ಆರ್.ಕೃಷ್ಣ ಮೈಸೂರು
ಮೀಸಲು ಅರಣ್ಯ ಪ್ರದೇಶವಾಗಿರುವ ಚಾಮುಂಡಿಬೆಟ್ಟ ಈಗ ಕಸದ ಗುಡ್ಡೆಯಾಗಿ ಮಾರ್ಪಡುತ್ತಿದೆ.
ನಾಡ ಅದಿದೇವತೆ ಚಾಮುಂಡೇಶ್ವರಿ ನೆಲೆಸಿದ್ದರೂ ಧಾರ್ಮಿಕ ಕೇಂದ್ರ ಎನ್ನುವ ಭಾವನೆಯೂ ಇಲ್ಲದಂತೆ ಎಲ್ಲೆಂದರಲ್ಲಿ ಕಸದ ರಾಶಿಯನ್ನೇ ಹಾಕಲಾಗುತ್ತಿದ್ದು, ಚಾಮುಂಡಿಬೆಟ್ಟವೂ ಇನ್ನೊಂದು ‘ಸುಯೇಜ್ ಫಾರ್ಮ್’ ಎನ್ನುವಂತೆ ನೋಡುಗರಿಗೆ ಭಾಸವಾಗುತ್ತಿದೆ.
ರಾಜ್ಯ ಅಲ್ಲದೇ ಹೊರ ರಾಜ್ಯ, ದೇಶಗಳಿಂದಲೂ ದೇವರ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ಬೆಟ್ಟಕ್ಕೆ ಬರುತ್ತಿದ್ದು, ಅವರು ತಿನ್ನುವ ತಿಂಡಿ ಪೊಟ್ಟಣ, ಬಿಸ್ಕತ್ ಕವರ್‌ಗಳು, ನೀರು, ಜ್ಯೂಸ್ ಬಾಟಲಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದು, ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ.
ಭಕ್ತರು, ಪ್ರವಾಸಿಗರಿಂದ ರಸ್ತೆಯ ಇಕ್ಕೆಲಗಳಲ್ಲಿ ಕಸ ಸೃಷ್ಟಿಯಾಗುವುದು ಒಂದೆಡೆಯಾದರೆ, ಸ್ಥಳೀಯರು ತಂದು ಸುರಿಯುತ್ತಿರುವ ಕಸದ ರಾಶಿ ಕಣ್ಣಿಗೆ ರಾಚುವಂತಿದೆ. ಬೆಟ್ಟದ ಸುತ್ತಲೂ ವ್ಯಾಪಾರಸ್ಥರು, ತಳ್ಳುಗಾಡಿಗಳು, ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯ ತಂದು ಸುರಿಯುತ್ತಿರುವುದು ದೇವಸ್ಥಾನದ ಪಾವಿತ್ರೃವಲ್ಲದೆ, ಪರಿಸರವನ್ನೂ ನಾಶ ಮಾಡಿದೆ.
ನಂಜನಗೂಡು ರಸ್ತೆಯಿಂದ ಎಪಿಎಂಸಿ ಹಿಂಭಾಗ ಉತ್ತನಹಳ್ಳಿಗೆ ತೆರಳುವ ಮಾರ್ಗ ಈಗ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ಬೆಟ್ಟದ ತಪ್ಪಲು ಕಸ ಸುರಿಯುವ ಯಾರ್ಡ್ ಆಗಿದೆ. ಚಾಮುಂಡೇಶ್ವರಿ ದರ್ಶನದ ಬಳಿಕ ಸಾಕಷ್ಟು ಜನರು ಉತ್ತನಹಳ್ಳಿ ತ್ರಿಪುರಸುಂದರಿ ಅಮ್ಮನ ದರ್ಶನಕ್ಕಾಗಿ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಆದರೂ ರಸ್ತೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಪರಿವೆ ಇಲ್ಲದಂತೆ ಜನರು ವರ್ತಿಸುತ್ತಿದ್ದಾರೆ.
ಕಸದ ಗುಡ್ಡೆಯಾದ ತಪ್ಪಲು:
ಚಾಮುಂಡಿಬೆಟ್ಟವನ್ನು ಮೀಸಲು ಅರಣ್ಯ ಎಂದು ಘೋಷಿಸಿದ್ದರೂ ಅದನ್ನು ಪಾಲನೆ ಮಾಡಲು ಆಗದಂತಹ ಸ್ಥಿತಿ ಉಂಟಾಗಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಮುಳ್ಳಿನ ತಂತಿಬೇಲಿ ಅಳವಡಿಸಲಾಗಿದೆ. ಆದರೆ ಜನರು ತಂತಿಬೇಲಿ ಹಾಕಿರುವ ಹೊರಗೆ ಕಸ ತಂದು ಸುರಿಯುತ್ತಿದ್ದಾರೆ.
ಮನೆಯ ಕಸ, ಟನ್‌ಗಟ್ಟಲೆ ಪ್ಲಾಸ್ಟಿಕ್ ಕವರ್, ಸತ್ತವರ ಹಾಸಿಗೆ ಬಟ್ಟೆಗಳು, ಸತ್ತ ನಾಯಿ, ದನ, ಕುದುರೆ ಸೇರಿದಂತೆ ಇತರ ಪ್ರಾಣಿಗಳ ಕೊಳೆತ ದೇಹ, ಅಲ್ಲದೇ ಸುತ್ತಮುತ್ತ ಇರುವ ಮಾಂಸದ ಅಂಗಡಿಗಳಲ್ಲಿ ಬರುವ ತ್ಯಾಜ್ಯ ಇಲ್ಲಿ ಹಾಕುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಅಲ್ಲದೇ ಸಮೀಪವೇ ಇರುವ ಎಪಿಎಂಸಿ ಯಾರ್ಡ್‌ನಲ್ಲಿ ಕೊಳೆತ ಈರುಳ್ಳಿ, ತರಕಾರಿ, ಹೂ, ಹಣ್ಣಿನ ಪದಾರ್ಥಗಳನ್ನು ಸಹ ಸುರಿಯಲಾಗುತ್ತಿದೆ. ಕಸದ ರಾಶಿ ಒಂದೆಡೆಯಾದರೆ ಮೋಜು-ಮಸ್ತಿ ತಾಣವೂ ಆಗುತ್ತಿದೆ. ಕಸದ ರಾಶಿಯ ಮಧ್ಯೆ ಮದ್ಯದ ಬಾಟಲಿಗಳ ರಾಶಿ ರಾಶಿಯೇ ಇಲ್ಲಿ ಹಾಕಲಾಗಿದೆ.
ಬೇಸಿಗೆ ಕಾಲದಲ್ಲಿ ಕಸಕ್ಕೆ ಬೆಂಕಿ ಬೀಳುವುದು ನಡೆಯುತ್ತಿದೆ. ಇನ್ನು ಮಳೆಗಾಲದಲ್ಲಿ ಕಸ ಕೊಚ್ಚಿಕೊಂಡು ರಸ್ತೆಗೆ ಬರುವುದಲ್ಲದೆ, ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಉಂಟಾಗಲಿದೆ.
ಪ್ಲಾಸ್ಟಿಕ್ ನಿಷೇಧಕ್ಕೂ ಬೆಲೆ ಇಲ್ಲ
ದೇಶದಲ್ಲಿಯೇ ಸ್ವಚ್ಛ ನಗರ ಎಂದು ಎರಡು ಬಾರಿ ಪ್ರಶಸ್ತಿ ಪಡೆದಿರುವ ಮೈಸೂರಿನಲ್ಲಿ ಇಂತಹ ದುಸ್ಥಿತಿ ಒಂದೆಡೆಯಾದರೆ, ಪ್ಲಾಸ್ಟಿಕ್ ನಿಷೇಧ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಬೆಟ್ಟದ ಸುತ್ತಲ ಪ್ರದೇಶ ಪ್ಲಾಸ್ಟಿಕ್‌ಮಯವಾಗಿರುವುದು ದುರಂತವಾಗಿದೆ. ಕಣ್ಣಿಗೆ ರಾಚುವಂತೆ ಕೆರೆ-ಕಟ್ಟೆ, ತಗ್ಗು ಪ್ರದೇಶಗಳಲ್ಲಿ ಪ್ಲಾಸ್ಟಿಕ್ ರಾಶಿಯೇ ತುಂಬಿ ತುಳುಕ್ಕುತ್ತಿವೆ.
ಚಾಮುಂಡಿಬೆಟ್ಟದ ಮೇಲೆ ಪ್ಲಾಸ್ಟಿಕ್ ನಿಷೇಧ ಅಭಿಯಾನವನ್ನು ಆಗಾಗ್ಗೆ ಮಾಡುತ್ತಿದ್ದರೂ ಉತ್ತನಹಳ್ಳಿ ಮಾರ್ಗ ಸೇರಿದಂತೆ ಬೆಟ್ಟದ ತಪ್ಪಲಿನಲ್ಲಿರುವ ಪ್ಲಾಸ್ಟಿಕ್, ಕಸದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಹೊಸಹುಂಡಿ, ಉತ್ತನಹಳ್ಳಿ, ದೇವಲಾಪುರ ಸೇರಿದಂತೆ ಇತರ ಗ್ರಾಮಗಳಿಗೆ ಇದೇ ಮಾರ್ಗದಲ್ಲಿ ಜನರು ತೆರಳುತ್ತಾರೆ. ಆದರೆ ಕಸದ ರಾಶಿಯಲ್ಲಿ ನಾಯಿಗಳ ಹಿಂಡೇ ಸೇರುವುದರಿಂದ ಯಾವ ಸಮಯದಲ್ಲಿ ಮೇಲೆರಗಲಿವೆ ಎಂಬ ಭಯದಲ್ಲಿ ಸಾರ್ವಜನಿಕರು ತಿರುಗಾಡುವಂತಾಗಿದೆ. ರಾತ್ರಿಯ ವೇಳೆ ಸರಿಯಾದ ವಿದ್ಯುತ್ ದೀಪ ಇಲ್ಲದಿರುವುದರಿಂದ ನಡೆದು ಹೋಗುವವರು, ದ್ವಿಚಕ್ರ ಸವಾರರು ಕಷ್ಟದಲ್ಲಿಯೇ ತೆರಳಬೇಕಿದೆ.
ಆದ್ದರಿಂದ ಸಂಬಂಧಪಟ್ಟವರು ಕಸದ ರಾಶಿ ತೆರವುಗೊಳಿಸಿ, ಮತ್ತೆ ಕಸ ಹಾಕದಂತೆ ತಂತಿಬೇಲಿ ಹಾಕಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆ ಸಾರ್ವಜನಿಕರದಾಗಿದೆ.
ಯಾರಿಗೆ ಸೇರಿದ್ದು ಎನ್ನುವ ಜಿಜ್ಞಾಸೆ
ಚಾಮುಂಡಿಬೆಟ್ಟದ ತಪ್ಪಲು ಯಾರಿಗೆ ಸೇರಿದ್ದು ಎನ್ನುವ ಜಿಜ್ಞಾಸೆ ಶುರುವಾಗಿದೆ. ನಗರಪಾಲಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೆ, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿಯವರು ಅದು ನಮಗೆ ಸೇರಿಲ್ಲ ಎನ್ನುವ ಉತ್ತರ ಹೇಳುತ್ತಾರೆ. ನೂತನವಾಗಿ ರಚನೆಗೊಂಡಿರುವ ಕಡಕೊಳ ಪಟ್ಟಣ ಪಂಚಾಯಿತಿಯೂ ನಮ್ಮ ಪರಿದಿ ಅಲ್ಲ ಎನ್ನುತ್ತದೆ. ಹೀಗಾಗಿ, ಈ ಜಾಗ ಯಾರಿಗೆ ಸೇರಿದ್ದು ಎನ್ನುವುದೇ ಜಿಜ್ಞಾಸೆಯಾಗಿದೆ.
ಬೆಟ್ಟದ ಶಿಖರದಲ್ಲಿಯೂ ಕಸ
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮಾತ್ರವಲ್ಲ, ಬೆಟ್ಟದ ಶಿಖರದಲ್ಲಿಯೂ ಕಸದ ರಾಶಿಯೇ ಇದೆ. ವಾಹನಗಳಲ್ಲಿ ತೆರಳುವವರು ರಸ್ತೆಯ ಇಕ್ಕೆಲದಲ್ಲಿ ಬಿಸಾಡಿದರೆ, ಮೆಟ್ಟಲುಗಳ ಮೂಲಕ ತೆರಳುವವರು ಅರಣ್ಯ ಪ್ರದೇಶದ ಒಳಗೆ ಕಸ ಬಿಸಾಡುತ್ತಿದ್ದಾರೆ. ಬೆಟ್ಟದ ಮೆಟ್ಟಿಲು ಹತ್ತುವವರು ಹೆಚ್ಚಾಗಿದ್ದು, ಕೆಲವರಿಗೆ ಇದು ಒಂದು ರೀತಿ ಮೋಜಾಗಿ ಬಿಟ್ಟಿದೆ. ತಿಂಡಿ, ನೀರು, ಜ್ಯೂಸ್ ಬಾಟಲಿಗಳನ್ನು ಜತೆಯಲ್ಲಿ ಕೊಂಡೊಯ್ದು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಮೆಟ್ಟಿಲು ಮೂಲಕ ತೆರಳುವಾಗ ಮೈಸೂರು ವ್ಯೆವ್ ಪಾಯಿಂಟ್‌ನಲ್ಲಿ ಬಾಟಲಿ, ತಿಂಡಿ ತಿಂದ ಪೊಟ್ಟಣಗಳ ರಾಶಿಯೇ ಬಿದ್ದಿದ್ದು, ಪರಿಸರ ಹಾಳು ಮಾಡಲಾಗುತ್ತಿದೆ.
ಕೋಟ್
ಮೈಸೂರು ನಗರವನ್ನು ಸ್ವಚ್ಛವಾಗಿ ಇಡಬೇಕಾಗಿರುವುದು ಎಲ್ಲರ ಕರ್ತವ್ಯ. ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಸ ಹಾಕದಂತೆ ಅರಣ್ಯ ಇಲಾಖೆ, ಪೊಲೀಸರು, ಪಾಲಿಕೆ, ಸ್ಥಳೀಯ ಆಡಳಿತದೊಂದಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು.
ಶಿವಕುಮಾರ್ ಮೇಯರ್
ಸಮನ್ವಯ ತಂಡ ರಚಿಸಬೇಕಿದೆ
ಬೆಟ್ಟದ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಜತೆಗೂಡಿ ಆಗಾಗ್ಗೆ ಸ್ವಚ್ಛತಾ ಅಭಿಯಾನ ನಡೆಸಿ ರಾಶಿಗಟ್ಟಲೆ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತಿದೆ. ಆದರೂ ಪದೇ ಪದೆ ಕಸ ಸುರಿಯುತ್ತಿದ್ದು, ಜನರಲ್ಲಿ ಜಾಗೃತಿ ಆಗುತ್ತಿಲ್ಲ. ಆದ್ದರಿಂದ ಬೆಟ್ಟಕ್ಕೆ ಹೋಗುವಾಗ ಊಟಿ ಮಾದರಿ ಪ್ಲಾಸ್ಟಿಕ್ ತಪಾಸಣೆ ಮಾಡಬೇಕಿದೆ. ಆದರೆ ಸಿಬ್ಬಂದಿ ಕೊರತೆ ಇರುವುದರಿಂದ ಪೊಲೀಸರು, ಹೋಂಗಾರ್ಡ್, ಟ್ರಾಫಿಕ್ ವಾರ್ಡನ್‌ಗಳ ಸಹಾಯ ಪಡೆದು ತಪಾಸಣೆ ನಡೆಸಲು ಹಿರಿಯ ಅಧಿಕಾರಿಗಳನ್ನು ಕೋರಲಾಗಿದೆ.
ಎಂ.ಆರ್.ಧನುಶ್ರೀ, ವಲಯ ಅರಣ್ಯಾಧಿಕಾರಿ