ಕಸಮುಕ್ತವಾಗಿ ಕಂಗೊಳಿಸಲಿದೆ ಚಿತ್ತಾಕುಲಾ

ವಿಜಯವಾಣಿ ವಿಶೇಷ ಕಾರವಾರ

ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ತಾಲೂಕಿನ ಚಿತ್ತಾಕುಲಾದ ಕಸದ ಸಮಸ್ಯೆಗೆ ಪರಿಹಾರ ದೊರಕುವ ದಿನ ಬಂದಿದೆ. ಸ್ವಚ್ಛ ಭಾರತ ಮಿಷನ್ ಅಡಿ ಗ್ರಾಪಂ ಪಕ್ಕವೇ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಅ. 2ಕ್ಕೆ ಉದ್ಘಾಟನೆಯಾಗಲಿದೆ. ನಂತರ ನಗರದಂತೆ ಅಲ್ಲೂ ಮನೆ, ಮನೆ ಕಸ ಸಂಗ್ರಹ ಪ್ರಾರಂಭವಾಗಲಿದೆ. ಇದು ತಾಲೂಕಿನ ಮೊದಲ ಗ್ರಾಪಂ ತ್ಯಾಜ್ಯ ವಿಲೇವಾರಿ ಘಟಕವಾಗಿದೆ.

ಗ್ರಾಮದ ಮೀನು ಮಾರುಟ್ಟೆಯ ಪಕ್ಕ ನಿರ್ವಣವಾಗಿ ಬಳಕೆಯಾಗದೇ ಬಿದ್ದಿದ್ದ ಮಟನ್ ಮಾರುಕಟ್ಟೆಯನ್ನು ಪರಿವರ್ತನೆ ಮಾಡಿ, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯ ವಿಂಗಡಿಸಿ ಅದನ್ನು ಸಂಸ್ಕರಿಸಲು ಯೋಜಿಸಲಾಗಿದೆ. ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್, ಗ್ಲಾಸ್ ಮುಂತಾದ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಮಾರಾಟ ಮಾಡಲು ಯೋಜಿಸಲಾಗಿದೆ. ಕಾಮಗಾರಿಗಾಗಿ 20 ಲಕ್ಷ ಅನುದಾನ ಮಂಜೂರಾಗಿದ್ದು, ಘಟಕ ನಿರ್ವಣ, ವಾಹನ ಖರೀದಿ, ಸಾಮಗ್ರಿ ಖರೀದಿ ಸೇರಿ 13.50 ಲಕ್ಷ ರೂ. ಕ್ರಿಯಾ ಯೊಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿದೆ. ಮನೆ, ಮನೆ ಕಸ ಸಂಗ್ರಹಕ್ಕೆ ಸಿಬ್ಬಂದಿ ನೇಮಕ, ಆಟೋ ರಿಕ್ಷಾ ಖರೀದಿಯ ಕಾರ್ಯವಾಗಬೇಕಿದೆ.

ಚಿತ್ತಾಕುಲಾ ಒಂದು ಗ್ರಾಪಂ ಆಗಿದ್ದರೂ ಇದು ಪಟ್ಟಣದಂತೆಯೇ ಇದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಾರ್ಟ್​ವೆುಂಟ್ ಇರುವ ಗ್ರಾಮೀಣ ಪ್ರದೇಶ ಇದಾಗಿದೆ. 2011ರ ಜನಗಣತಿಯಂತೆ 1,41,188 ಜನಸಂಖ್ಯೆ ಇದ್ದು, 965 ಕುಟುಂಬಗಳಿವೆ. 10 ಅಪಾರ್ಟ್​ವೆುಂಟ್​ಗಳು, ಐದು ಸಮುದಾಯ ಭವನಗಳು, 117 ಅಂಗಡಿಗಳು, 10 ಹೋಟೆಲ್​ಗಳು, 5 ಬೇಕರಿ, 8 ಸಲೂನ್​ಗಳಿವೆ. ಪ್ರತಿ ದಿನ 2.6 ಟನ್ ಹಸಿ ಕಸ ಹಾಗೂ 1.7 ಟನ್ ಒಣ ಕಸ ಸೇರಿ 4.3 ರಿಂದ 4.5 ಟನ್ ಕಸ ಉತ್ಪತ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತಿತ್ತು. ಕೆಲವು ಕಡೆಗಳಲ್ಲಿ ಗ್ರಾಪಂ ಕಸವನ್ನು ಗುಡ್ಡೆ ಹಾಕಿ ಇಟ್ಟಿತ್ತು. ದನಕರುಗಳು ಅವುಗಳನ್ನು ತಿಂದು ಸಾಯುತ್ತಿದ್ದವು. ಇದು ಸಾರ್ವಜನಿಕರ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಎಲ್ಲ ಮನೆಗಳಿಗೆ ಹಸಿ ಮತ್ತು ಒಣ ಕಸ ಸಂಗ್ರಹಿಸಲು 3.5 ಲಕ್ಷ ರೂ. ವೆಚ್ಚದಲ್ಲಿ ಎರಡು ಪ್ರತ್ಯೇಕ ಟಬ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಮನೆಯಿಂದ 30 ರೂ. ಮಾಸಿಕ ಶುಲ್ಕ ಆಕರಿಸಲು ಯೋಜಿಸಲಾಗಿದೆ. ಒಟ್ಟಾರೆ ತ್ಯಾಜ್ಯ ವಿಲೇವಾರಿಗೆ ಗ್ರಾಪಂಗೆ ತಿಂಗಳಿಗೆ 33 ಸಾವಿರ ರೂ. ಖರ್ಚಾಗಲಿದೆ. ಎಲ್ಲ ಸಮರ್ಪಕವಾಗಿ ಜಾರಿಯಾದರೆ, ಇದರಿಂದ 1.42 ಲಕ್ಷ ರೂ. ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಗ್ರಾಮವೂ ಸ್ವಚ್ಛವಾಗುತ್ತದೆ. ಆದಾಯವೂ ಬರಲಿದೆ.

ಜಿಲ್ಲೆಯಲ್ಲಿ 6 ಘಟಕಗಳು: ಸ್ವಚ್ಛ ಭಾರತ ಮಿಷನ್ ಅಡಿ ಎಲ್ಲ ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಯೋಜಿಸಲಾಗಿದೆ. ಮೊದಲ ಹಂತದಲ್ಲಿ 59 ಗ್ರಾಪಂಗಳನ್ನು ಗುರುತಿಸಿ ಅಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ. ಗೋಕರ್ಣ ಗ್ರಾಪಂನಲ್ಲಿ ತ್ಯಾಜ್ಯ ವಿಲೇವಾರಿ ಯೋಜನೆ ಯಶಸ್ವಿಯಾಗಿ ಕಾರ್ಯನಿರ್ವಹಣೆ ನಡೆದಿದೆ. ಅದರ ಆಧಾರದ ಮೇಲೆ ಜಿಲ್ಲೆಯ ಒಟ್ಟು 6 ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ವ್ಯವಸ್ಥೆ ಜಾರಿ ಮಾಡಲಾಗಿದೆ. ಜಿಲ್ಲೆಯ 4 ಕಡೆ ತ್ಯಾಜ್ಯ ವಿಲೇವಾರಿ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಇನ್ನೂ 8 ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ.

ನಮ್ಮದು ದೊಡ್ಡ ಗ್ರಾಪಂ. ಉತ್ಪಾದನೆಯಾಗುವ ತ್ಯಾಜ್ಯ ಎಲ್ಲಿ ಹಾಕುವುದು ಎಂದು ತಿಳಿಯದೇ ತೊಂದರೆಯಾಗಿತ್ತು. ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ಘಟಕದಲ್ಲಿ ವಿಲೇವಾರಿಗೆ ಅವಕಾಶ ನೀಡುತ್ತಿರಲಿಲ್ಲ. ಗ್ರಾಪಂನಲ್ಲಿ ನಾಲ್ಕು ಕಡೆ ಸ್ಥಳ ಗುರುತಿಸಿದರೂ ಅದಕ್ಕೆ ವಿರೋಧ ವ್ಯಕ್ತವಾಗಿ ಘಟಕ ನಿರ್ಮಾಣ ಸಾಧ್ಯವಾಗಿರಲಿಲ್ಲ. ಗೋಕರ್ಣಕ್ಕೆ ಹೋಗಿ ವ್ಯವಸ್ಥೆ ನೋಡಿಕೊಂಡು ಬಂದಿದ್ದೇವೆ. ಈಗ ನಮ್ಮಲ್ಲಿ ಘಟಕ ನಿರ್ವಣವಾಗುತ್ತಿದ್ದು, ಸ್ವಚ್ಛ ಗ್ರಾಪಂ ಆಗಿ ರೂಪಿಸಲಿದ್ದೇವೆ. ಜನರು ಎಲ್ಲೆಂದರಲ್ಲಿ ಕಸ ಎಸೆಯುವ ಬದಲು ಮನೆಗೆ ಬರುವ ಸಿಬ್ಬಂದಿಗೆ ನೀಡಿ ಸಹಕರಿಸಬೇಕು. | ರಾಜು ತಾಂಡೇಲ ಚಿತ್ತಾಕುಲಾ ಗ್ರಾಪಂ ಅಧ್ಯಕ್ಷ

ಜಿಪಂ ಸಿಇಒ ಎಂ.ರೋಶನ್ ಅವರ ಮಾರ್ಗದರ್ಶನದಂತೆ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಪ್ರಾರಂಭಿಸಿದ್ದೇವೆ. ಸಿಬ್ಬಂದಿ ನೇಮಕ, ಕಸ ಸಂಗ್ರಹಣಾ ವಾಹನ ಖರೀದಿಯಾಗಬೇಕಿದೆ. ಮೊದಲು ಗ್ರಾಮದ ಮುಖ್ಯ ಪ್ರದೇಶಗಳಲ್ಲಿ ಕಸ ಸಂಗ್ರಹಿಸಲಾಗುವುದು. ನಂತರ ಇಡೀ ಗ್ರಾಪಂಗೆ ವಿಸ್ತರಿಸಲಾಗುವುದು. | ರಾಜೇಶ ನಾಯ್ಕ ಚಿತ್ತಾಕುಲಾ ಗ್ರಾಪಂ ಪಿಡಿಒ

Leave a Reply

Your email address will not be published. Required fields are marked *