ಕಾಂಗ್ರೆಸನ್ನೇ ಸೊನ್ನೆ ಮಾಡ್ತೇವೆ!

ತುಮಕೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲೆಯಲ್ಲಿ ‘ಮೈತ್ರಿಧರ್ಮ’ ಪಾಲಿಸದವರ ವಿರುದ್ಧ ಶಿಸ್ತುಕ್ರಮಕ್ಕೆ ಕಾಂಗ್ರೆಸ್ ಮುಂದಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.

ಮೈತ್ರಿಕೂಟದ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧೆಗೆ ಬಹಿರಂಗವಾಗಿ ವಿರೋಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣರ ರೆಕ್ಕೆಪುಕ್ಕ ಕತ್ತರಿಸುವ ಕೆಲಸಕ್ಕೆ ಕೆಪಿಸಿಸಿ ಕೈಹಾಕಿದೆ. ಮಧುಗಿರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಅವರನ್ನು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿವಾಸದಲ್ಲಿ ಶನಿವಾರ ತುರ್ತಸಭೆ ನಡೆಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ರ್ಚಚಿಸಿದರು.

ಈ ವೇಳೆ ಕಾಂಗ್ರೆಸ್​ನಲ್ಲಿ ಅಮಾನತು ಮಾಡುವುದು ಹೊಸದೇನಲ್ಲ. ನಾನು ಯಾವತ್ತೂ ಪಕ್ಷ ನಿಷ್ಠ್ಠ ನಿಷ್ಠಾವಂತ ಕಾರ್ಯಕರ್ತರ ಬೆನ್ನಿಗೆ ನಿಲ್ಲುವುದಾಗಿ ಹೇಳುವ ಮೂಲಕ ಜಿಲ್ಲಾ ಕಾಂಗ್ರೆಸ್ ಹಾಗೂ ಹೈಕಮಾಂಡ್​ಗೆ ಸೆಡ್ಡು ಹೊಡೆದಿದ್ದಾರೆ.

ಸಾಮೂಹಿಕ ರಾಜೀನಾಮೆ ಬೆದರಿಕೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತು ಆದೇಶ ಹಿಂಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶೂನ್ಯ ಮಾಡುತ್ತೇವೆ. ಸ್ಥಳೀಯ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ರಾಜಣ್ಣ ಗುಡುಗಿದ್ದಾರೆ.

ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಲಾಗಿದ್ದು, ಈ ಆದೇಶ ಹಿಂಪಡೆಯದಿದ್ದರೆ ನಾಲ್ವರು ಜಿಪಂ, ತಾಪಂ ಅಧ್ಯಕ್ಷೆ ಸೇರಿ ಸದಸ್ಯರು, ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಮಧುಗಿರಿಯಲ್ಲಿ ಕಾಂಗ್ರೆಸ್ ಅನ್ನೇ ಸೊನ್ನೆ ಮಾಡುತ್ತೇವೆ. ಈ ಅಂಗಡಿ ಅಲ್ಲದಿದ್ದರೆ ಮತ್ತೊಂದು ಅಂಗಡಿಯಲ್ಲಿ ಸಾಮಾನು ಖರೀದಿಸುತ್ತೇವೆ ಎಂದು ಹೇಳುವ ಮೂಲಕ ಪಕ್ಷಾಂತರ ಸುಳಿವನ್ನು ಕೂಡ ನೀಡಿದ್ದಾರೆ.

ಲೀಡ್ ಕುರಿತು ಲೇವಡಿ: ಮಧುಗಿರಿಯಲ್ಲಿ ದೇವೇಗೌಡರಿಗೆ 1 ಲಕ್ಷ ಲೀಡ್ ಕೊಡುತ್ತೀವಿ. ಕೊರಟಗೆರೆಯಲ್ಲಿ ಕಾಂಗ್ರೆಸ್​ದು 80 ಸಾವಿರ, ಜೆಡಿಎಸ್​ನ 70 ಸಾವಿರ ಸೇರಿ 1.5 ಲಕ್ಷ ಮತಗಳ ಲೀಡ್ ಕೊಡಲಾಗುತ್ತೆ. ಒಟ್ಟಾರೆ ದೇವೇಗೌಡರ ಮಯ ಮಾಡುತ್ತೀವಿ. ಆಮೇಲೆ ಮತ್ತೆ ನೀವು ಮಾಯ ಮಾಡುತ್ತೀವಿ ಅಂತ ಹೇಳಬೇಡಿ ಎಂಬ ರಾಜಣ್ಣರ ಲೇವಡಿ ಮಾತುಗಳ ಮರ್ಮ ಫಲಿತಾಂಶದ ಸೂಚನೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ಧಿಕ್ಕರಿಸಿ ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಚುನಾವಣಾ ಪ್ರಚಾರ ಸಭೆ ಕರೆದಿರಲಿಲ್ಲ. ಜತೆಗೆ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಹಾಗಾಗಿ ಜಿಲ್ಲಾ ಕಾಂಗ್ರೆಸ್ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ತುಮಕೂರು, ಮಂಡ್ಯ ಹಾಗೂ ಹಾಸನದಲ್ಲಿ ಪಕ್ಷ ವಿರೋಧಿ ಚಟುವಟಿಕೆಯನ್ನು ಪಕ್ಷ ಗಮನಿಸಿದೆ. ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಮುಖಂಡರ ವಿರುದ್ಧ ವರದಿ ನೀಡಲಾಗಿದ್ದು, ಇದನ್ನು ಗೌಪ್ಯವಾಗಿಡಲಾಗಿದೆ.

| ಆರ್.ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ರಾಜಣ್ಣಗೆ ಎಚ್ಚರಿಕೆ ಸಂದೇಶ: ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ದೇವೇಗೌಡರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿ ಬಂಡಾಯದ ಬಾವುಟ ಬೀಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಮಧುಗಿರಿಗೆ ಪ್ರಚಾರಕ್ಕೆ ಬಂದಾಗಷ್ಟೇ ವೇದಿಕೆಯಲ್ಲಿ ಕಾಣಿಸಿದ್ದರು. ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ಅವರು ಮತ ಕೇಳಿರಲಿಲ್ಲ. ಹಾಗಾಗಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದಿಯಾಗಿ ಜಿಪಂ, ತಾಪಂ ಹಾಗೂ ಪುರಸಭೆ ಸದಸ್ಯರೂ ಪ್ರಚಾರದಿಂದ ದೂರ ಉಳಿದಿದ್ದರು. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೊಟ್ಟ ವರದಿ ಆಧರಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಬ್ಬರನ್ನು ಅಮಾನತುಗೊಳಿಸಿರುವ ಕೆಪಿಸಿಸಿ, ನಾಯಕ ಸಮುದಾಯದ ಪ್ರಭಾವಿ ಮುಖಂಡ ರಾಜಣ್ಣಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯದಲ್ಲಿ 2ನೇ ಹಂತದ ಚುನಾವಣೆ ಬಳಿಕ ರಾಜಣ್ಣ ವಿರುದ್ಧ ಕೆಪಿಸಿಸಿ ಶಿಸ್ತುಕ್ರಮ ಕೈಗೊಂಡರೆ ಆಶ್ಚರ್ಯ ಇಲ್ಲ.

Leave a Reply

Your email address will not be published. Required fields are marked *