ಕಸ ಎಸೆವವರ ಪತ್ತೆಗೆ ಸಿಸಿ ಕ್ಯಾಮರಾ ಕಾವಲು

ರಾಮನಗರ: ನಗರದ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಕಡಿವಾಣ ಹಾಕಲು ನಗರಸಭೆ ಕಸದ ರಾಶಿ ಹೆಚ್ಚಾಗಿ ಕಂಡುಬರುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ.

ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ, ರಾಜಕಾಲುವೆ ಸೇರಿ ಜನದಟ್ಟಣೆಯಿರುವ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಕಂಡುಬಂದಿದೆ. ಇದರಿಂದ ನಗರದಲ್ಲಿ ಸ್ವಚ್ಛತೆ ಕೊರತೆ ತಾಂಡವವಾಡುವಂತಾಗಿದೆ. ಕಸ ಎಸೆಯುವ ಜಾಗದಲ್ಲಿ ದೇವರ ಪೋಟೊಗಳನ್ನು ಇಟ್ಟು ಧಾರ್ವಿುಕ ಭಾವನೆ ಮೂಡಿಸಿ, ಆ ಸ್ಥಳದಲ್ಲಿ ಕಸ ಎಸೆಯುವುದನ್ನು ತಡೆಯಲು ನಗರಸಭೆ ಯತ್ನಿಸಿತ್ತು. ಆದರೆ, ಆ ಸ್ಥಳ ಬಿಟ್ಟು ಬೇರೆ ಕಡೆ ಕಸ ಹಾಕುವುದನ್ನು ಜನ ಮುಂದುವರಿಸಿದ್ದರು. ಬಳಿಕ ಕಸ ಎಸೆಯುವವರನ್ನು ಹಿಡಿದು, ಎಚ್ಚರಿಕೆ ನೀಡುವುದು. ಪುನರಾವರ್ತನೆಯಾದರೆ ದಂಡ ವಿಧಿಸುವ ಕಾರ್ಯ ಕೂಡ ನಡೆಸಿತ್ತು. ಆದರೆ ಕಸ ಎಸೆಯುವವರನ್ನು ಗಮನಿಸಿ, ಹಿಡಿಯುವುದು ಅಷ್ಟು ಸುಲಭದ ಕಾರ್ಯವಲ್ಲ ಎಂದು ಅರಿತ ನಗರಸಭೆ ಇದೀಗ ತಂತ್ರಜ್ಞಾನದ ಮೊರೆ ಹೋಗಿದೆ.

ಕಸ ಎಸೆಯುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಂಡಿದೆ. ಕಸ ಎಸೆಯುವವರ ವಿಡಿಯೋ ಕ್ಯಾಮರಾಗಳಲ್ಲಿ ಸೆರೆಯಾಗಲಿದೆ. ಅವರಿಗೆ ಒಮ್ಮೆ ಎಚ್ಚರಿಕೆ ನೀಡಲಾಗುತ್ತದೆ. ಅಲ್ಲದೆ ಕಸ ಎಸೆಯುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಅಂಥವರನ್ನು ಕಿಂಡಲ್ ಮಾಡಿ, ಬುದ್ದಿವಾದ ಹೇಳಲಾಗುತ್ತದೆ. ಆದರೂ ಮರುಕಳಿಸಿದರೆ ಅಂಥವರಿಗೆ ದಂಡ ವಿಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಎಲ್ಲೆಲ್ಲಿ ಕ್ಯಾಮೆರಾ: ಈಗಾಗಲೇ ನಗರದ ಬೆಸ್ಕಾಂ ಕಚೇರಿ ಸಮೀಪದ ಅಂಚೆ ಕಚೇರಿ ಬಳಿ ಹಾಗೂ ವಾರ್ಡ್ ನಂಬರ್ 12ರ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ ಅರ್ಕಾವತಿ ಸೇತುವೆ ಸೇರಿ ನಗರದ ಯಾವ ಯಾವ ಸ್ಥಳಗಳಲ್ಲಿ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಎಸೆಯುತ್ತಾರೋ ಅಂಥ ಜಾಗವನ್ನು ಗುರುತಿಸಿ, ಅಲ್ಲೆಲ್ಲ ಸಿಸಿ ಕ್ಯಾಮರಾ ಅಳವಡಿಸಲು ನಗರಸಭೆ ಮುಂದಾಗಿದೆ. ಈ ಸಂಬಂಧ ನಗರಸಭೆಯ ಸಾಮಾನ್ಯಸಭೆಯಲ್ಲೂ ಅನುಮೋದನೆ ಪಡೆಯಲು ಆಯುಕ್ತರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಇದೆ. ಒಟ್ಟಾರೆ ಎಲ್ಲೆಂದರಲ್ಲಿ ಕಸ ಎಸೆಯುವ ಜನರ ಮನಸ್ಥಿತಿಯನ್ನು ಬದಲಾಯಿಸಲು ನಗರಸಭೆ ಸರ್ವ ಪ್ರಯತ್ನ ಮಾಡುವ ಜತೆಗೆ ತಂತ್ರಜ್ಞಾನ ಬಳಕೆಯಿಂದ ನಿರೀಕ್ಷಿತ ಗುರಿ ಸಾಧಿಸಲು ಹೆಣಗಾಡುವಂತಾಗಿದೆ.

ನಗರದ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ನಗರಸಭೆ ಸಿಸಿ ಕ್ಯಾಮರಾ ಅಳವಡಿಸಿರುವುದು ಸ್ವಾಗತಾರ್ಹ ಕ್ರಮ. ಸಾರ್ವಜನಿಕರು ಸಹ ಕಸ ವಿಲೇವಾರಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ನಗರಸಭೆ ಕೂಡ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

| ಪ್ರಕಾಶ್, ರಾಮನಗರ ರಾಯರದೊಡ್ಡಿ

 

ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ನಗರದಲ್ಲಿ ಸ್ವಚ್ಛತೆ ಕೊರತೆ ಎದುರಾಗುತ್ತಿದೆ. ಇದನ್ನು ತಡೆಯಲು ನಗರದ ಕೆಲ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸದ ರಾಶಿ ಬೀಳುವ ಇನ್ನಷ್ಟು ಸ್ಥಳಗಳನ್ನು ಗುರುತಿಸಿ, ಅಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ನಗರದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ.

| ಬಿ. ಶುಭಾ, ಆಯುಕ್ತರು, ನಗರಸಭೆ ರಾಮನಗರ

Leave a Reply

Your email address will not be published. Required fields are marked *