ಕಷ್ಟದ ನಡುವೆಯೂ ಪ್ರಜ್ವಲಿಸಿದ ಪ್ರತಿಭೆ

| ಸಂತೋಷ್ ನಾಯ್ಕ್

ಬೆಂಗಳೂರು: ಕೇವಲ ನಾಲ್ಕು ವರ್ಷದ ಹಿಂದಷ್ಟೇ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಲ್ಲಿ ಟೇಕ್ವಾಂಡೋ ಕ್ರೀಡೆ ಆರಿಸಿಕೊಂಡ 19 ವರ್ಷದ ಪ್ರಜ್ವಲ್ ಭೂಪಾಲ್ ಇಂದು ಭರವಸೆಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಕರಾಟೆಯಲ್ಲೂ ಮಿಂಚುತ್ತಿರುವ ಪ್ರಜ್ವಲ್, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ಓದುತ್ತಿದ್ದು, ಅದರ ನಡುವೆಯೇ ಇದೇ 26ರಂದು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಏಷ್ಯನ್ ಕರಾಟೆ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಈ ವರ್ಷ ಚೀನಾದಲ್ಲಿ ನಡೆದ ಕರಾಟೆ ಟೂರ್ನಿಯಲ್ಲಿ 2 ಚಿನ್ನ ಹಾಗೂ 2 ಬೆಳ್ಳಿ ಗೆದ್ದಿದ್ದಾರೆ. ಟೇಕ್ವಾಂಡೋದಲ್ಲಿ 74 ಕೆಜಿಗಿಂತ ಕೆಳಗಿನ ವಿಭಾಗದಲ್ಲಿ ಸ್ಪರ್ಧಿಸುವ ಪ್ರಜ್ವಲ್, ಕೆಲ ವರ್ಷಗಳ ಮಟ್ಟಿಗೆ ಕರಾಟೆ ಹಾಗೂ ಟೇಕ್ವಾಂಡೋ ಎರಡರಲ್ಲೂ ಮುಂದುವರಿಯುವ ಅಭಿಲಾಷೆ ಹೊಂದಿದ್ದಾರೆ.

ಟೇಕ್ವಾಂಡೋ ಸೆಳೆತ: ಕರಾಟೆ ಹಾಗೂ ಟೇಕ್ವಾಂಡೋ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎನ್ನುವ ಪ್ರಜ್ವಲ್, ಟೇಕ್ವಾಂಡೋ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದನ್ನು ಹೇಳುವುದು ಹೀಗೆ.. ‘ಮೊದಲಿನಿಂದಲೂ ಕರಾಟೆ ಅಭ್ಯಾಸ ಮಾಡುತ್ತಿದ್ದೆ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ಪಿಯು ಬೋರ್ಡ್ ನಡೆಸಿದ ತಾಲೂಕು ಮಟ್ಟದ ಕರಾಟೆ ಚಾಂಪಿಯನ್ಷಿಪ್ನಲ್ಲಿ ಗೆಲುವು ಸಾಧಿಸಿದೆ. ಇದನ್ನು ಟೇಕ್ವಾಂಡೋ ಕೋಚ್ಗಳು ಗಮನಿಸಿದ್ದರು. ಟೇಕ್ವಾಂಡೋ ಒಲಿಂಪಿಕ್ಸ್ ಕ್ರೀಡೆ ಆಗಿರುವ ಕಾರಣ ಅದರಲ್ಲಿ ಯಾಕೆ ಮುಂದುವರಿಯಬಾರದು ಎಂದು ಕೋಚ್ಗಳಾದ ರಾಜೇಶ್ ಮಹ್ತಿ ಹಾಗೂ ಕೃಷ್ಣಮೂರ್ತಿ ಕೇಳಿದರು. ಅವರ ಮಾತಿನಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ಪದಕ ಗೆದ್ದೆ’… ರಾಜ್ಯ ಟೇಕ್ವಾಂಡೋ ಅಸೋಸಿಯೇಷನ್ ಸಹಾಯವನ್ನೂ ಪ್ರಜ್ವಲ್ ನೆನಪಿಸಿಕೊಳ್ಳುತ್ತಾರೆ. ಟಿವಿ ರಿಪೇರಿ ಕೆಲಸದಿಂದ ಬಂದ ಹಣದಲ್ಲಿ ಸಂಸಾರ ಸಾಗಿಸುವ ತಂದೆ ಭೂಪಾಲ್. ತಾಯಿ ವೆಂಕಟಲಕ್ಷ್ಮೀ ಗೃಹಿಣಿ. ಆರ್.ಟಿ. ನಗರದ ಮನೋರಾಯನಪಾಳ್ಯದಲ್ಲಿ ವಾಸವಿರುವ ಪ್ರಜ್ವಲ್, ಸರ್ಕಾರ ಹಾಗೂ ಖಾಸಗಿ ಕಂಪನಿಗಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿರುವುದಾಗಿ ಹೇಳುತ್ತಾರೆ.

ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆ ಕನಸು

ಭಾರತವನ್ನು ಮುಂದಿನ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಬೇಕು ಎನ್ನುವ ಆಸೆ ಪ್ರಜ್ವಲ್ ಕಣ್ಣಲ್ಲಿದೆ. ಆ ಕಾರಣಕ್ಕಾಗಿಯೇ ಕರಾಟೆಯೊಂದಿಗೆ ಟೇಕ್ವಾಂಡೋವನ್ನು ಕಲಿಯಲು ಆರಂಭಿಸಿದ್ದ ಪ್ರಜ್ವಲ್ಗೆ ಇನ್ನೊಂದು ಖುಷಿಯ ಸಂಗತಿ ಇದೆ. 2020ರ ಟೋಕಿಯೋ ಒಲಿಂಪಿಕ್ಸ್ಗೆ ಕರಾಟೆ ಕೂಡ ಸೇರ್ಪಡೆಗೊಂಡಿದೆ. ಟೇಕ್ವಾಂಡೋ ಅಥವಾ ಕರಾಟೆ ಯಾವುದಾದರೂ ಒಂದು ಕ್ರೀಡೆಯಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆಯಬೇಕು ಎನ್ನುವುದು ಸದ್ಯದ ಗುರಿ. ಅದಕ್ಕಾಗಿ ಕಠಿಣ ಶ್ರಮವನ್ನೂ ವಹಿಸುತ್ತಿದ್ದೇನೆ ಎನ್ನುತ್ತಾರೆ.

ಚೀನಾದಲ್ಲಿ ಒಂದು ತಿಂಗಳು ತರಬೇತಿ

ಟೇಕ್ವಾಂಡೋವನ್ನು ವೃತ್ತಿಪರವಾಗಿ ತೆಗೆದುಕೊಳ್ಳುವ ಉದ್ದೇಶದಿಂದ ಚೀನಾದಲ್ಲಿ ಒಂದು ತಿಂಗಳು ತರಬೇತಿಯನ್ನೂ ಪಡೆದಿದ್ದಾರೆ. ಒಲಿಂಪಿಕ್ ಅಥ್ಲೀಟ್ಗಳಿಗೆ ತರಬೇತಿ ನೀಡುವ ಜೆನ್ ಯಂಗ್ ಶಯ್ ಟೇಕ್ವಾಂಡೋ ಆಟದ ಸೂಕ್ಮ್ಷಪಟ್ಟುಗಳನ್ನು ಕಲಿಸಿಕೊಟ್ಟರು ಎಂದು ಪ್ರಜ್ವಲ್ ಹೇಳುತ್ತಾರೆ.

Leave a Reply

Your email address will not be published. Required fields are marked *