ಕಳ್ಳರ ಹಿಡಿದ ಮುಖ್ಯಪೇದೆ, ಗ್ರಾಮಸ್ಥರಿಗೆ ಸನ್ಮಾನ

ಹಳಿಯಾಳ: ಕಳೆದ ತಿಂಗಳು ಪಟ್ಟಣದಲ್ಲಿ ಸರಣಿ ಕಳ್ಳತನ, ದರೋಡೆ, ಹಲ್ಲೆ ಮಾಡಿ ಆತಂಕ ಸೃಷ್ಟಿಸಿದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಹಿಡಿದ ಹಳಿಯಾಳ ಠಾಣೆಯ ಮುಖ್ಯಪೇದೆ ಹಾಗೂ ಅಜಗಾಂವ, ಕೆಸರೊಳ್ಳಿ ಗ್ರಾಮಸ್ಥರನ್ನು ಸನ್ಮಾನಿಸಿದ ಅಪರೂಪದ ಕಾರ್ಯಕ್ರಮ ಮಿನಿ ವಿಧಾನಸೌಧದಲ್ಲಿ ಬುಧವಾರ ಜರುಗಿತು.

ಪಟ್ಟಣದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಮಾತನಾಡಿ, ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಅಪರಾಧಗಳನ್ನು ತಡೆಗಟ್ಟಬಹುದು ಎಂಬುದನ್ನು ಗ್ರಾಮಸ್ಥರು ಹಾಗೂ ಠಾಣೆಯ ಪೊಲೀಸರು ಸಾಬೀತು ಮಾಡಿದ್ದಾರೆ ಎಂದರು.

ಸನ್ಮಾನ: ಬೈಕ್ ಮೇಲೆ ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನೆಟಿ ಹಿಡಿದ ಅಪರಾಧ ವಿಭಾಗದ ಮುಖ್ಯಪೇದೆ ಅಶೋಕ ಹುಬ್ಬಳ್ಳಿ, ಕಳ್ಳರನ್ನು ಹಿಡಿಯಲು ಸಹಕರಿಸಿದ ಗ್ರಾಮಸ್ಥರಾದ ಮಹಾಂತೇಶ ವಾಲೇಕರ, ದಿನೇಶ ವಾಲೇಕರ, ಮಹಾಬಳೇಶ್ವರ ವಡ್ಡರ, ದೇವೇಂದ್ರ ಹುಲಮನಿ, ಮಂಜುನಾಥ ಮಳಗಿ ಹಾಗೂ ಲಕ್ಷ್ಮಣ ಗೌಡ ಅವರನ್ನು ಸನ್ಮಾನಿಸಲಾಯಿತು. ಸಿಪಿಐ ಸುಂದರೇಶ ಹೊಳೆಣ್ಣನವರ, ಉಪನ್ಯಾಸಕ ಕಡೇಮನಿ, ಪತ್ರಕರ್ತ ಪ್ರಸಾದ ವಜೆ ಮಾತನಾಡಿದರು.

ರಾಜು ದೂಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಿ.ಎಂ. ಸಾವಂತ, ಪ್ರಸಾದ ಹುಣ್ಸವಾಡಕರ, ಅಶೋಕ ಕಣೆಮಹಳ್ಳಿ, ಬಸವರಾಜ ಬೆಂಡಿಗೇರಿ, ಮಂಗಲಾ ಕಶೀಲಕರ, ಓರ್ವಿಲ್ ಫರ್ನಾಂಡೀಸ್, ಶಾಂತಾ ಹಿರೇಕರ, ಭಾರತಿ ಬಿರ್ಜೆ ಪಾಲ್ಗೊಂಡಿದ್ದರು. ಜಿ.ಡಿ. ಗಂಗಾಧರ ಹಾಗೂ ಸೈಫ್ ಕಾರ್ಯಕ್ರಮ ನಿರ್ವಹಿಸಿದರು.