ಧಾರವಾಡ:ಸಂಶೋಧನಾ ಲೇಖನ ಕೃತಿಚೌರ್ಯ, ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿಗೆ ಕಿರುಕುಳ ಸೇರಿ ಇತರ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ. ಕಲ್ಲಪ್ಪ ಹೊಸಮನಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ತಿಳಿಸಿದರು.
ಕವಿವಿ ಅತಿಥಿ ಗೃಹದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿವಿಧ ಆರೋಪಗಳಡಿ ಪ್ರೊ. ಹೊಸಮನಿ ಅವರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆದೇಶದನ್ವಯ ಫೆ. 1ರಂದು ಕುಲಸಚಿವ ಹುದ್ದೆಯಿಂದ ಕೆಳಗಿಳಿಯಬೇಕಾಗಿತ್ತು. ಅಂದಿನಿಂದ ಕವಿವಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಸರ್ಕಾರದ ಆದೇಶದಂತೆ ಮೂವರು ಸದಸ್ಯರಿಂದ ಇಲಾಖಾ ವಿಚಾರಣೆ ನಡೆದಿತ್ತು. ವಿಚಾರಣೆಯಲ್ಲಿ ಸಂಶೋಧನಾ ವಿದ್ಯಾ ರ್ಥಿನಿಗೆ ಕಿರುಕುಳ, ಸಂಶೋಧನಾ ಲೇಖನ ಕೃತಿಚೌರ್ಯ, ವಿಶ್ವವಿದ್ಯಾಲಯದ ವಿವಿಧ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ, ಕುಲಸಚಿವರಾಗಿದ್ದಾಗ ಮಾಹಿತಿ ಹಕ್ಕು ಅಧಿನಿಯಮ ದುರುಪಯೋಗ- ಅರ್ಜಿದಾರನಿಗೆ ಮಾಹಿತಿ ಪೂರೈಕೆ, ವಿವಿ ಆಡಳಿತಕ್ಕೆ ಸಂಬಂಧವಿರದ ವ್ಯಕ್ತಿಗಳಿಗೆ ತಮ್ಮ ಕಚೇರಿ ಪ್ರವೇಶಕ್ಕೆ ಅವಕಾಶ- ಕಾರ್ಯಾಲಯದ ದುರುಪಯೋಗ, ವೈಯಕ್ತಿಕ ಕೆಲಸಕ್ಕೆ ವಾಹನ ಬಳಸಿ ವಿಜಯಪುರದಲ್ಲಿ ಅಪಘಾತವಾಗಿದ್ದರೂ ಧಾರವಾ ಡದಲ್ಲಿ ಅಪಘಾತವಾಗಿದೆ ಎಂದು ಲಿಖಿತ ಹೇಳಿಕೆ ನೀಡಿರುವುದು, ದಾಖಲೆಗಳಿಲ್ಲದೇ ನನ್ನ ವಿರುದ್ಧ ಗಂಭೀರ ಆರೋಪ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದವು. ಈ ವರದಿಯನ್ನು ಆಧರಿಸಿ ಫೆ. 12ರಂದು ಜರುಗಿದ ಸಿಂಡಿಕೇಟ್ ಸಭೆಯು ಅಮಾನತು ನಿರ್ಧಾರ ಕೈಗೊಂಡಿದೆ. ನಿವೃತ್ತ ನ್ಯಾಯಾಧೀಶ ಬಿ.ಎ. ಮುಚ್ಚಂಡಿ ಅವರಿಂದ ವಿಸõತ ತನಿಖೆಗೆ ಕೋರಲಾಗಿದ್ದು, 1 ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ಪ್ರೊ. ಗಾಯಿ ತಿಳಿಸಿದರು. ಡಿಎನ್ಎ ಸೆಂಟರ್ನಲ್ಲಿ ಅವ್ಯವಹಾರವಾಗಿದೆ ಎಂದು ಪ್ರೊ. ಹೊಸಮನಿ ಮಾಧ್ಯಮಗಳಿಗೆ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು. ಗೋಷ್ಠಿಯಲ್ಲಿ ಕವಿವಿ ಕುಲಸಚಿವರಾದ ಡಾ. ವಿಜಯಲಕ್ಷ್ಮೀ ಅಮ್ಮಿನಭಾವಿ, ಡಾ. ಎನ್.ಎಂ. ಸಾಲಿ, ಹಣಕಾಸು ಅಧಿಕಾರಿ ಆರ್.ಎಲ್. ಹೈದರಾಬಾದ್, ಡಾ. ಮಹದೇವಪ್ಪ ಕರಿದುರ್ಗಣ್ಣವರ, ಇತರರಿದ್ದರು.
ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ
ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದು ಕುಲಪತಿ ಪ್ರೊ. ಪ್ರಮೋದ ಗಾಯಿ ತಿಳಿಸಿದರು. 2015ರ ಜೂನ್ನಲ್ಲಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದಾಗ ವಿಶ್ವವಿದ್ಯಾಲಯದ ಆಡಳಿತ, ಹಣಕಾಸಿನ ಸ್ಥಿತಿ ಗಂಭೀರ ಸ್ಥಿತಿಯಲ್ಲಿತ್ತು. ಇದೆಲ್ಲದರ ಸುಧಾರಣೆಗೆ ಶ್ರಮಿಸಿದ್ದೇನೆ. ನಿವೃತ್ತಿಯಾದ ದಿನದಂದೇ ನೌಕರರಿಗೆ ಸಂಪೂರ್ಣ ಪೆನ್ಷನ್ ಕೊಡುವ ವ್ಯವಸ್ಥೆ ತರಲಾಯಿತು. ಕಾರ್ಯಕ್ರಮಗಳ ವಾರ್ಷಿಕ ಕ್ಯಾಲೆಂಡರ್
ರಚಿಸಿ 45- 50 ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಅಭಿವೃದ್ಧಿ ಅನುದಾನ ಕಳೆದ ವರ್ಷ 86 ಲಕ್ಷ ರೂ. ಬಂದರೆ ಈ ಬಾರಿ 50 ಲಕ್ಷ ರೂ. ಬಂದಿದೆ. ಹೀಗಾಗಿ ವೇಮನ ಮತ್ತು ಶಾಹು ಮಹಾರಾಜ ಪೀಠಗಳ ಸ್ಥಾಪನೆ ಕಾರ್ಯ ವಿಳಂಬವಾಗಿದೆ. 289 ಬೋಧಕ, 813 ಬೋಧಕೇತರ ಹುದ್ದೆಗಳು ಖಾಲಿ ಇವೆ. ನೇಮಕಾತಿ ನಿಂತಿದ್ದು, ಅತಿಥಿ ಉಪನ್ಯಾಸಕರ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ. ಕವಿವಿ ಆಸ್ತಿಯ ಅತಿಕ್ರಮಣ ಸರ್ವೆ ಕಾರ್ಯ ಮುಗಿಸಲಾಗುವುದು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.