ಕಸಕ್ಕೆ ಬೆಂಕಿ, ಹೆಚ್ಚುತ್ತಿರುವ ಮಾಲಿನ್ಯ

ಧಾರವಾಡ: ನಗರದ ಹೊಸಯಲ್ಲಾಪುರ ಬಳಿಯ ಸ್ಮಶಾನ ಹಿಂಭಾಗದಲ್ಲಿ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಗ್ರಹಕ್ಕೆ ಬೆಂಕಿ ಹಚ್ಚುವುದನ್ನು ತಡೆಯುವಲ್ಲಿ ವಿಫಲವಾಗಿರುವ ಪಾಲಿಕೆ ವಿರುದ್ಧ ಇಲ್ಲಿನ ಲಕ್ಷ್ಮೀನಗರ ನಿವಾಸಿಗಳು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಹು-ಧಾ ರಸ್ತೆಯ ಸುವರ್ಣ ಪೆಟ್ರೋಲ್ ಬಂಕ್ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಕಸಕ್ಕೆ ಬೆಂಕಿ ಹಚ್ಚಬೇಡಿ ಎಂದು ಮಹಾನಗರ ಪಾಲಿಕೆ ಹೇಳುತ್ತಿದೆ. ಆದರೆ ಸಿಬ್ಬಂದಿ ನಿತ್ಯ ಹಚ್ಚುವ ಬೆಂಕಿಯಿಂದ ಹೊರ ಸೂಸುವ ಹೊಗೆಯಿಂದ ಸುತ್ತಲಿನ ಜನರು ಕ್ಯಾನ್ಸರ್, ಕೆಮ್ಮು, ಟಿಬಿ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲಿತ್ತಿದ್ದಾರೆ ಎಂದು ದೂರಿದರು.
ಈ ವಿಷಯವಾಗಿ ಲಕ್ಷ್ಮೀನಗರ, ವಿವೇಕಾನಂದನಗರ, ಜನ್ನತನಗರ, ದಾನೇಶ್ವರಿನಗರ ಸೇರಿ ಸುತ್ತಲಿನ ಪ್ರದೇಶದ ನಾಗರಿಕರು ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರು ಅರ್ಧ ಗಂಟೆ ಕಾಲ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ಮನವಿ ಮಾಡಿದರೂ ಕೇಳದ ಪ್ರತಿಭಟನಾಕಾರರು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡಿದರೆ ಮಾತ್ರ ಹಿಂಪಡೆಯುವುದಾಗಿ ಪಟ್ಟು ಹಿಡಿದಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು, ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಭಟನಾಕಾರರು, 15 ದಿನಗಳಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ಹು-ಧಾ ಮಹಾನಗರ ಪಾಲಿಕೆ ಕಚೇರಿ ಹಾಗೂ ಜಿಲ್ಲಾಡಳಿತದ ಕಚೇರಿ ಆವರಣದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಲಕ್ಷ್ಮೀನಗರ ನಾಗರಿಕ ಹಿತರಕ್ಷಕ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಬಸವರಾಜ ಲಿಂಗದಾಳ, ಸ್ಯಾಮಸನ್ ಕರುಣಾಕರ, ರವಿ ಕುಬ್ಯಾಳ, ಪ್ರಶಾಂತ ರಾಯ್ಕರ, ಅರುಣ ಅಂಗಡಿ, ಬಿ.ವೈ ಪೂಜಾರ, ಲಕ್ಷ್ಮೀ ಪಾಟೀಲ, ಅನ್ನಪೂರ್ಣ ತಾಳಿಕೋಟಿ, ಅನಸೂಯಾ ಪೂಜಾರ, ಬಿ.ಎಸ್. ಲಿಂಗದಾಳ, ಮುತ್ತು ಹಿರೇಮಠ, ನಿಂಗರಡ್ಡಿ ಗೂಳರಡ್ಡಿ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳು ಪಾಲ್ಗೊಂಡಿದ್ದರು.