ಕಸ ವಿಲೇವಾರಿಯೇ ಸಮಸ್ಯೆ

ರಾಮನಗರ: ನಗರದ ಹಲವೆಡೆ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದೆ ಸಂಚಾರಕ್ಕೆ ತೊಂದರೆಯಾಗಿದೆ.

ರಾಮನಗರ ನಗರಸಭೆ ವ್ಯಾಪ್ತಿಯ ಜಾಲಮಂಗಲ, ರಾಯರದೊಡ್ಡಿ, ಮಾಗಡಿ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಸಾಮಾನ್ಯವಾಗಿದೆ. ಕಸದ ರಾಶಿ ಇರುವೆಡೆ ನಾಯಿ, ಹಂದಿ ಹಾವಳಿ ಜಾಸ್ತಿಯಾಗಿದ್ದು, ತ್ಯಾಜ್ಯವನ್ನು ರಸ್ತೆಗೆ ಎಳೆಯುತ್ತಿವೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿರುವುದಲ್ಲದೆ, ಪಾದಚಾರಿಗಳಿಗೆ ಕೆಟ್ಟ ವಾಸನೆ ಕಿರಿಕಿರಿ ಅನುಭವಿಸು ವಂತಾಗಿದೆ. ಆದರೂ ನಗರಸಭೆ ಮಾತ್ರ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.

ಕಸಮುಕ್ತ ನಗರ ಮಾಡುವ ಉದ್ದೇಶ ಹೊಂದಿರುವ ನಗರಸಭೆ ಇತ್ತೀಚೆಗೆ ತನ್ನ ಗುರಿ ಮರೆತಂತಿದೆ. ನಗರದ ಪ್ರಮುಖ ವಾರ್ಡ್​ಗಳಲ್ಲೂ ಪೌರ ಕಾರ್ವಿುಕರು ಪ್ರತಿನಿತ್ಯ ಕಸ ಸಂಗ್ರಹಣೆ ಮಾಡುವುದಿಲ್ಲ ಎಂಬ ದೂರು ಕೇಳಿಬಂದಿವೆ. ಇನ್ನೂ ಕೆಲ ವಾರ್ಡ್​ಗಳಲ್ಲಿ ವಾರವಾದರೂ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ನಾಗರಿಕರು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಒಂದು ವೇಳೆ ಅಧಿಕಾರಿಗಳು ಸ್ಥಳಕ್ಕೆ ಬಂದರೂ ನೀವೇ ಕಸ ಎಸೆದಿದ್ದೀರಿ ಎಂದು ಅಂಗಡಿಯವರ ಮೇಲೆಯೇ ಗೂಬೆ ಕೂರಿಸುತ್ತಾರೆ. ಹಾಗಾಗಿ ಮಾಗಡಿ, ರಾಯರದೊಡ್ಡಿ ರಸ್ತೆಗಳಲ್ಲಿ ಕಸದ ರಾಶಿಗೆ ಸ್ಥಳೀಯರೇ ಬೆಂಕಿ ಹಚ್ಚುತ್ತಿರುವುದು ಕಂಡುಬರುತ್ತಿದೆ.

ರಾಮನಗರದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಕಸ ದಹಿಸಲು ಹಾಕಿದ ಬೆಂಕಿ ಬೇರೆಡೆಗೆ ಆವರಿಸಿ, ಹೆಚ್ಚಿನ ಅನಾಹುತವಾಗುವುದಕ್ಕೂ ಮೊದಲು ನಗರಸಭೆ ಎಚ್ಚೆತ್ತು ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ಪೌರ ಕಾರ್ವಿುಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಾರೆ. ಕೆಲ ರಸ್ತೆಗಳಲ್ಲಿ ಅಂಗಡಿಯವರೇ ತ್ಯಾಜ್ಯ ಎಸೆಯುತ್ತಾರೆ. ಕಸ ಎಸೆಯುವುದನ್ನು ನಿಲ್ಲಿಸುವ ಉದ್ದೇಶದಿಂದ ಕೆಲವೆಡೆ ಕಸ ಹಾಕುವ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ ದೇವರ ಚಿತ್ರಗಳನ್ನು ಇಟ್ಟಿದ್ದೇವೆ. ಈಗ ಆ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

| ಶುಭಾ ಆಯುಕ್ತರು, ರಾಮನಗರ ನಗರಸಭೆ

Leave a Reply

Your email address will not be published. Required fields are marked *