ಕಸದ ದುರ್ನಾತಕ್ಕೆ ಹಳ್ಳಿ ಜನ ಹೈರಾಣ

ರಾಜಧಾನಿಯ ಕಸದ ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ಬಾಧಿಸುತ್ತಿದೆ. ನಗರದ ಕಸ ವಿಲೇವಾರಿಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಪ್ರದೇಶ ಆಯ್ಕೆ ಮಾಡಿ

ಕೊಂಡಿರುವ ಬಿಬಿಎಂಪಿ, ಕಸವನ್ನು ವೈಜ್ಞಾನಿಕವಾಗಿ ಸಾಗಿಸುವಲ್ಲಿ ವಿಫಲವಾಗಿರುವ ಪರಿಣಾಮ ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳ ಜನ ಕಸದ ದುರ್ನಾತಕ್ಕೆ ಹೈರಾಣಾಗಿದ್ದಾರೆ.

ನಿತ್ಯ ರಾಜಧಾನಿಯಿಂದ ಕಸದ ಲಾರಿಗಳು ತ್ಯಾಮಗೊಂಡ್ಲು ಹೋಬಳಿ ಮುದ್ದಲಿಂಗನಹಳ್ಳಿ ಮಾರ್ಗ ವಾಗಿ ದೊಡ್ಡಬೆಳವಂಗಲ ಹೋಬಳಿಯ ಮೂಗಿನಹಳ್ಳಿ ಕ್ರಾಸ್ ಭಾಗಕ್ಕೆ ಸಾಗುತ್ತವೆ. ಹೀಗೆ ಸಾಗುವ ವೇಳೆ ಲಾರಿಗಳಿಂದ ಕಸ ಹಾಗೂ ಲಿಚೆಟ್ (ಕಸದ ನೀರು) ಚೆಲ್ಲುತ್ತಿದ್ದು, ಗ್ರಾಮೀಣ ಪರಿಸರ ನಾರುತ್ತಿದೆ.

ರೈಲ್ವೇ ಗೇಟ್ ಸಂಕಟ: ದಾಬಸ್​ಪೇಟೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುದ್ದಲಿಂಗನಹಳ್ಳಿ ಗ್ರಾಮದಲ್ಲಿನ ರೈಲ್ವೆ ಕ್ರಾಸಿಂಗ್​ನಿಂದಾಗಿ ಈ ಭಾಗದಲ್ಲಿ ಸಂಚರಿಸುವ ಬಿಬಿಎಂಪಿ ಕಸ ಸಾಗಣೆ ವಾಹನಗಳು ನಿಲುಗಡೆಯಾಗುತ್ತವೆ. ಲಾರಿಗಳಿಂದ ಹೊರ ಹೊಮ್ಮುವ ಕಸದ ಗಬ್ಬುವಾಸನೆಗೆ ಸ್ಥಳೀಯರು ಕಂಗಾಲಾಗುವಂತಾಗಿದೆ. ಅಲ್ಲದೆ ಸಾಲುಗಟ್ಟಿ ನಿಲ್ಲುವ ಕಸದ ಲಾರಿಗಳಿಂದ ಇತರ ವಾಹನಗಳ ಸಂಚಾರಕ್ಕೂ ತೊಡಕಾಗಿದೆ. ಲಾರಿಯಿಂದ ಕಸದ ಹೊಲಸು ನೀರು ಸೋರಿಕೆಯಾಗಿ ದುರ್ನಾತ ತಡೆದುಕೊಳ್ಳಲಾಗದೆ ಇತರೆ ವಾಹನ ಸವಾರರು ಲಾರಿಯಿಂದ ಬಹುದೂರ ನಿಲ್ಲಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ. ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮಾರ್ಗದ ರೈಲು ಸಂಚರಿಸುವುದರಿಂದ ಪ್ರತಿನಿತ್ಯ ಸುಮಾರು 20 ಬಾರಿಯಾದರೂ ರೈಲ್ವೇ ಗೇಟ್ ಹಾಕಲಾಗುತ್ತದೆ. ಈ ವೇಳೆ ಬಂದು ನಿಲ್ಲುವ ಲಾರಿಗಳಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ.

ಕಸ ಸುರಿದು ಪರಾರಿ

ಬಿಬಿಎಂಪಿ ಕಸದ ಲಾರಿಗಳು ಹಲವು ಬಾರಿ ಕಸವನ್ನು ರಸ್ತೆ ಬದಿ ಸುರಿದು ಪರಾರಿಯಾಗಿರುವ ನಿದರ್ಶನ ಇವೆ. ಕೆಲ ತಿಂಗಳ ಹಿಂದೆ ರಸ್ತೆ ಬದಿ ಕಸಸುರಿದ ಪರಿಣಾಮ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಲಾರಿ ಚಾಲಕರು ರಸ್ತೆ ಇಕ್ಕೆಲಗಳಲ್ಲಿ ಕಸ ಸುರಿದು ಪರಾರಿಯಾಗುವುದು ಈಗಲೂ ಮುಂದುವರಿದಿದೆ ಎಂದು ಸ್ಥಳೀಯರು ಹೇಳುತ್ತಾರೆ.

|ಶಿವರಾಜ ಎಂ./ಟಿ.ಎಸ್.ಲಕ್ಷ್ಮಿಕಾಂತ್ ಬೆಂಗಳೂರು

Leave a Reply

Your email address will not be published. Required fields are marked *