ಕಸಾಪ ನಿರ್ಧಾರಕ್ಕೆ ಸುಗಮ ಸಂಗೀತ ಪರಿಷತ್ ಸ್ವಾಗತ

ಬೆಂಗಳೂರು: ನಾಡಗೀತೆ ಕುರಿತಾಗಿರುವ ಗೊಂದಲ ಪರಿಹರಿಸಲು ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಧಾರಕ್ಕೆ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಬಲ ಸೂಚಿಸಿದೆ.

ರಾಜ್ಯೋತ್ಸವ ನಿಮಿತ್ತ ವಿಜಯವಾಣಿ ಹಾಗೂ ದಿಗ್ವಿಜಯ 24×7 ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನಾಡಗೀತೆ ಕುರಿತಾಗಿರುವ ವಿವಾದ ಬಗೆಹರಿಸುವ ಸಂಬಂಧ ನ.14ರಂದು ಸಭೆ ನಡೆಸುವುದಾಗಿ ಪ್ರಕಟಿಸಿದ್ದರು. ಇದನ್ನು ಬೆಂಬಲಿಸಿರುವ ಕರ್ನಾಟಕ ಸುಗಮ ಸಂಗೀತ ಪರಿಷತ್ತು ತಕ್ಷಣವೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

2003ರಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನಾಡಗೀತೆಯನ್ನು ಅಧಿಕೃತವಾಗಿ ಘೋಷಿಸಿತ್ತು.

ಎರಡು ಸಮಿತಿ ರಚನೆ: ಕಲಾವಿದರ ಮನವಿ ಮೇರೆಗೆ ಡಾ. ಜಿ.ಎಸ್. ಶಿವರುದ್ರಪ್ಪ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಆದರೆ ಸಮಿತಿಯ ಶಿಫಾರಸುಗಳನ್ನು ಅಂಗೀಕರಿ ಸಿರಲಿಲ್ಲ. ನಂತರ ವಸಂತ ಕನಕಾಪುರ ನೇತೃತ್ವದಲ್ಲಿ 2013ರಲ್ಲಿ ಸಮಿತಿ ರಚನೆಗೊಂಡಿತ್ತು. ವಸಂತ ಕನಕಾಪುರ ನಿಧನದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷತೆಯನ್ನು ಚನ್ನವೀರ ಕಣವಿಗೆ ವಹಿಸಲಾಗಿತ್ತು. ಈ ಸಮಿತಿ 2014ರ ಮೇ ತಿಂಗಳಿನಲ್ಲಿ ಅಂತಿಮ ವರದಿ ನೀಡಿದೆ. ಆದರೆ, ಸರ್ಕಾರ ಇದುವರೆಗೂ ತೀರ್ಮಾನ ಕೈಗೊಳ್ಳದಿರುವುದು ಬೇಸರ ತಂದಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.

15 ವರ್ಷಗಳಿಂದ ಸರ್ಕಾರಕ್ಕೆ ಹಲವು ಬಾರಿ ಮನವಿ

ಮಾಡಿದರೂ ಪ್ರಯೋಜನವಾಗಿಲ್ಲ. ಮೂರು ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಅಧಿಕಾರಿಗಳ ಮನವಿ ಮೇರೆಗೆ 2 ನಿಮಿಷ 30 ಸೆಕೆಂಡ್​ನಲ್ಲಿ ನಾಡಗೀತೆಯನ್ನು ಹಾಡಿ ತೋರಿಸಲಾಗಿದೆ. ಆ ಬಗ್ಗೆಯೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈಗಲಾದರೂ ಗೊಂದಲ ನಿವಾರಿಸಬೇಕೆಂದು ಸರ್ಕಾರವನ್ನು ಮುದ್ದುಕೃಷ್ಣ ಒತ್ತಾಯಿಸಿದ್ದಾರೆ.