ಕಸ ಸ್ವಚ್ಛಗೊಳಿಸದ್ದಿರೆ ಮನೆಗೆ ಸಾಗಣೆ

ಕುಮಟಾ: ತಾಲೂಕಿನ ಹೊನ್ಮಾಂವ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ಚೆಲ್ಲಲಾಗುತ್ತಿದ್ದು ಏ. 30ರೊಳಗೆ ಅದನ್ನು ಸ್ವಚ್ಛ ಮಾಡಬೇಕು. ಇಲ್ಲದಿದ್ದರೆ ಸಂಬಂದಪಟ್ಟವರ ಮನೆ, ಕಚೇರಿಗೆ ಕಸ ಸಾಗಿಸಲಾಗುವುದು ಎಂದು ಯುವಾ ಬ್ರಿಗೇಡ್ ಕಾರ್ಯಕರ್ತ ಲಕ್ಷ್ಮೀಕಾಂತ ಎಚ್ಚರಿಕೆ ನೀಡಿದರು.

ಹೊನ್ಮಾಂವ್ ಸೇತುವೆ ಬಳಿ ಹೆದ್ದಾರಿ ಬದಿಯಲ್ಲಿ ಸುರಿದ ಕಸದ ರಾಶಿಯನ್ನು ಶನಿವಾರ ಪತ್ರಕರ್ತರಿಗೆ ತೋರಿಸಿ ಸುದ್ದಿಗೋಷ್ಠಿಯಲ್ಲಿ ತಮ್ಮ ಹೋರಾಟದ ರೂಪುರೇಷೆ ವಿವರಿಸಿದರು.

ಯುವ ಬ್ರಿಗೇಡ್​ನಿಂದ ವರ್ಷದ ಹಿಂದೆ 16 ವಾರಗಳ ಕಾಲ ಕಷ್ಟಪಟ್ಟು 27 ಟನ್ ಕಸ ಸ್ವಚ್ಛ ಮಾಡಿದ್ದೇವೆ. ಆದರೆ ಈಗ ಪುನಃ ಇಲ್ಲಿ ದುಪ್ಪಟ್ಟು ಕಸ ಬೀಳುತ್ತಿದೆ. ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೂ ಸಮಸ್ಯೆ ತಿಳಿಸಿದ್ದೇವೆ. ಕಲಭಾಗ ಗ್ರಾಮ ಪಂಚಾಯಿತಿಗೆ, ಪುರಸಭೆಗೆ ನಿಗಾ ವಹಿಸುವಂತೆ ವಿನಂತಿಸಿದ್ದೇವೆ. ಗ್ರಾಮ ಪಂಚಾಯಿತಿಯವರು ಈ ಕುರಿತು ಸಭೆ ನಡೆಸಿ ನಮ್ಮೊಂದಿಗೆ ರ್ಚಚಿಸುತ್ತೇವೆ ಎಂದಿದ್ದರು. ಆದರೆ ಯಾರಿಂದಲೂ ಸ್ಪಂದನೆಯಿಲ್ಲ. ಇಲ್ಲಿ ಔಷಧೀಯ ತ್ಯಾಜ್ಯಗಳು, ಸರಾಯಿ, ಹೊಟೆಲ್ ತ್ಯಾಜ್ಯ ಸೇರಿ ಅಪಾಯಕಾರಿ ಕಸದ ರಾಶಿ ಬೀಳುತ್ತಿದೆ. ನಮ್ಮ ಪ್ರಯತ್ನಗಳು ನೀರಿನಲ್ಲಿ ಮಾಡಿದ ಹೋಮದಂತಾಗಿದೆ ಎಂದರು.

ಸಂಚಾಲಕ ರಾಮದಾಸ ಮಾತನಾಡಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಇಲ್ಲಿ ಸಿಸಿಟಿವಿ ಅಳವಡಿಸುವ ಭರವಸೆ ನೀಡಿದ್ದರು. ಪಂಚಾಯಿತಿಯವರು ಕಸ ಎಸೆಯದಂತೆ ಎಚ್ಚರಿಕೆ ಫಲಕ ಹಾಕಿ ಸುಮ್ಮನಾಗಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದೇ ಪುನಃ ಕಸ ಬೀಳುವುದು ಹೆಚ್ಚಾಗಲು ಕಾರಣವಾಗಿದೆ. ಇಲ್ಲಿನ ಹೆದ್ದಾರಿ ಬದಿಯಲ್ಲಿ ಕಾಂಡ್ಲಾ ವನವಿದ್ದು ಅಪಾಯಕಾರಿ ಕಸದ ಕಾರಣದಿಂದ ಪರಿಸರದಲ್ಲಿ ಶಾಶ್ವತ ದುಷ್ಪರಿಣಾಮಗಳಾಗುತ್ತಿವೆ ಎಂದರು.

ಕಾರ್ಯಕರ್ತ ಕಿರಣ ಮಾತನಾಡಿ, ಏ. 30 ರೊಳಗೆ ಇಲ್ಲಿನ ಕಸ ಸ್ವಚ್ಛವಾಗಬೇಕು. ಇಲ್ಲದಿದ್ದರೆ ಹಸಿರುಪೀಠದೆದುರು ಸಮಸ್ಯೆ ಒಯ್ಯುವುದಕ್ಕೂ ಸಿದ್ಧರಿದ್ದೇವೆ. ನಾವು ಕಸ ತೆಗೆಯುವುದಿಲ್ಲ. ಸಂಬಂಧಪಟ್ಟವರಿಂದಲೇ ಕಸ ತೆಗೆಸುತ್ತೇವೆ. ಕಸ ಎಸೆದವರ ಮನೆಗೆ ಕಸ ತಲುಪಿಸುತ್ತೇವೆ ಎಂದರು.

ಯುವಾ ಬ್ರಿಗೇಡ್​ನ ಅಣ್ಣಪ್ಪ, ಸತೀಶ, ಕಿಶೋರ, ಪ್ರಕಾಶ, ಸಂದೀಪ, ಅಶೋಕ, ಆದಿತ್ಯ ಇನ್ನಿತರರು ಇದ್ದರು.