Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ

Sunday, 17.09.2017, 3:00 AM       No Comments

ಪರಮತ ಸಹಿಷ್ಣುತೆಯನ್ನು ಜತನದಿಂದ ಕಾಯ್ದುಕೊಂಡು ಬಂದ ಕನ್ನಡ ನಾಡಿನಲ್ಲೀಗ ಕಂಡುಬರುತ್ತಿರುವ ಅಸಹನೆ ಆತಂಕಕಾರಿಯಾದುದು. ತನಗಿಂತ ಬೇರೆಯಾಗಿ ಯೋಚಿಸುವವರನ್ನು, ಬೇರೆ ರೀತಿ ಬದುಕಲು ಅಪೇಕ್ಷಿಸುವವರನ್ನು ತಾಳಿಕೊಳ್ಳಲಾಗದ ಮನೋಭಾವ ನಾಗರಿಕ ಸಮಾಜದ ಲಕ್ಷಣವಲ್ಲ. ಇತ್ತೀಚಿನ ದಿನಗಳಲ್ಲಿ ಈ ಬಗೆಯ ಅಸಹನೆ ಆಕ್ರೋಶದ ವಾತಾವರಣ ನಿರ್ವಿುಸಿ, ಕ್ರಮೇಣ ಹಲ್ಲೆಯ ರೂಪ ತಾಳಿ, ಈಗ ಹತ್ಯೆಯ ಹಂತ ತಲುಪಿರುವುದು ವಿಷಾದನೀಯ.

 

‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ’- ಇದು ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ದಲ್ಲಿ ಬರುವ ಚಿಂತನೆ. ಕವಿರಾಜಮಾರ್ಗ ಒಂದು ಲಕ್ಷಣಗ್ರಂಥ ಮಾತ್ರವಲ್ಲ, ರಾಜಕೀಯ ಸಾಂಸ್ಕೃತಿಕ ಪಠ್ಯವೂ ಹೌದು. ಕಸವರವೆಂದರೆ ಸಂಪತ್ತು. ನಿಜವಾದ ಸಂಪತ್ತೆಂದರೆ ಬ್ಯಾಂಕ್ ಬ್ಯಾಲೆನ್ಸ್ ಅಲ್ಲ. ಅನ್ಯರ ವಿಚಾರಗಳನ್ನು, ಅನ್ಯಧರ್ಮವನ್ನು ತಾಳಿಕೊಳ್ಳುವುದು, ಗೌರವಿಸುವುದು. ಹಾಗೆ ತಾಳಿಕೊಳ್ಳುವುದನ್ನು ಕಲಿತಾಗ ಸಹಬಾಳ್ವೆ ಸಾಧ್ಯ, ಅಂತಹ ವಿವೇಕ ನಮ್ಮ ಬದುಕನ್ನು ಸಹನೀಯಗೊಳಿಸುತ್ತದೆ. ‘ತಾಳುವಿಕೆ ತಪ’ ಎನ್ನುವುದು ಈ ಹಿನ್ನೆಲೆಯಲ್ಲಿ. ಇಂತಹ ತಾಳುವಿಕೆ ಸಹಜಗುಣವೇನಲ್ಲ, ಪ್ರಯತ್ನದಿಂದ ರೂಢಿಸಿಕೊಳ್ಳಬೇಕಾದಂಥದು. ಸಾವಿರ ವರ್ಷಗಳ ಹಿಂದೆಯೇ ಕನ್ನಡ ಮನಸ್ಸು ಹೀಗೆ ಉದಾತ್ತವಾಗಿ ಯೋಚಿಸಿತ್ತು. ಭಿನ್ನ ವಿಚಾರಗಳನ್ನು ಗೌರವಿಸುವ ಸಹಿಷ್ಣುತಾ ಮನೋಭಾವವನ್ನು ಪ್ರಕಟಿಸಿತ್ತು. ಹೀಗೆ ಉನ್ನತ ನೆಲೆಯಲ್ಲಿ ಯೋಚಿಸಿದ್ದ ಕನ್ನಡನಾಡಿನಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಭಿನ್ನಮತದ ಬಗೆಗಿನ ಅಸಹನೆ, ಅನ್ಯರ ವಿಚಾರಗಳನ್ನು ಹತ್ತಿಕ್ಕುವ ಆಕ್ರಮಣಕಾರಿ ಮನೋಭಾವ ಆತಂಕ ಮೂಡಿಸುತ್ತದೆ, ದಿಗಿಲು ಹುಟ್ಟಿಸುತ್ತದೆ.

ಪರಿಹಾರಕ್ಕೆ ದಾರಿಯಿದೆ: ಯಾವುದೇ ಕ್ಷೇತ್ರದಲ್ಲಾಗಲೀ ಭಿನ್ನಾಭಿಪ್ರಾಯ ಬರುವುದು, ಆ ಬಗ್ಗೆ ವಾದವಿವಾದ ನಡೆಯುವುದು ಮನುಷ್ಯ ಸಮಾಜದಲ್ಲಿ ತೀರಾ ಸಹಜ. ನಮ್ಮ ನಮ್ಮ ಮನೆಗಳಲ್ಲಿಯೇ ಗಮನಿಸಿ. ಎಲ್ಲ ವಿಚಾರಗಳಲ್ಲಿಯೂ ಸರ್ವಸಮ್ಮತ ಅಭಿಪ್ರಾಯ ಇರುತ್ತದೆಯೇ? ಗಂಡ ಹೆಂಡತಿಯರಲ್ಲಿಯೇ ಭಿನ್ನಾಭಿಪ್ರಾಯ ಇರುವುದಿಲ್ಲವೇ? ಈ ಭಿನ್ನಾಭಿಪ್ರಾಯಗಳೇ ಅಲ್ಲವೇ ಅಸಹನೆ, ಆಕ್ರೋಶಕ್ಕೆ ಹಾದಿಮಾಡಿಕೊಡುವುದು. ಇದನ್ನು ಎರಡು ರೀತಿ ಪರಿಹರಿಸಿಕೊಳ್ಳಬಹುದು. ಒಂದು ಪರಸ್ಪರ ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು. ಇದು ವಿವೇಕದ ಮಾರ್ಗ. ಮತ್ತೊಂದು ಕೈ ಕೈ ಮಿಲಾಯಿಸಿ ಬಾಯಿ ಮುಚ್ಚಿಸುವುದು. ಇದು ಪಶುಬಲ ಪ್ರದರ್ಶನದ ಸರ್ವಾಧಿಕಾರಿ ರಾಕ್ಷಸಮಾರ್ಗ. ನಮ್ಮ ಸಮಾಜ ಈಗ ಈ ಎರಡನೆಯ ಹಾದಿ ಹಿಡಿಯುತ್ತಿದೆಯೇ?

ಅಪಾರವಾದ ಪರಮತ ಸಹಿಷ್ಣುತೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ನಮ್ಮ ಕನ್ನಡ ನಾಡಿನಲ್ಲಿ ಈಗ ಕಂಡುಬರುತ್ತಿರುವ ಈ ಬಗೆಯ ಅಸಹನೆ ಆತಂಕಕಾರಿಯಾದುದು. ತನಗಿಂತ ಬೇರೆಯಾಗಿ ಯೋಚಿಸುವವರನ್ನು, ತನಗಿಂತ ಭಿನ್ನವಾದ ಆಚಾರ ಶ್ರದ್ಧೆಯುಳ್ಳವರನ್ನು, ತನಗಿಂತ ಬೇರೆ ರೀತಿ ಬದುಕಲು ಅಪೇಕ್ಷಿಸುವವರನ್ನು ತಾಳಿಕೊಳ್ಳಲಾಗದ ಮನೋಭಾವದ ಸ್ಥಿತಿ ನಾಗರಿಕ ಸಮಾಜದ ಲಕ್ಷಣವಲ್ಲ. ಇತ್ತೀಚಿನ ದಿನಗಳಲ್ಲಿ ಈ ಬಗೆಯ ಅಸಹನೆ ಆಕ್ರೋಶದ ವಾತಾವರಣ ನಿರ್ವಿುಸಿ, ಕ್ರಮೇಣ ಹಲ್ಲೆಯ ರೂಪ ತಾಳಿ, ಈಗ ಅದು ಹತ್ಯೆಯ ಹಂತ ತಲುಪಿದೆ. ಕಲಬುರ್ಗಿಯವರ ಹತ್ಯೆಯ ಅಪರಾಧಿಗಳ ಪತ್ತೆಯಾಗಿ ಅವರಿಗೆ ಶಿಕ್ಷೆಯಾಗುವ ಮುನ್ನವೇ ಈಗ ಗೌರಿಯ ಹತ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಬೀದಿಗಳಿಗೆ ರಕ್ತದ ಕೆಸರು ಮೆತ್ತಿಕೊಂಡಿದೆ. ಮನುಷ್ಯ ಜೀವಿಗಳ ಕೊಲೆಯೆಂಬುದು ಆಟದಂತಾಗಿದೆ. ಈ ಪಶುಬಲದ ಪ್ರದರ್ಶನದ ನಡುವೆ ಸೂಕ್ಷ್ಮವೂ ಕೋಮಲವೂ ಆದ ಮಾನವತೆಯ ದನಿ ಅಡಗಿಹೋಗುತ್ತಿದೆ. ಪ್ರಜಾಪ್ರಭುತ್ವದ ಜೀವಾಳವಾದ ವ್ಯಕ್ತಿಸ್ವಾತಂತ್ರ್ಯ ಹರಣವಾಗುತ್ತಿದೆ. ವ್ಯಕ್ತಿತ್ವದ ವಿಕಾಸಕ್ಕೆ ಅಗತ್ಯವಾದ, ಪ್ರಜಾಪ್ರಭುತ್ವದ ಅಡಿಗಲ್ಲಾದ ಭಿನ್ನಮತದ ಅಭಿವ್ಯಕ್ತಿಗೆ ಅಗತ್ಯವಾದ ವಾತಾವರಣವನ್ನು ನಿರ್ವಿುಸುವುದು ಇಂದು ಎಲ್ಲ ಪ್ರಜ್ಞಾವಂತರ ಕರ್ತವ್ಯವಾಗಿದೆ. ಇದು ಸಾಧ್ಯವಾಗದಿದ್ದರೆ ಪ್ರಜಾಪ್ರಭುತ್ವ ಒಂದು ಅಣಕವಾಗಿ ಅದರ ಹೆಸರಿನಲ್ಲಿ ಸರ್ವಾಧಿಕಾರಿ ಶಕ್ತಿ ವಿಜೃಂಭಿಸಲು ನಾವೇ ಹಾದಿ ಮಾಡಿಕೊಟ್ಟಂತಾಗುತ್ತದೆ.

ಆರೋಗ್ಯಕರ ವಾತಾವರಣವಿಲ್ಲ: ಮುಖ್ಯ ಮಾತೆಂದರೆ ನಮ್ಮಲ್ಲಿ ಬೌದ್ಧಿಕ ಸಂವಾದಕ್ಕೆ ಬೇಕಾದ ಒಂದು ವಾತಾವರಣವೇ ಇಲ್ಲದಂತಾಗಿಬಿಟ್ಟಿದೆ. ಉನ್ನತ ಮಟ್ಟದ ಬೌದ್ಧಿಕ ಅಧ್ಯಯನ ಕೇಂದ್ರಗಳಾದ ನಮ್ಮ ವಿಶ್ವವಿದ್ಯಾಲಯಗಳಲ್ಲೂ ಅಂತಹ ವಾತಾವರಣವಿಲ್ಲ. ಇನ್ನು ಸಾರ್ವಜನಿಕ ಬದುಕಿನಲ್ಲಿ ನಾವು ಅದನ್ನು ಅಪೇಕ್ಷಿಸುವುದಾದರೂ ಹೇಗೆ? ಭಿನ್ನಾಭಿಪ್ರಾಯಗಳು ಬೀದಿ ಜಗಳಗಳಾಗುತ್ತಿವೆ. ಒಮ್ಮೆ ಕುರ್ತಕೋಟಿಯವರೊಂದಿಗೆ ಹರಟೆ ಹೊಡೆಯುತ್ತಿದ್ದಾಗ ‘ಸಾಹಿತ್ಯದಿಂದ ನೀವು ಪಡೆದದ್ದೇನು?’ ಎಂದು ಪ್ರಾಸಂಗಿಕವಾಗಿ ಕೇಳಿದ್ದೆ. ಅದಕ್ಕೆ ಅವರು- ‘ದಿನನಿತ್ಯದ ಭಾಷೆಗೆ ಎರಡೇ ಸಾಧ್ಯತೆಗಳಿರುತ್ತವೆ. ಒಂದು ನಿಂದನೆ, ಮತ್ತೊಂದು ಆರಾಧನೆ. ಇವೆರಡನ್ನೂ ಮೀರಿದ ನೆಲೆಯಲ್ಲಿ ಭಾಷೆಯನ್ನು ಬಳಸುವ ಬಗೆಯನ್ನು ಸಾಹಿತ್ಯ ಕಲಿಸುತ್ತದೆ’ ಎಂದಿದ್ದರು. ಇವತ್ತು ನಮ್ಮ ಸಾಹಿತ್ಯದ ಭಾಷೆಯೂ ನಿಂದನೆ ಅಥವಾ ಆರಾಧನೆ ಇವೆರಡೇ ನೆಲೆಗೆ ಇಳಿದುಬಿಟ್ಟಂತೆ ತೋರುತ್ತದೆ. ಇನ್ನು ಜನಸಾಮಾನ್ಯರ ಭಾಷೆಯ ಪಾಡೇನು? ನಮ್ಮ ಸಾರ್ವಜನಿಕ ಬದುಕಿನಲ್ಲಿ ಯಾರೇ ಮಾತನಾಡಿದರೂ ಒಂದೋ ಬೈಗುಳದ ಹಾಗೆ ಕೇಳಿಸುತ್ತದೆ. ಇಲ್ಲವೇ ಹೊಗಳಿಕೆಯ ದನಿ ಇರುತ್ತದೆ. ಇಂಥ ಪರಿಸರದಲ್ಲಿ ನಿಜ ನುಡಿಯಬೇಕಾದವರ ಸವಾಲನ್ನು ಗಮನಿಸಿ. ಗಾಂಧೀಜಿ ಸಂವಾದದಲ್ಲಿ ಒಮ್ಮೆ ಹೀಗೆ ಹೇಳಿದ್ದರು- ‘ನಿಮ್ಮ ಬಗ್ಗೆ ನನಗೆ ಗೌರವವಿದೆ. ಆದರೆ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ’. ಈ ಬಗೆಯ ಸಂವಾದ ಸಾಧ್ಯವಾಗದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆಯೇ? ಪರಸ್ಪರ ಗೌರವವಿಟ್ಟುಕೊಂಡು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲದ ಸ್ಥಿತಿ ಈಗ ನಿರ್ವಣವಾಗಿದೆ. ನಾಲಗೆಯನ್ನು ಕತ್ತಿಯಂತೆ ಝುಳಪಿಸುತ್ತಾ ನಾವು ಮಾತನಾಡುತ್ತಿದ್ದೇವೆ. ಕ್ರಮೇಣ ನಾಲಗೆಯನ್ನು ಬಿಟ್ಟು ಕತ್ತಿಯೇ ಮಾತನಾಡತೊಡಗುತ್ತದೆ. ಅದರ ಪರಿಣಾಮವನ್ನು ನಾವೀಗ ಕಾಣುತ್ತಿದ್ದೇವೆ.

ಇದಕ್ಕೆ ನಮ್ಮ ರಾಜಕಾರಣಿಗಳ ಕೊಡುಗೆಯೂ ಇದೆ. ಗೋಪಾಲಕೃಷ್ಣ ಅಡಿಗರು ಹೇಳುವಂತೆ ರಾಜಕೀಯ ಪ್ರಚಾರವನ್ನು ಎರಡು ರೀತಿ ಮಾಡಬಹುದು. ಜನರಲ್ಲಿ ವಿಚಾರಶಕ್ತಿ ಕುದುರುವಂತೆ ಬುದ್ಧಿಯ ಮಟ್ಟದಲ್ಲಿ ಸಾಧಕ-ಬಾಧಕಗಳನ್ನು ಸ್ಪಷ್ಟಗೊಳಿಸಿ ಜನಶಿಕ್ಷಣ ರೀತಿಯಲ್ಲಿ ಮಾಡುವ ಪ್ರಚಾರ ಒಂದು ಬಗೆ; ಜನರಲ್ಲಿ ದ್ವೇಷ, ಅಸೂಯೆ, ಪ್ರತೀಕಾರದ ಆಕಾಂಕ್ಷೆ ಮುಂತಾದ ಭಾವನೆಗಳನ್ನು ಉದ್ರೇಕಿಸಿ, ಅವರಲ್ಲಿರುವ ವಿಚಾರಶಕ್ತಿಗೆ ಮಂಕುಬೂದಿಯೆರಚಿ ವಿವೇಕವನ್ನು ಕುರುಡುಗೊಳಿಸಿ ಗೊಂದಲವೆಬ್ಬಿಸಿ ಹಿಂಸೆಯನ್ನು ಪ್ರಚೋದಿಸುವ, ಭಿನ್ನಮತವನ್ನು ಮೆಟ್ಟಿ ಹೊಸಕುವೆನೆಂಬ ಉನ್ಮಾದವನ್ನು ಕೆರಳಿಸುವ ಪ್ರಚಾರ ವೈಖರಿ ಇನ್ನೊಂದು. ಮೊದಲನೆಯದು ಕಷ್ಟವಾದದ್ದು, ಹೆಚ್ಚು ಕಾಲ ತೆಗೆದುಕೊಳ್ಳುವಂಥದು. ಆದರೆ ಅದೇ ನಿಜವಾದ ಅಭ್ಯುದಯಕ್ಕೆ ದಾರಿ. ಎರಡನೆಯ ಮಾರ್ಗ ಸುಲಭವಾದದ್ದು- ಜನಮನದಲ್ಲಿ ಆಗಲೇ ಇರುವ ಅಸಹನೆ, ಪೂರ್ವಗ್ರಹ, ಹಿಂಸಾವೃತ್ತಿ ಇವುಗಳನ್ನು ಉದ್ರೇಕಿಸುವುದು. ಮೊದಲನೆಯದು ಮನಸ್ಸನ್ನು ತಿದ್ದುವ ಕೆಲಸ, ಅರಳಿಸುವ ಬಗೆ. ಎರಡನೆಯದು ಮನಸ್ಸನ್ನು ಕೆರಳಿಸಿ ಹಾದಿ ತಪ್ಪಿಸಿ ಅಪರಾಧಗಳಿಗೆ ಅವಕಾಶ ಮಾಡಿಕೊಡುವ ಕೆಲಸ. ಇತಿಹಾಸದುದ್ದಕ್ಕೂ ಯಾವುದೇ ಪ್ರಭುತ್ವ ಅನುಸರಿಸಿಕೊಂಡು ಬಂದ ಮಾರ್ಗ ನಿಸ್ಸಂದೇಹವಾಗಿ ಎರಡನೆಯದೇ. ಈಗಲೂ ಅದು ಮುಂದುವರಿಯುತ್ತಿದೆ. ಇದರ ಪರಿಣಾಮ ಅನೇಕ ಜೀವಗಳ ಬಲಿ.

ಭಿನ್ನದನಿಯ ದಮನ: ಮನುಷ್ಯ ಸಮಾಜದ ಇತಿಹಾಸವನ್ನು ಗಮನಿಸಿದಾಗ ಎಲ್ಲ ಕಾಲದಲ್ಲೂ, ಎಲ್ಲ ದೇಶಗಳಲ್ಲೂ ಸಂಪ್ರದಾಯಸಿದ್ಧವಾದ ಬಹುಮತಕ್ಕೆ ವಿರುದ್ಧವಾಗಿ ತನ್ನ ಸ್ವಂತ ಅಭಿಪ್ರಾಯವನ್ನು ಪ್ರತಿಪಾದಿಸಿದವರನ್ನು ಪೀಡಿಸಿ, ದೇಶಭ್ರಷ್ಟರಾಗುವಂತೆ ಮಾಡಿದ ಅನೇಕ ನಿದರ್ಶನಗಳು ಸಿಗುತ್ತವೆ. ಸಾಹಿತ್ಯ, ವಿಜ್ಞಾನ, ತತ್ತ್ವಶಾಸ್ತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಈ ಬಗೆಯ ಭಿನ್ನದನಿಯ ದಮನ ನಡೆಯುತ್ತಲೇ ಬಂದಿದೆ. ನಮ್ಮ ಕಾಲದ ಈ ಸಮಾಜದಲ್ಲಿ ಇದು ಇನ್ನೂ ಅತಿರೇಕಕ್ಕೆ ಹೋಗಿ ಗುಂಡಿಟ್ಟು ಕೊಲ್ಲುವ ಹಂತ ತಲುಪಿದೆ. ಇದು ಒಂದಿಬ್ಬರು ದುಷ್ಟರ ಕೃತ್ಯ ಮಾತ್ರವಲ್ಲ, ಇಡೀ ಸಮಾಜವೇ ಹಿಂಸಾರಭಸಮತಿಯಾಗುತ್ತಿದೆಯೇ?

ಕೆಲ ದಿನಗಳ ಹಿಂದೆ ನಡೆದ ಒಂದು ಪ್ರಸಂಗ ನೆನಪಾಗುತ್ತಿದೆ- ನನ್ನ ಗೆಳೆಯರ ಮಗನಿಗೆ ಇಬ್ಬರು ಮಕ್ಕಳು. ಒಬ್ಬನಿಗೆ ಹತ್ತು ವರ್ಷ, ಮತ್ತೊಬ್ಬನಿಗೆ ಏಳು ವರ್ಷ. ದೊಡ್ಡವನದು ಮೃದು ಸ್ವಭಾವ, ಅಪ್ಪ-ಅಮ್ಮ ಹೇಳಿದ ಹಾಗೆ ಕೇಳುತ್ತಾನೆ, ತರಗತಿಯಲ್ಲೂ ಅಧ್ಯಾಪಕರಿಗೆ ಅಚ್ಚುಮೆಚ್ಚು, ಚೆನ್ನಾಗಿ ಓದುತ್ತಾನೆ. ಕೊಂಚ ಸಂಕೋಚದ ಹೆದರಿಕೆಯ ಪ್ರಕೃತಿ. ಚಿಕ್ಕವನಾದರೋ ಅಸಾಧ್ಯ ತುಂಟ. ಹೇಳಿದ ಮಾತು ಕೇಳುವವನಲ್ಲ, ಓದಿನಲ್ಲೂ ಹಿಂದು, ತರಗತಿಯಲ್ಲಿ ಸಹಪಾಠಿಗಳೊಡನೆ ಸದಾ ಜಗಳ, ಯಾವಾಗಲೂ ಅಧ್ಯಾಪಕರಿಂದ ದೂರು. ಒಂದು ದಿನ ಹೀಗಾಯಿತು. ಅಣ್ಣನೊಂದಿಗೆ ಜಗಳವಾಗಿ ತಮ್ಮ ಅವನಿಗೆ ಚೆನ್ನಾಗಿ ಹೊಡೆದಿದ್ದಾನೆ. ಅಮ್ಮ ಬಿಡಿಸಲು ಹೋದಾಗ ಅವರಿಗೂ ಹೊಡೆದು ಕಾಲಿನಿಂದ ಒದ್ದಿದ್ದಾನೆ. ತಂದೆಗೆ ದೂರು ಹೋಯಿತು. ಕ್ಷಮೆ ಕೇಳಲು ತಂದೆ ಹೇಳಿದ್ದಾರೆ. ಆತ ಕೇಳಿಲ್ಲ, ಸುಮ್ಮನಿದ್ದಾನೆ. ಕೋಪಗೊಂಡ ತಂದೆ ಅವನನ್ನು ಮನೆಯಿಂದ ಆಚೆ ಕೂರಿಸಿ ‘ಕ್ಷಮೆ ಕೇಳುವವರೆಗೆ ಒಳಗೆ ಸೇರಿಸುವುದಿಲ್ಲ’ ಎಂದಿದ್ದಾರೆ. ಸಂಜೆಯಾಯಿತು. ಕತ್ತಲಾಯಿತು. ಹೊರಗಿರುವ ಹುಡುಗ ಕ್ಷಮೆ ಕೇಳಲಿಲ್ಲ. ಗಂಟೆ ಒಂಭತ್ತಾಯಿತು. ಆತ ಕ್ಷಮೆ ಕೇಳಲಿಲ್ಲ. ಇವರು ಊಟವನ್ನೂ ಮಾಡದೆ ಆ ಪುಟ್ಟ ಹುಡುಗನಿಗಾಗಿ ಒಳಗೆ ಕಾದಿದ್ದಾರೆ. ಆತ ಕ್ಷಮೆ ಕೇಳುವ ಯಾವ ಸೂಚನೆಯೂ ಇಲ್ಲ. ಎಷ್ಟು ಹೊತ್ತು ಕಾಯಲು ಸಾಧ್ಯ? ಆ ಪುಟ್ಟ ಹುಡುಗನನ್ನು ರಾತ್ರಿಯೆಲ್ಲ ಮನೆಯಿಂದಾಚೆ ಬಿಡಲು ಸಾಧ್ಯವೇ? ಕಡೆಗೆ ಸೋತ ತಂದೆ ತಮ್ಮ ಸೋಲನ್ನು ಒಪ್ಪಿಕೊಳ್ಳದೆ ‘ನಾಳೆ ಕ್ಷಮೆ ಕೇಳು, ಬಾ’ ಎಂದು ಒಳಗೆ ಕರೆದಿದ್ದಾರೆ.

ಮಾರನೆಯ ದಿನ ಈ ಪ್ರಸಂಗವನ್ನು ಹೇಳುತ್ತಾ ನನ್ನ ಗೆಳೆಯರು ‘ಚಿಕ್ಕವನು ಈ ಜಗತ್ತಿನಲ್ಲಿ ಹೇಗೋ ಬದುಕುತ್ತಾನೆ. ಅವನ ಬಗ್ಗೆ ನಮಗೆ ಆತಂಕವಿಲ್ಲ. ಆದರೆ ಪಾಪ! ಆ ದೊಡ್ಡ ಹುಡುಗ ಈ ದುಷ್ಟ ಜಗತ್ತಿನಲ್ಲಿ ಬದುಕಲು ಸಾಧ್ಯವೇ‘ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ನನಗೆ ಆಶ್ಚರ್ಯವಾಯಿತು. ಚಿಕ್ಕವನನ್ನು ಅವರು ದೂರುತ್ತಾರೆಂದುಕೊಂಡಿದ್ದೆ. ಬದಲಾಗಿ ಆತನ ಬಗ್ಗೆ ಅವರಿಗೆ ಮೆಚ್ಚುಗೆಯಿತ್ತು. ಸಜ್ಜನನಾದ ಒಳ್ಳೆಯ ಹುಡುಗನ ಬಗ್ಗೆ ಅವರಿಗೆ ಆತಂಕವಿತ್ತು. ನೀತಿಯೇನು? ಕೆಟ್ಟವರಾದರೆ ಈ ಜಗತ್ತಿನಲ್ಲಿ ಬದುಕಬಹುದು. ಒಳ್ಳೆಯವರಾದರೆ ಬದುಕುವುದು ಕಷ್ಟ. ಇದು ನಮ್ಮ ಸಾಮಾಜಿಕ ಸಂದರ್ಭ. ಯಾಕೆ ಹೀಗೆ? ಕಾರಣ ಸರಳ. ಒಳ್ಳೆಯತನ ಇಂದು ದೌರ್ಬಲ್ಯವೆನ್ನಿಸಿದೆ.

ಮಾಸ್ತಿ ಇದನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ- ತಾಮಸ ಶಕ್ತಿ ವಿಜೃಂಭಿಸಲು ಕಾರಣ ಸಾತ್ವಿಕ ಶಕ್ತಿಯ ನಿಷ್ಕ್ರಿ›ಯತೆ. ತಾಮಸ ಶಕ್ತಿಯನ್ನು ಎದುರಿಸಲು ಸಾತ್ವಿಕ ಶಕ್ತಿಯನ್ನು ಕ್ರಿಯಾಶೀಲಗೊಳಿಸಬೇಕು. ಆಗ ಮಾತ್ರ ತಾಮಸ ದುರ್ಬಲವಾಗಬಹುದು. ಬದುಕಿನಲ್ಲಿ ಕೆಟ್ಟದ್ದು ಇಲ್ಲವೆಂದಲ್ಲ, ಇದೆ. ಅದು ಆಕರ್ಷಕವೂ ಹೌದು. ಕೆಟ್ಟದ್ದರ ಅರಿವಿದ್ದೂ ಒಳ್ಳೆಯತನವನ್ನು ನಾವು ಎತ್ತಿಹಿಡಿಯಲು ಸಾಧ್ಯವಾಗಬೇಕು. ಅತ್ಯುತ್ತಮವಾದುದನ್ನು ನಾವು ಪ್ರಯತ್ನಪೂರ್ವಕವಾಗಿಯಾದರೂ ಉಳಿಸಿಕೊಳ್ಳಬೇಕು. ಈ ಬಗೆಯ ಸಾಮಾಜಿಕ ಎಚ್ಚರವನ್ನು ನಾವು ಸಮಾಜದಲ್ಲಿ ಮೂಡಿಸದಿದ್ದರೆ ಎಂತೆಂಥವೋ ಏರಬಾರದ ಕಡೆಗೆ ಏರಿ, ಕೆಡಿಸಿ ಹೊಲಸೆಬ್ಬಿಸುತ್ತವೆ. ಈ ನೈತಿಕಪ್ರಜ್ಞೆ ಮಾತ್ರ ನಮ್ಮ ಸಮಾಜವನ್ನು ಆರೋಗ್ಯವಾಗಿಡಬಲ್ಲುದು.

ಕುರುಡು ವಿಶ್ವಾಸವೇ ಬಂಡವಾಳ: ಎಲ್ಲಿ ಪ್ರಜೆಯು ಮೂಕನಾಗಿರುತ್ತಾನೋ, ವಿಚಾರಹೀನನಾಗಿರುತ್ತಾನೋ ಅಲ್ಲಿ ದೈವತ್ವಸಿದ್ಧಿ ಬಹು ಸುಲಭ. ಅಜ್ಞಾನದ ಲಾಭವೆಲ್ಲ ಭಕ್ತಿಯ ರೂಪದಲ್ಲಿ ಇಂತಹ ಗೊಂಬೆದೇವರುಗಳಿಗೆ ದೊರಕುತ್ತದೆ. ರಾಜಕೀಯ ಇಂದು ಹಾಗಾಗಿದೆ. ಕುರುಡು ವಿಶ್ವಾಸ, ಕುರುಡು ನಂಬಿಕೆಗಳನ್ನು ಬಂಡವಾಳವಾಗಿಸಿಕೊಂಡು ಈ ವ್ಯವಹಾರ ಬೆಳೆಯುತ್ತಿದೆ. ಮೂರ್ತಿಪೂಜೆಯ ಪ್ರವೃತ್ತಿಯನ್ನು ರಾಜಕೀಯ ಲಾಭ ಬಯಸುವವರು ತಡೆಯುವುದಿಲ್ಲ, ಬದಲಾಗಿ ಪೋಷಿಸುತ್ತಾರೆ. ಇಂತಹ ಕುರುಡುನಿಷ್ಠೆಯೇ ಹಿಂಸೆಗೆ ಅವಕಾಶ ಮಾಡಿಕೊಡುತ್ತಿರುವುದು. ವಿವೇಕವಿಲ್ಲದ ಅಂಧಾಭಿಮಾನ ಹಿಂಸೆಗಿಂತ ಅಪಾಯಕಾರಿ.

ಸ್ವಾತಂತ್ರಾ್ಯನಂತರದಲ್ಲಿ ನಮ್ಮ ದೇಶದಲ್ಲಿ ರಾಜಕೀಯ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಪ್ರಾಮುಖ್ಯ ಪಡೆಯಿತು. ವಿಜ್ಞಾನ, ಸಾಹಿತ್ಯ, ಕೃಷಿ, ಕೈಗಾರಿಕೆ ಇವೆಲ್ಲವುಗಳಿಗಿಂತ ರಾಜಕೀಯ ಮುಖ್ಯವಾಗಿಬಿಟ್ಟಿತು. ಅದಕ್ಕೆ ನಾವು ವಿಶೇಷ ಪ್ರಾಮುಖ್ಯ ನೀಡಿದೆವು. ನಮ್ಮ ಸಮೂಹ ಮಾಧ್ಯಮಗಳೂ ಇದಕ್ಕೆ ಕಾರಣ. ಹೀಗಾಗಿ ಸಮಾಜದ ಸಮತೋಲನ ತಪ್ಪಿದೆ. ನಮ್ಮ ಸಮಾಜ ವಿಕೃತವಾಗಿ ಬೆಳೆಯುತ್ತಿದೆ. ಯಾವ ಯೋಗ್ಯತೆಯೂ ಇಲ್ಲದವರು ಪ್ರತಿಷ್ಠೆ, ಅಧಿಕಾರ, ಸಂಪತ್ತು ಎಲ್ಲವನ್ನೂ ರಾಜಕೀಯದಿಂದ ಪಡೆಯಬಹುದು ಎಂಬ ವಾತಾವರಣ ನಿರ್ವಣವಾಗಿದೆ. ನಾಲ್ಕು ಜನರನ್ನು ಹಿಂದೆ ಕಟ್ಟಿಕೊಳ್ಳಬಲ್ಲ ಯಾವನೂ ಇಂದು ಧುರೀಣನಾಗಿಬಿಡಬಹುದು. ಇಂತಹವರಿಂದಲೇ ಪ್ರಜಾಪ್ರಭುತ್ವದ ಮೌಲ್ಯಗಳು ನಾಶವಾಗುತ್ತಿರುವುದು. ಪರಿಣಾಮ, ಭೂಗತ ಜಗತ್ತಿನಂತೆ ರಾಜಕೀಯವೂ ಹಿಂಸೆಯ ಮೂಲಕ ವಿಚಾರವನ್ನು, ಎಚ್ಚರದ ಪ್ರಜ್ಞೆಯನ್ನು ಎದುರಿಸಲು ಪ್ರಯತ್ನಿಸುತ್ತಿದೆ. ಹೀಗಾಗಿಯೇ ಅಹಿಂಸೆಯ ನಾಡಿನಲ್ಲಿ ಇಂದು ಹಿಂಸೆ ತಾಂಡವವಾಡುತ್ತಿದೆ.

ಎಲ್ಲ ಕಾಲದಲ್ಲೂ ಇಂತಹ ರಾಕ್ಷಸೀ ಪ್ರವೃತ್ತಿಯಿದ್ದರೂ ನಮ್ಮ ಕಾಲದಲ್ಲಿ ಅದು ಹೊರರೂಪದಲ್ಲಿ ಗೋಚರಿಸುವುದಿಲ್ಲ. ಅತ್ಯಂತ ಸುಸಂಸ್ಕೃತ ವೇಷದಲ್ಲಿ ನಮ್ಮ ನಡುವೆಯೇ ಸುಳಿಯುತ್ತ ಕಾಮರೂಪಿಯಂತೆ ಅಗತ್ಯಕ್ಕೆ ತಕ್ಕ ವೇಷ ಧರಿಸಿ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿರುತ್ತದೆ. ಇದನ್ನು ಎದುರಿಸುವ ಸೂಕ್ಷ್ಮತೆಯನ್ನು, ನೈತಿಕ ಸ್ಥೈರ್ಯವನ್ನು ಸಮಾಜ ಪಡೆಯದಿದ್ದರೆ ಅಭ್ಯುದಯ ಸಾಧ್ಯವಿಲ್ಲ. ಅದಕ್ಕಿರುವ ಏಕೈಕ ಮಾರ್ಗವೆಂದರೆ ಜನಜಾಗೃತಿ. ಪ್ರಜ್ಞಾವಂತ ಮನಸ್ಸುಗಳು ಈ ದಿಕ್ಕಿನಲ್ಲಿ ಕೆಲಸ ಮಾಡುವುದು ಇಂದು ಅತಿ ಜರೂರಿನ ಅಗತ್ಯ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ಸೃಜನಶೀಲ ಮನಸ್ಸುಗಳು ಈ ರಾಕ್ಷಸೀ ಪ್ರವೃತ್ತಿಯನ್ನು ಎದುರಿಸಲು ಒಗ್ಗೂಡಬೇಕಿದೆ.

ನೈತಿಕ ಅರಾಜಕತೆ ತಾಂಡವವಾಡುವ ವಾತಾವರಣದಲ್ಲಿ ಪಶುಬಲಕ್ಕೆ ಪ್ರಾಧಾನ್ಯ ಸಹಜವಾಗಿಯೇ ದೊರಕುತ್ತದೆ. ಇಂತಹ ಸನ್ನಿವೇಶದಲ್ಲಿ ಮೃತ್ಯುವಿನ ಕರಾಳಛಾಯೆ ಸಮಾಜದ ಅಂತರಂಗವನ್ನು ಆವರಿಸಿ ಮಂಕಾಗಿಸುವ ಮುನ್ನ ಜನಮಾನಸವನ್ನು ಜಾಗೃತಗೊಳಿಸಿ ಚಲನಶೀಲಗೊಳಿಸುವುದು ಪ್ರಜ್ಞಾವಂತರೆಲ್ಲರ ಮೊದಲ ಕರ್ತವ್ಯವಾಗಿದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top