ಕವಿತೆಗಳು ಜನರಿಗೆ ತಲುಪಲು ಚಳವಳಿ ಅಗತ್ಯವಿದೆ: ವಿಮರ್ಶಕ ವಸಂತಕುಮಾರ್ ಪೆರ್ಲ

ದಾವಣಗೆರೆ: ಕವಿತೆಗಳು ಜನರಿಗೆ ತಲುಪಲು ಚಳವಳಿ ಅಗತ್ಯವಿದೆ ಎಂದು ವಿಮರ್ಶಕ ವಸಂತಕುಮಾರ್ ಪೆರ್ಲ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಪ್ರಕೃತಿ ಪ್ರಕಾಶನ, ಗೆಳೆಯರ ಬಳಗ ಸೋಮವಾರ ಆಯೋಜಿಸಿದ್ದ ಏಟ್ಸ್ ಮತ್ತು ನಾನು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಚಳವಳಿಗಳು ಜನರಿಗೆ ಒಂದು ಹಂತದ ಓದುವಿಕೆ, ಸಂಘಟಿಸುವ ಕಾರ್ಯ ಮಾಡುತ್ತದೆ. ಆದ್ದರಿಂದ ಕವಿತೆಗಳಿಗೆ ಚಳವಳಿ ಅಗತ್ಯವಿದೆ ಎಂದು ಹೇಳಿದರು.

ಕವಿತೆ ಆಯಾಕಾಲದ ಜನರ ಆಶಯಗಳಿಗೆ ಧ್ವನಿಯಾಗಬೇಕು. ಆಗ ಮಾತ್ರ ಕವಿತೆ ಗಟ್ಟಿಯಾಗಿ ಉಳಿಯುತ್ತದೆ. ಕವಿತೆಯಲ್ಲಿ ಪ್ರಸ್ತುತ ಬದುಕಿನ ಸಂಕೀರ್ಣತೆ ವ್ಯಕ್ತವಾಗುವಂತಾಗಬೇಕು. ಇದು ಮುಂದಿನ ತಲೆಮಾರಿಗೆ ತಲುಪಬೇಕು. ಯಾವುದೇ ಕಲೆಗಾರ, ಕವಿಗೆ ಕವಿತೆ ಹಂಗಿತೆ ಹೊರತು ಕಾಲದ ಹಂಗಿಲ್ಲ ಎಂದು ಹೇಳಿದರು.

ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಏಟ್ಸ್ 20ನೇ ಶತಮಾನದ ದೊಡ್ಡ ಕವಿ. ಪ್ರೇಮ ವಿಫಲದ ನೋವು ಅನುಭವಿಸಿದ ಏಟ್ಸ್, ನೂರಾರು ಕವಿತೆ ಬರೆದ. ಭಾವತೀವ್ರತೆ ಇದ್ದಾಗ ಮಾತ್ರ ಅದ್ಭುತ ಕವಿತೆಗಳು ಹೊರಬರಲು ಸಾಧ್ಯವಿದೆ ಎಂದರು.

ಲೇಖಕ ಕೊಡಗನೂರು ಪ್ರಕಾಶ, ವಿಮರ್ಶಕ ಸತೀಶ ಕುಲಕರ್ಣಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಸುರೇಂದ್ರನಾಯ್ಕ್, ಸಂಘಟಕ ಎನ್.ಪಿ.ನಾಗರಾಜ್ ಇತರರಿದ್ದರು.

Leave a Reply

Your email address will not be published. Required fields are marked *