಾಯಕರು. ಹೀಗಾಗಿ ನಮ್ಮ ಅಭ್ಯರ್ಥಿಗಳು ಅವರ ಹೆಸರು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಹಿಂದೆ ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹೆಸರು ಹೇಳಿಕೊಂಡು ಮತ ಕೇಳಿರಲಿಲ್ಲವೇ? ಈಗಲೂ ಅವರ ನಾಯಕ ರಾಹುಲ್ ಗಾಂಧಿ ಹೆಸರು ಹೇಳಿಕೊಂಡು ಮತ ಕೇಳಿ ಬ್ಯಾಡ ಅಂದೋರ್ಯಾರು. ಜನತೆಯೇ ತೀರ್ಮಾನ ಮಾಡ್ತಾರೆ. ದೇಶಕ್ಕೆ ಮೋದಿ ಬೇಕೋ, ರಾಹುಲ್ ಬೇಕೋ ಎಂದು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದೆ. ಕಾಂಗ್ರೆಸ್​ನ ಕ್ಷೇತ್ರಗಳನ್ನೂ ಈ ಸಾರಿ ಬಿಜೆಪಿ ವಶಪಡಿಸಿಕೊಳ್ಳಲಿದೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಇನ್ನೂ ಲೋಕಸಭೆ ಚುನಾವಣೆಯೇ ಮುಗಿದಿಲ್ಲ ಆಗಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಆಸೆ ಹೊರಹಾಕಿದ್ದಾರೆ. ಇದನ್ನು ಗಮನಿಸಿದರೆ ಆಂತರಿಕವಾಗಿ ಕಾಂಗ್ರೆಸ್​ನಲ್ಲಿ ಹಲವು ಗುಂಪುಗಳಾಗಿವೆ. ಅಲ್ಲದೆ ಕಾಂಗ್ರೆಸ್-ಜೆಡಿಎಸ್​ನವರು ಹೊಂದಾಣಿಕೆ ಆಗಿಲ್ಲ. ಇದೊಂದು ಕಲಬೆರಿಕೆ ಸರ್ಕಾರವಾಗಿದೆ ಎಂದು ಟೀಕಿಸಿದರು.

ನಾನು ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಕಾಂಗ್ರೆಸ್ಸಿನ ಕೆಳಮಟ್ಟದ ನಾಯಕರು ಬಿಜೆಪಿ ಪರ ಕೆಲಸ ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬರಲಿದ್ದು, ಆಡಳಿತ ಪಕ್ಷಕ್ಕೆ ಆಘಾತ ಕಾದಿದೆ. ಲೋಕಸಭೆ ಫಲಿತಾಂಶದ ನಂತರ ಸರ್ಕಾರ ಬದಲಾಗಲಿದೆ ಎಂದರು.

ಹಣಬಲದಿಂದ ಚುನಾವಣೆ ಗೆಲ್ಲುವ ಕಸರತ್ತು..: ಕಾಂಗ್ರೆಸ್, ಜೆಡಿಎಸ್​ಗೆ ಜನ ಬೆಂಬಲ ಸಿಗುತ್ತಿಲ್ಲ. ಹಣಬಲದಿಂದ ಗೆಲುವು ಸಾಧಿಸಲು ಹಣದ ಹೊಳೆ ಹರಿಸುತ್ತಿದ್ದು, ಸಾಕ್ಷಿ ಸಮೇತ ಸಿಕ್ಕಿದ್ದಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಯಾವುದೇ ಅಭಿವೃದ್ಧಿ ಆಧರಿತ ಚುನಾವಣೆ ಎದುರಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಕೊಟ್ಟಿಲ್ಲ, ಘೊಷಿತ ಕಾರ್ಯಕ್ರಮಗಳು ಅನುಷ್ಠಾನವಾಗಿಲ್ಲ. ಮತದಾರರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಯು.ಬಿ. ಬಣಕಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿ.ಪಂ. ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ ಇದ್ದರು.

ವೀರಶೈವ-ಲಿಂಗಾಯತರು ಪ್ರಬುದ್ಧರಿದ್ದಾರೆ..: ವೀರಶೈವರು, ಲಿಂಗಾಯತರು ಪ್ರಬುದ್ಧರಿದ್ದಾರೆ. ಅವರು ಯಾರ ಹೇಳಿಕೆಗೂ ಪ್ರಭಾವಿತರಾಗುವುದಿಲ್ಲ. ಅನುಕೂಲಸಿಂಧು ರಾಜಕಾರಣ ಮಾಡುವವರಿಗೆ ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿಯೂ ತಿರಸ್ಕರಿಸಿದ್ದಾರೆ. ಈ ಬಾರಿಯೂ ತಿರಸ್ಕರಿಸುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಉದಾಸಿ ಹ್ಯಾಟ್ರಿಕ್ ನಿಶ್ಚಿತ.: ಈಗಾಗಲೇ ಹಾವೇರಿ ಕ್ಷೇತ್ರದ 8ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ಕ್ಷೇತ್ರದ ಮತದಾರರು ಜಾಗೃತರಾಗಿದ್ದು, ಮತದಾನ ಪ್ರಮಾಣವೂ ಹೆಚ್ಚುಳವಾಗುವ ನಿರೀಕ್ಷೆಯಿದೆ. ಎಲ್ಲ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿ ಶಿವಕುಮಾರ ಉದಾಸಿಯವರ ಪರ ಒಲವು ಹೊಂದಿದ್ದಾರೆ. ಉದಾಸಿಯವರ ಹ್ಯಾಟ್ರಿಕ್ ಗೆಲುವು ನಿಶ್ಚಿತವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *