ಕಳ್ಳಬಟ್ಟಿ ತಯಾರಿಕೆ ಬೇಕಾಬಿಟ್ಟಿ!

ಗಿರೀಶ ಪಾಟೀಲ ಜೊಯಿಡಾ

ತಾಲೂಕಿನ ರಾಮನಗರದ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ದಂಧೆಗೆ ಗೋವಾ ಹೆದ್ದಾರಿ ಮಾರ್ಗ ಬಂದ್ ಆಗಿರುವುದರಿಂದ ಒಂದಿಷ್ಟು ಕಡಿವಾಣ ಬಿದ್ದಿಗೆ ಎಂದು ಭಾವಿಸಲಾಗಿತ್ತು. ಆದರೆ, ಸ್ಥಳೀಯವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಈಗ ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದೆ. ಇದು ಇಲ್ಲಿನ ಹಲವಾರು ಕುಟುಂಬಗಳನ್ನು ಬೀದಿಗೆ ತಳ್ಳುವಂತೆ ಮಾಡಿದೆ.

ಎಲ್ಲಿ ಕಳ್ಳಬಟ್ಟಿ ತಯಾರಿ: ಅಖೇತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಲಿನ ಹಾಗೂ ಕೆಳಗಿನ ಮಾರಸಂಗಳ ಎಂಬ ಎರಡು ಊರುಗಳಿವೆ. ಸ್ಥಳೀಯರು ಮಾಹಿತಿಯ ಪ್ರಕಾರ, ಎಲ್ಲ ಅಕ್ರಮ ಸಾರಾಯಿ ದಂಧೆ ನಡೆಯುತ್ತಿರುವುದು ಮೇಲಿನ ಮಾರಸಂಗಳದಲ್ಲಿ. ಅದು ಕೂಡ ನಾಲ್ಕೈದು ಜನರಿಂದ ಮಾತ್ರ. ಮಾರಸಂಗಳ ಊರಿಗೆ ಹತ್ತಿರದಲ್ಲಿರುವ ಕಾಡಿನಲ್ಲಿ ಎರಡು ಕಡೆ ಸಾರಾಯಿ ಬಟ್ಟಿ ತಯಾರಿಸುವ ಕೆಲಸ ನಡೆಯುತ್ತಿದೆ.

ಕಳ್ಳ ಬಟ್ಟಿ ಸಾರಾಯಿ ತಯಾರಿ ಹೇಗೆ: ನೀರು, ಬೆಲ್ಲ ಜತೆಗೆ ನವಸಾಗರ, ಸಲ್ಪೇಟ್ ರಾಸಾಯನಿಕ ಮಿಶ್ರಣ ಮಾಡಿ ಏಳು ದಿನ ಕೊಳೆಯಲು ಬಿಡಲಾಗುತ್ತದೆ. ನಂತರ ಹಳ್ಳದ ಪಕ್ಕದಲ್ಲಿ ನಿರ್ವಿುಸಿದ ಚಿಕ್ಕ ಗೂಡಿನಲ್ಲಿ ಒಲೆ ಹಚ್ಚಿ ಕುದಿಸಿ ಬೆಲ್ಲದ ಕೊಳೆಯಿಂದ ಸಾರಾಯಿ ಬಟ್ಟಿ ಇಳಿಸಲಾಗುತ್ತದೆ. ಒಂದು ಕೆ.ಜಿ. ಬೆಲ್ಲದಿಂದ 1.5 ಲೀ ಸಾರಾಯಿ ತೆಗೆಯಬಹುದು. ಇಲ್ಲಿ ಒಂದು ಅಡ್ಡೆಯಿಂದ ನಿತ್ಯ 25 ರಿಂದ 50 ಲೀ ಸಾರಾಯಿ ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನಮ್ಮ ಜನರಿಗೆ ಸಾರಾಯಿ ಮಾರಾಟ ಮಾಡದಂತೆ ಕಳ್ಳ ಬಟ್ಟಿ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ, ಅವರು ನಮಗೇ ಬೆದರಿಕೆ ಹಾಕುತ್ತಾರೆ. ನೀವು ಏನು ಮಾಡ್ತಿರೋ ಮಾಡಿಕೊಳ್ಳಿ, ನಾವು ಎಲ್ಲರಿಗೂ ತಿಂಗಳ ಹಫ್ತಾ ಕೊಡ್ತೇವೆ ಎಂದು ಮಾರಾಟಗಾರರು ದರ್ಪದಿಂದ ಹೇಳುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

ಇಲಾಖೆಗಳ ನಿರ್ಲಕ್ಷ್ಯ ರಾಮನಗರ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಸಾರಾಯಿ ದಂಧೆ ನಿಲ್ಲಿಸುವಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಇಲ್ಲಿ ಗೋವಾ ಸಾರಾಯಿ ಮಾರಾಟಕ್ಕಿಂತಲೂ ಹೆಚ್ಚು ಸ್ಥಳೀಯವಾಗಿ ಕಡಿಮೆ ದರದಲ್ಲಿ ಸಿಗುವ ಕಳ್ಳಬಟ್ಟಿ ಸಾರಾಯಿ ಮಾರಾಟ ಜೋರಾಗಿದೆ. ಪ್ರತಿದಿನ ಲಕ್ಷಾಂತರ ರೂ. ಮೌಲ್ಯದ ಸಾರಾಯಿ ವ್ಯವಹಾರ ರಾಮನಗರ ಭಾಗದಲ್ಲಿ ನಡೆಯುತ್ತಿದೆ. ಇಲ್ಲಿನ ಕಾಡಿನೊಳಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಸಿಬ್ಬಂದಿ ತಮ್ಮ ಬೀಟ್ ತಿರುಗದೆ ಮನೆಯಲ್ಲಿ ಕುಳಿತು ಅರಣ್ಯ ರಕ್ಷಣೆ ಮಾಡುತ್ತಾರಾ ಎಂಬುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕು. ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕಳ್ಳಬಟ್ಟಿ ಸಾರಾಯಿ ಅಕ್ರಮ ವಹಿವಾಟು ನಿಲ್ಲಿಸಬೇಕು. ಇಲ್ಲದಿದ್ದರೆ ಇನ್ನಷ್ಟು ಕುಟುಂಬಗಳು ಬೀದಿಗೆ ಬೀಳುವುದು ನಿಚ್ಚಿತ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</