ಕವಿ, ಸಾಹಿತಿ ಜಯಂತ ಕಾಯ್ಕಿಣಿಗೆ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ

ಗೋಕರ್ಣ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅವರು ಈ ವರ್ಷದ ‘ರ್ಕ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಮುಂಬೈನ ಹವ್ಯಕ ವೆಲ್​ಫೇರ್ ಟ್ರಸ್ಟ್ ವತಿಯಿಂದ ಫೆ. 17ರಂದು ಬೆಳಗ್ಗೆ 10 ಗಂಟೆಗೆ ಮುಂಬೈನ ಘಾಟ್​ಕೋಪರ್(ಪ)ದಲ್ಲಿರುವ ಹವ್ಯಕರ ಸಭಾಗೃಹದಲ್ಲಿ ಆಯೋಜಿತವಾದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಖ್ಯಾತ ಕ್ಯಾನ್ಸರ್ ತಜ್ಞ ಡಾ. ನಾಗರಾಜ ಹುಯಿಲಗೋಳ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮುಂಬೈನ ಜನಪ್ರಿಯ ದೈನಿಕ ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಮತ್ತು ಉಪ ಸಂಪಾದಕ ಶ್ರೀನಿವಾಸ ಜೋಕಟ್ಟೆ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಹವ್ಯಕ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಭಾಗವತ ವಹಿಸುವರು.

ಜೀವನ ಭಾಗ್ಯ: ಪ್ರಶಸ್ತಿ ಕುರಿತು ಮಾತನಾಡಿದ ಜಯಂತ ಕಾಯ್ಕಿಣಿ, ‘ಕನ್ನಡದ ಪ್ರಾತಃ ಸ್ಮರಣೀಯರಲ್ಲಿ ಅತ್ಯಂತ ಪ್ರಮುಖರಾದ ಸೂರಿ ವೆಂಕಟರಮಣ ಶಾಸ್ತ್ರಿ ಅವರ ಸ್ಮರಣೆಯ ಈ ಪ್ರಶಸ್ತಿಯನ್ನು ಪಡೆಯುತ್ತಿರುವುದು ನನ್ನ ಜೀವನ ಭಾಗ್ಯವಾಗಿದೆ. ಇದರ ಜೊತೆಗೆ ನನ್ನ ಆರಂಭಿಕ ಕರ್ಮ ಭೂಮಿ ಮುಂಬೈನಲ್ಲಿ ಇದು ನಡೆಯುತ್ತಿರುವುದು ಪುಳಕವನ್ನು ಇಮ್ಮಡಿಗೊಳಿಸಿದೆ’ ಎಂದಿದ್ದಾರೆ.

ಪ್ರಶಸ್ತಿ ಪರಿಚಯ: ಹವ್ಯಕ ವೆಲ್​ಫೇರ್ ಟ್ರಸ್ಟ್ 2006ರಿಂದ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ರ್ಕ ವೆಂಕಟರಮಣ ಶಾಸ್ತ್ರಿ ಸೂರಿ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಸೂರಿ ವೆಂಕಟರಮಣ ಶಾಸ್ತ್ರಿ ಅವರು ಮುಂಬೈನಲ್ಲಿ ನೆಲೆ ನಿಂತು ಅನುಪಮವಾದ ಕನ್ನಡ ಸೇವೆ ಗೈದವರಾಗಿದ್ದಾರೆ. 1885ರಲ್ಲಿ ಮುಂಬೈನಲ್ಲಿ ಭಾರತೀಯ ಛಾಪಖಾನೆಯನ್ನು ಪ್ರಾರಂಭಿಸಿದ ಇವರು ಹವ್ಯಕ ಸುಬೋಧ ಪತ್ರಿಕೆಯನ್ನು ಸ್ಥಾಪಿಸಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇದನ್ನು ಅರ್ಪಣೆ ಮಾಡಿದ್ದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಇವರ ಪ್ರೆಸ್ ಮುಟ್ಟುಗೋಲು ಹಾಕಿ ಹಲವು ಬಾರಿ ಸೆರೆಮನೆ ವಾಸಕ್ಕೆ ತಳ್ಳಿತ್ತು. 1887ರಲ್ಲಿ ಕನ್ನಡದ ಪ್ರಪ್ರಥಮ ಸಾಮಾಜಿಕ ನಾಟಕ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ವನ್ನು ಹವ್ಯಕ ಆಡು ನುಡಿಯಲ್ಲಿ ಬರೆದ ಕೀರ್ತಿ ಸೂರಿ ಶಾಸ್ತ್ರಿಯವರದಾಗಿದೆ. ಒಟ್ಟು 37 ಗ್ರಂಥಗಳನ್ನು ಅವರು ಕನ್ನಡಕ್ಕೆ ಕೊಡಮಾಡಿದ್ದಾರೆ.