More

    ಕವಿತೆಗೆ ಬೇಕು ಮಾನವ ತುಡಿತ -ಸಾಹಿತಿ ಲೋಕೇಶ ಅಗಸನಕಟ್ಟೆ – ಧರಣಿಮಂಡಲ ಕೃತಿ ಬಿಡುಗಡೆ

    ದಾವಣಗೆರೆ: ಕವಿತೆಗಳಲ್ಲಿ ವಸ್ತುವಿಗಿಂತ ಮಾನವ ತುಡಿತ, ಜೀವ ಕಾರುಣ್ಯದ ಸೆಲೆಗೆ ಆದ್ಯತೆ ನೀಡಬೇಕು ಎಂದು ಸಾಹಿತಿ ಡಾ. ಲೋಕೇಶ ಅಗಸನಕಟ್ಟೆ ತಿಳಿಸಿದರು.
    ನೀವು-ನಾವು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ, ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಮೈಸೂರಿನ ಕನ್ನಡ ಉಪನ್ಯಾಸಕ ವೆಂಕಟ್ರಮಣ ಬೆಳಗೆರೆ ಅವರ ‘ಧರಣಿಮಂಡಲ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
    ಶಬ್ದ ಮತ್ತು ನಾದ ಸಮ್ಮಿಶ್ರಣವೇ ಕಾವ್ಯ. ಪದ್ಯ ಮತ್ತು ಗದ್ಯಗಳಿರುವುದೂ ಕೂಡ ಕಾವ್ಯವೇ ಆಗಿದೆ ಎಂದು ಹೇಳಿದ ಅವರು, ಕೃತಿಯಲ್ಲಿ ಆಲೋಚನೆ ಮತ್ತು ದೃಷ್ಟಿಕೋನ ಎಂಬ ಆಕೃತಿಗಳೂ ಒಳಗೊಂಡಿರಬೇಕು ಎಂದರು.
    ಎಲ್ಲ ಕೃತಿಗಳು ಅಮೂಲ್ಯ ಆಗಿರಬೇಕು ಎಂದೇನಿಲ್ಲ. ಕುವೆಂಪು, ಗೋಪಾಲಕೃಷ್ಣ ಅಡಿಗ, ದ.ರಾ.ಬೇಂದ್ರೆ, ನಿಸಾರ್ ಅಹಮದ್ ಅವರ ಕೆಲವು ಕೃತಿಗಳು, ಪದ್ಯಗಳು ಎಲ್ಲರ ಹೃದಯದಲ್ಲಿ ಉಳಿದಿವೆ. ಕವಿ ಅಥವಾ ಲೇಖಕ ಉಳಿಯಲು ಒಂದು ಕ್ರಿಯೆ ಸಾಕು ಎಂದು ತಿಳಿಸಿದರು.
    ಸಾಹಿತಿ ಮತ್ತು ಸಾಹಿತ್ಯ ನಮ್ಮ ವ್ಯಕ್ತಿತ್ವ ಬದಲಾಯಿಸಬೇಕು. ಮಾನವೀಯತೆಯನ್ನು ಜಾಗೃತಗೊಳಿಸಬೇಕು. ಸಾಹಿತ್ಯದ ಓದು ಕೆಲವು ಗಂಟೆಗಳಿಗಾದರೂ ಹೊಸತನದ ಅನುಭವ ನೀಡಬೇಕು. ಹಾಗಾದಾಗ ಅದಕ್ಕೆ ಶಕ್ತಿ ಇದೆ ಎಂಬುದು ವ್ಯಕ್ತವಾಗುತ್ತದೆ ಎಂದು ಹೇಳಿದರು.
    ಕವಿ, ಸಾಹಿತಿ, ರಾಜಕಾರಣಿ ಎಲ್ಲರನ್ನೂ ತಲುಪಬೇಕು. ಯಾವುದೋ ಕಾರಣಕ್ಕೆ ದ್ವೀಪಗಳಂತಾಗಿ, ಸಂಬಂಧಗಳಿಂದ ದೂರವಾಗಿ ಅಂತರ್ಮುಖಿ ಆಗುತ್ತಿದ್ದೇವೆ. ಸಾಹಿತಿ ಸೇರಿ ಎಲ್ಲರ ಜೀವನದಲ್ಲೂ ಚಲನಶೀಲತೆ ಇಲ್ಲವಾದಲ್ಲಿ ಸಾವಿಗೆ ಸಮ ಎಂದು ತಿಳಿಸಿದರು.
    ಕವಿ ಸಂತೆಬೆನ್ನೂರು ಫೈಜಟ್ರಾಜ್ ಮಾತನಾಡಿ ಕಥೆ, ಕಾದಂಬರಿಗಳು ಮಾರಾಟವಾಗುತ್ತವೆ. ಆದರೆ ಕವನ ಸಂಕಲನಗಳು ಮಾರಾಟವಾಗದೇ ಕೊನೆಗೂ ಉಳಿಯುತ್ತವೆ. ಕಥೆ ಓಡುತ್ತದೆ, ನಾಟಕ ತೆವಳುತ್ತವೆ. ಆದರೆ ಕಾವ್ಯ ಎಲ್ಲರ ಹೃದಯದಲ್ಲಿ ನಿಲ್ಲುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.
    ಕಾವ್ಯ ಪ್ರಪಂಚದಲ್ಲಿ ನಿತ್ಯ 35ರಿಂದ 60 ಬಿಡುಗಡೆಯಾಗುತ್ತವೆ, ಇದರಲ್ಲಿ ಶೇ.18ರಷ್ಟು ಮಾತ್ರ ಶಬ್ದ ಮತ್ತು ಅರ್ಥವನ್ನು ನೀಡುತ್ತವೆ. ಅರ್ಥ ಕೊಡದೆ ಬರಿಯ ಶಬ್ದ ಮಾಡುವ ಕಾವ್ಯಗಳು ಉಳಿಯುವುದಿಲ್ಲ. ಕವಿಯ ಕಾವ್ಯ ಮತ್ತೊಬ್ಬರದು ಎನಿಸಿಕೊಂಡಾಗ ಮಾತ್ರ ಸಾರ್ಥಕ ಪಡೆಯುತ್ತದೆ ಎಂದರು.
    ಕನ್ನಡ ಉಪನ್ಯಾಸಕಿ ಅರುಣಕುಮಾರಿ ಬಿರಾದರ ಮಾತನಾಡಿ ಕನ್ನಡ ಉಪನ್ಯಾಸಕರಿಗೂ ಬೋಧನೆಯಾಚೆಗೂ ಸಮಾಜವನ್ನು ಕಟ್ಟುವ, ನೈತಿಕತೆ ಉಳಿಸುವ ಸಾಮಾಜಿಕ ಜವಾಬ್ದಾರಿ ಇದೆ. ಆದರೆ ಪರಿಧಿ ದಾಟದೇ ಸಾಂಸ್ಕೃತಿಕವಾಗಿ ಮಂಪರು ಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.
    ಕವಿಗೆ ಅಧ್ಯಾಪನ ಹಾಗೂ ಅನುಭವ ಎರಡೂ ಇದ್ದಾಗ ಕಾವ್ಯ ಸುಂದರವಾಗಲಿದೆ. ಕವಿಗೆ ಕನಸುಗಳ ಜತೆಗೇ ಕಟುವಾಸ್ತವತೆಯ ಅರಿವೂ ಇರಬೇಕು ಎಂದು ಪ್ರತಿಪಾದಿಸಿದರು.
    ಬುಡಕಟ್ಟು ಜಾನಪದ ಹಾಡುಗಾರ ಮೋಹನ್‌ಕುಮಾರ್, ಕವನ ಸಂಕಲನದ ಎರಡು ಪದ್ಯಗಳಿಗೆ ರಾಗ ಸಂಯೋಜಿಸಿ ಸ್ಥಳದಲ್ಲೇ ಹಾಡಿ ಗಮನ ಸೆಳೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ವೆಂಕಟ್ರಮಣ ಬೆಳಗೆರೆ ಇದ್ದರು. ನೀವು-ನಾವು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಸ್.ಎಸ್. ಸಿದ್ದರಾಜು ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts