ಕಳ್ಳರ ಕಾಟಕ್ಕೆ ವಾಹನ ಸವಾರರು ತತ್ತರ

ಮಾಗಡಿ: ಸಾವನದುರ್ಗ, ಮಂಚನಬೆಲೆ ಜಲಾಶಯ ಪ್ರಮುಖ ಪ್ರವಾಸಿ ತಾಣಗಳಾಗಿದ್ದು, ವಿ.ಜಿ.ದೊಡ್ಡಿ ಗ್ರಾಮದಿಂದ ಹಾದುಹೋಗಿರುವ ರಸ್ತೆಯಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿದೆ.

ಈ ಮಾರ್ಗದ 9 ಕಿ.ಮೀ. ದೂರ ಅರಣ್ಯ ಪ್ರದೇಶದಲ್ಲಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತದೆ. ಮೋಜು ಮಸ್ತಿಗಾಗಿ ಎಲ್ಲಿಂದಲೋ ಬರುವ ಪ್ರವಾಸಿಗರು ಅಮಲಿನಲ್ಲಿ ಏಕಾಏಕಿ ಬೈಕ್​ಗಳನ್ನು ತಡೆದು ಸವಾರರ ಮೇಲೆ ಹಲ್ಲೆ ಮಾಡಿ ಹಣ ದೋಚುವುದು ನಡೆಯುತ್ತಿದೆ. ಕತ್ತಲೆ ಆವರಿಸಿರುವುದರಿಂದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಈ ಜಾಗ ಕಳ್ಳರಿಗೆ ಹೇಳಿ ಮಾಡಿಸಿದಂತಿದೆ.

ಕಾಡುಪ್ರಾಣಿಗಳು ಸಂಚರಿಸುವುದರಿಂದ ಈ ರಸ್ತೆಯಲ್ಲಿ ಕಾರು ಅಥವಾ ದೊಡ್ಡ ವಾಹನಗಳಲ್ಲಿ ಬಂದರೆ ಮಾತ್ರ ಕ್ಷೇಮವಾಗಿ ಮನೆ ತಲುಪಬಹುದಾಗಿದೆ.

ಮಂಚನಬೆಲೆ ಜಲಾಶಯ ತಾವರೆಕೆರೆ ಠಾಣಾ ವ್ಯಾಪ್ತಿಗೆ ಬರುತ್ತದೆ. ಈ ಠಾಣಾ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದ್ದು, ಮಾಗಡಿ ಠಾಣೆ ವ್ಯಾಪ್ತಿಯ ಗಡಿಯೂ ಹೊಂದಿಕೊಂಡಿರುವುದರಿಂದ ತಾವರೆಕೆರೆ ಪೊಲೀಸರು ಇಲ್ಲಿಗೆ ಬರುವುದು ಕಡಿಮೆ. ಇದನ್ನೇ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ. ಬೇರೆಡೆಯಿಂದ ಬರುವ ಯುವಕರು ಈ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವುದರಿಂದಲೂ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಜಾ ದಿನಗಳಲ್ಲಿ ಹೆಚ್ಚು ಪ್ರವಾಸಿಗರು: ಮಂಚನಬೆಲೆ ಮತ್ತು ಸಾವನದುರ್ಗಕ್ಕೆ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂಟಿ ಪ್ರಯಾಣಿಕರಿರುವ ವಾಹನಗಳನ್ನು ಸಂಚುಹಾಕಿ ತಡೆಯುವ ಕಿಡಿಗೇಡಿಗಳು ಕಳ್ಳತನ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ರಸ್ತೆಯಲ್ಲಿ ವೀಲಿಂಗ್ ಮಾಡುವುದು, ರಸ್ತೆ ಮಧ್ಯೆ ನಿಂತು ಸೆಲ್ಪಿ ತೆಗೆದುಕೊಳ್ಳುವುದು, ಮನಸೋ ಇಚ್ಛೆ ಆಟವಾಡುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಕಳ್ಳರ, ಪುಂಡರ ಹಾವಳಿಗೆ ಕಡಿವಾಣ ಹಾಕಲು ಈ ರಸ್ತೆಯಲ್ಲಿ ಸಂಜೆ ವೇಳೆ ಕಡ್ಡಾಯವಾಗಿ ವಾಹನಗಳ ತಪಾಸಣೆ ಹಾಗೂ ಗಸ್ತು ಹಾಕಲು ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರಾದ ಚಂದ್ರಶೇಖರ್, ಅಂಬರೀಷ್, ಶಿವಕುಮಾರ್, ಗೋಪಿ, ಆನಂದ್ ಮತ್ತಿತರರು ಒತ್ತಾಯಿಸಿದ್ದಾರೆ.

ಸಮಸ್ಯೆ ಬಗ್ಗೆ ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ರಜಾದಿನಗಳಲ್ಲಿ ತಾವರೆಕೆರೆ ಠಾಣೆಯಿಂದ ಸಿಬ್ಬಂದಿ ನಿಯೋಜಿಸಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಸಾವನದುರ್ಗ ಅರಣ್ಯ ಪ್ರದೇಶ ವ್ಯಾಪ್ತಿ ವಿಸ್ತಾರವಾಗಿದ್ದು, ತೊಂದರೆಯಾದ ಕೂಡಲೇ ಮಾಹಿತಿ ನೀಡಿದರೆ ಕಳ್ಳರ ಹಾವಳಿಗೆ ಕಡಿವಾಣ ಹಾಕಬಹುದು.

| ರವಿಕುಮಾರ್, ಮಾಗಡಿ ವೃತ್ತ ನಿರೀಕ್ಷಕ

Leave a Reply

Your email address will not be published. Required fields are marked *