ಕಾಂಗ್ರೆಸ್ಗೆ ಪ್ಯಾಟಿ ಅಧಿಕೃತ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಾಮರಾವ್ ಪ್ಯಾಟಿ ಶನಿವಾರ ಸಂಜೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ಗೆ ಅಧಿಕೃತ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಪ್ಯಾಟಿಯವರನ್ನು ಸ್ವಾಗತಿಸಿದ ಖಂಡ್ರೆ, ಪ್ಯಾಟಿ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ. ಇಂಜಿನಿಯರಿಂಗ್ನಲ್ಲಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದೆವು. ಇದೀಗ ನಮ್ಮೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ. ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿದ ಶಾಮರಾವ ಪ್ಯಾಟಿ, ಡಾ.ಉಮೇಶ ಜಾಧವ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡಿರುವುದು ಆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರ. ಪಕ್ಷದಲ್ಲಿ ಯಾರನ್ನೂ ಕೇಳದೆ, ಸಲಹೆ ಪಡೆಯದೇ, ಚರ್ಚಿಸದೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಕ್ಷದಲ್ಲಿ ಅನೇಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

ಹಿರಿಯ ನಾಯಕರೂ ಆದ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಪಕ್ಷಕ್ಕೆ ಬೇಷರತ್ತಾಗಿ ಸೇರ್ಪಡೆಯಾಗಿದ್ದು, ಪಕ್ಷಕ್ಕಾಗಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತದಿಂದ ಆಯ್ಕೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖಗರ್ೆ, ಕ್ರೀಡಾ ಸಚಿವ ರಹೀಮ್ ಖಾನ್, ಮೈತ್ರಿ ಸಕರ್ಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಅಜಯಸಿಂಗ್, ಶಾಸಕರಾದ ಕನೀಜ್ ಫಾತಿಮಾ, ಎಂ.ವೈ.ಪಾಟೀಲ್, ಮೇಯರ್ ಮಲ್ಲಮ್ಮ ವಳಕೇರಿ, ಡಾ.ಭೀಮಾಶಂಕರ ಬಿಲಗುಂದಿ, ಭಾಗನಗೌಡ ಸಂಕನೂರ, ಬಸವರಾಜ ಭೀಮಳ್ಳಿ, ಭೀಮರಾವ ಟಿಟಿ, ನೀಲಕಂಠ ಮೂಲಗೆ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಇತರರು ಇದ್ದರು.

ಮಾಜಿ ಮೇಯರ್ ಶರಣಕುಮಾರ ಮೋದಿ ನಿರೂಪಣೆ ಮಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಸ್ವಾಗತಿಸಿದರು. ಕಲಬುರಗಿಯಲ್ಲಿ ಕಾಂಗ್ರೆಸ್ ಅಧಿಕೃತ ಸೇರ್ಪಡೆಗೊಂಡ ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು. ಪ್ಯಾಟಿಯವರಿಗೆ ಪಕ್ಷಕ್ಕೆ ಸ್ವಾಗತವಿದೆ ಎಂದು ಖರ್ಗೆ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಹುದ್ದೆಗೆ ಹೋಗಬಹುದಾದ ವ್ಯಕ್ತಿ. ಹೀಗಾಗಿ ಇಂತಹ ನಾಯಕರನ್ನು ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ. ಎಲ್ಲರೂ ಸಂಘಟಿತರಾಗಿ ಖರ್ಗೆ ಕೈ ಬಲಪಡಿಸಬೇಕಿದೆ.
| ಶಾಮರಾವ ಪ್ಯಾಟಿ, ಕಾಂಗ್ರೆಸ್ ಸೇರ್ಪಡೆಯಾದ ಮುಖಂಡ.