ಕಷ್ಟಪಟ್ಟು ಓದಿದರೆ ಭವಿಷ್ಯ ಉಜ್ವಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರಷ್ಟೇ ಪಾಲಕರದ್ದೂ ಪಾತ್ರ ಇರುತ್ತದೆ. ಇಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹಿರಿಯ ವೈದ್ಯ ಡಾ.ಪಿ.ಎಸ್. ಶಂಕರ ಹೇಳಿದರು.

ನಗರದ ಗೆಟ್ಸ್ ವಿಜ್ಞಾನ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಇಂದು ಶಾಲೆ ಯಲ್ಲಿ ಏನು ಪಾಠ ಮಾಡಿದರು ಎಂದು ಪ್ರತಿದಿನ ಪಾಲಕರು ಕೇಳಿದರೆ ಸಾಕು, ಮಕ್ಕಳಲ್ಲಿ ಒಂಥರ ಭಯ ಇರುತ್ತದೆ. ಈ ಭಯದಿಂದ ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯುವುದಿಲ್ಲ ಎಂದರು.

ಇಂದು ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಓದದೆ ಪಾಸಾಗಬೇಕು ಎಂಬ ಭಾವನೆ ಬೆಳೆಯುತ್ತಿರುವುದು ಅಡ್ಡದಾರಿಗೆ ಕಾರಣವಾಗುತ್ತಿದೆ. ಕಷ್ಟಪಟ್ಟು ಓದಿ ಪಾಸಾದರೆ ಉತ್ತಮ ಭವಿಷ್ಯ ರೂಪುಗೊಳುತ್ತದೆ. ಇಂಜಿನಿಯರ್, ಡಾಕ್ಟರ್ ಕೋರ್ಸ್​ ಹೊರತುಪಡಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಉತ್ತಮ ಅವಕಾಶಗಳಿವೆ ಎಂದು ತಿಳಿಹೇಳಿದರು.

ಇಂದು ರಾಜ್ಯದಲ್ಲಿ ಪ್ರತಿವರ್ಷ 50 ಸಾವಿರ ವಿದ್ಯಾರ್ಥಿಗಳು ಇಂಜಿನಿಯರ್ ಪದವಿ ಪೂರೈಸಿ ಹೊರಬರುತ್ತಿದಾತರೆ. ಅದರಲ್ಲಿ ಕೇವಲ 5000 ಜನರಿಗೆ ಮಾತ್ರ ನೌಕರಿ ಸಿಗುತ್ತಿದೆೆ. ಉಳಿದವರು ಕೆಲಸಕ್ಕಾಗಿ ಪರದಾಡುತ್ತಿದಾರೆ. ಆದರೂ ಪಾಲಕರಲ್ಲಿ ತಮ್ಮ ಮಕ್ಕಳಿಗೆ ಇಂಜಿನಿಯರ್ ಕೋರ್ಸ್​ ಮಾಡಿಸಬೇಕು ಎಂಬ ಭಾವನೆ ದೂರಾಗಿಲ್ಲ. ಪಾಲಕರ ಮನಸ್ಥಿತಿ ಬದಲಾದಾಗಲೇ ಮಕ್ಕಳ ಭವಿಷ್ಯವೂ ಬದಲಾವಣೆಯತ್ತ ಸಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಚಾರ್ಯ ಬಿ.ಎಸ್. ಮಾಕಲ್ ಪ್ರಾಸ್ತಾವಿಕ ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ರಾಜಾ, ಪ್ರೊ.ಬಿ.ಕೆ. ಚಳಗೇರಿ, ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ, ಪಾಲಕರಾದ ಮಾಣಿಕ ಜಾಧವ್ ಇತರರಿದ್ದರು.

ಇಂಜಿನಿಯರ್, ಮೆಡಿಕಲ್ ಅಷ್ಟೇ ಜೀವನವಲ್ಲ. ಮೂಲ ವಿಜ್ಞಾನಕ್ಕೆ ಇಂದು ಹೆಚ್ಚು ಬೇಡಿಕೆ ಇದೆ. ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಚಿತ್ತ ಹರಿಸಬೇಕು. ಜೇಬ್ ಮೇ ದುಶ್ಮನ್ ಕೋ ದೂರ್ ಕರಿಯೆ (ಮೊಬೈಲ್ ದೂರ ಇಡಿ). ಓದುವ ಸಮಯದಲ್ಲಿ ಮೊಬೈಲ್ ಬಳಕೆ ಸರಿಯಲ್ಲ.
| ಡಾ.ಎ.ರಾಜಾ ವಿಶ್ರಾಂತ ಕುಲಪತಿ

ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಈ ಮೂಲಕ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಲಾಗುವುದು. ಕಾಲೇಜಿನ ಬಗ್ಗೆ ಅನಿಸಿಕೆ ವ್ಯಕ್ತಪಡಿಸುವ ಉದ್ದೇಶದಿಂದ ಪಾಲಕರ ಸಭೆ ಕರೆಯಲಾಗಿದೆ.
| ಬಿ.ಎಸ್.ಮಾಕಲ್ ಪ್ರಾಚಾರ್ಯ