ಸಿದ್ದಾಪುರ: ಕೃಷಿಕರು ಉಪ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಇಂದಿನ ದಿನದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಕಷ್ಟ ಎನ್ನುವುದಿದೆ. ಕಷ್ಟವನ್ನು ಎದುರಿಸಿ ಸಾಧನೆ ಮಾಡುವ ಬದ್ಧತೆಯನ್ನು ತೋರಿಸಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಅಣಲೇಬೈಲ್ ಗ್ರಾಪಂನಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಕಾಳುಮೆಣಸು ವಿಚಾರಗೋಷ್ಠಿ, ತೋಟಗಾರಿಕೆ ಯಂತ್ರ ಮೇಳ ಹಾಗೂ ಅಣಲೇಬೈಲ್ ಗ್ರಾ.ಪಂ. ಸೋಲಾರ್ ವಿದ್ಯುದ್ದೀಕರಣ ಮತ್ತು ವ್ಯಾಪಾರ ಮಳಿಗೆ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
ಕೃಷಿಯಲ್ಲಿ ಯಾಂತ್ರಿಕರಣ ಬಳಕೆ ಆಗುತ್ತಿರುವುದರಿಂದ ಇತ್ತೀಚಿನ ದಿನದಲ್ಲಿ ಯುವಕರು ಕೃಷಿಯಲ್ಲಿ ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಪೇಟೆ, ಪಟ್ಟಣ ಪರಿಸರಕ್ಕಿಂತ ಗ್ರಾಮೀಣ ಪ್ರದೇಶದ ಪರಿಸರ ಉತ್ತಮ ಎಂದರು.
ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ. ಅಧ್ಯಕ್ಷ ಸುಧೀರ ಬಿ. ಗೌಡರ್, ಜಿಪಂ ಸದಸ್ಯ ಎಂ.ಜಿ. ಹೆಗಡೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯ ರಘುಪತಿ ಹೆಗಡೆ, ಎಪಿಎಂಸಿ ಸದಸ್ಯ ಜಿ.ಎಂ. ಹೆಗಡೆ, ತಾಪಂ ಇಒ ಪ್ರಶಾಂತ ರಾವ್, ಸಹಾಯಕ ಕೃಷಿ ನಿರ್ದೇಶಕ ದೇವರಾಜ ಆರ್. ಇತರರಿದ್ದರು. ಇದೇ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ 12 ಕೃಷಿಕರನ್ನು ಸನ್ಮಾನಿಸಲಾಯಿತು. ಯಂತ್ರಮೇಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿವಿಧ ಮಳಿಗೆಗಳು ಹಾಗೂ ವಿವಿಧ ತಳಿಯ ಕಾಳುಮೆಣಸಿನ ಬಳ್ಳಿಯ ಪ್ರದರ್ಶನ ನಡೆಯಿತು.
ಪಿಡಿಒ ಸುಬ್ರಹ್ಮಣ್ಯ ಹೆಗಡೆ, ಪ್ರಶಾಂತ ಜಿ.ಎಸ್, ಮಹಾಬಲೇಶ್ವರ ಬಿ.ಎಸ್, ಸಾತ್ವಿಕ್ ಹೆಗಡೆ, ಎಸ್.ಆರ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ವಿಚಾರಗೋಷ್ಠಿ: ಅಡಕೆಯಲ್ಲಿ ಕಾಳುಮೆಣಸಿನ ನಿಖರ ಬೇಸಾಯದ ಕುರಿತು ಡಾ.ಎಂ.ಎನ್. ವೇಣುಗೋಪಾಲ, ಕಾಳು ಮೆಣಸಿನ ತಳಿ ಕುರಿತು ಡಾ. ಶಿವಕುಮಾರ ಹಾಗೂ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಕುರಿತು ಡಾ. ಕೆ.ವಿ. ಸಾಜಿ ಅವರು ವಿಚಾರಗೋಷ್ಠಿ ಮಂಡಿಸಿದರು.